ADVERTISEMENT

ಟಾಪ್ 5 ಕಾಂಗ್ರೆಸ್ ಶಾಸಕರು ಬಿಜೆಪಿ ಬರಲು ತಯಾರಿದ್ದಾರೆ: ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 13:47 IST
Last Updated 14 ಫೆಬ್ರುವರಿ 2021, 13:47 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಳಗಾವಿ: ‘ಕಾಂಗ್ರೆಸ್‌ನ ಪ್ರಮುಖ ಐವರು ಶಾಸಕರು ಬಿಜೆಪಿಗೆ ಬರಲು ತಯಾರಿದ್ದಾರೆ. ನಾನು ಮನಸ್ಸು ಮಾಡಿದರೆ 24 ಗಂಟೆಯಲ್ಲಿ ರಾಜೀನಾಮೆ ಕೊಡಿಸಿ ಅವರನ್ನು ಕರೆತರುತ್ತೇನೆ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

ಬಿಜೆಪಿ ಗ್ರಾಮೀಣ ಮಂಡಲದಿಂದ ನಗರದ ಸಿಪಿಇಡಿ ಮೈದಾನದಲ್ಲಿ ಭಾನುವಾರ ನಡೆದ ಗ್ರಾಮೀಣ ಮತಕ್ಷೇತ್ರದ ಗ್ರಾಮ ಪಂಚಾಯ್ತಿಗಳ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್‌ನಲ್ಲಿ ಟಾಪ್ 1ರಿಂದ 5ರಲ್ಲಿರುವ ಶಾಸಕರನ್ನು ಕರೆ ತರುತ್ತೇನೆ. ಅವರ ಹೆಸರು ಕೇಳಿದರೆ ಎಲ್ಲರೂ ಗಾಬರಿಯಾಗುತ್ತಾರೆ. ಯಾರೂ ನಂಬಲು ಸಾಧ್ಯವಿಲ್ಲ. ಅಂತಹ ಮಹಾನ್ ನಾಯಕರು ಬರುವುದಕ್ಕೆ ಸಿದ್ಧವಿದ್ದಾರೆ’ ಎಂದರು.

ADVERTISEMENT

‘ಬಿಜೆಪಿಯಲ್ಲಿ ಸಂತೋಷ ಮತ್ತು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದೇನೆ. ನನ್ನೊಂದಿಗೆ ಬಂದವರು ಕೂಡ ಖುಷಿಯಾಗಿದ್ದಾರೆ. ಗಟ್ಟಿಯಾಗಿದ್ದೇವೆ. ಕಾಂಗ್ರೆಸ್‌ನಲ್ಲಿ 20 ವರ್ಷ ಇದ್ದೆ. ನನ್ನನ್ನು ಮೂಲೆಯಲ್ಲಿ ಕೂರಿಸುತ್ತಿದ್ದರು. ಕೇಳುವವರು ದಿಕ್ಕಿರಲಿಲ್ಲ. ಬಿಜೆಪಿಯಲ್ಲಿ ಬಹಳ ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ. ಸೇರಿ ವರ್ಷವಾದರೂ ಅಮಿತ್ ಶಾ ಅವರಿಂದ ಹಿಡಿದು ಮುಖ್ಯಮಂತ್ರಿವರೆಗೆ ಎಲ್ಲರೂ ಪ್ರೀತಿಯಿಂದ ಮಾತನಾಡಿಸುತ್ತಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಕಾಂಗ್ರೆಸ್‌ಗೆ ಮರಳುವುದಿಲ್ಲ’ ಎಂದು ಹೇಳಿದರು.

‘ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ನಮಗೆ ಈಗಲೂ ನಾಯಕ. ದಿನವೂ 2 ಬಾರಿ ಅವರೊಂದಿಗೆ ಮಾತನಾಡುತ್ತೇನೆ. ಆದರೆ, ಪಕ್ಷದ ವಿಚಾರ ಬಂದಾಗ ಪ್ರಾಮಾಣಿಕ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. 2023ರ ಚುನಾವಣೆಯಲ್ಲೂ ಬಿಜೆಪಿ ಸರ್ಕಾರ ರಚನೆಗೆ ದೃಢ ಸಂಕಲ್ಪ ಮಾಡಿದ್ದೇವೆ. ಅತಿ ಶೀಘ್ರವೇ ಮುಖ್ಯಮಂತ್ರಿ ಆಹ್ವಾನಿಸಿ ದೊಡ್ಡ ಸಮಾವೇಶ ನಡೆಸಲಾಗುವುದು. ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯ ವಿಜಯ ಪತಾಕೆ ಹಾರಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.