ADVERTISEMENT

ಬೆಳಗಾವಿ | ಹಣಕ್ಕಾಗಿ ಬ್ಲ್ಯಾಕ್‌ಮೇಲ್‌: ಯೂಟ್ಯೂಬ್‌ ಚಾನೆಲ್‌ನ ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 16:34 IST
Last Updated 29 ಜುಲೈ 2020, 16:34 IST
   

ಬೆಳಗಾವಿ: ವ್ಯಕ್ತಿಯೊಬ್ಬರಿಂದ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಆರೋಪದ ಮೇಲೆ ಮೂವರು ಮಹಿಳೆಯರು ಸೇರಿದಂತೆ ಐವರನ್ನು ಇಲ್ಲಿನ ಮಾಳಮಾರುತಿ ಠಾಣೆ ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ.

ರಾಮದುರ್ಗದ ಸದಾಶಿವ ಚಿಪ್ಪಲಕಟ್ಟಿ, ಅಥಣಿಯ ರಘುನಾಥ ಧುಮಾಳೆ, ಸವದತ್ತಿಯ ಗೌರಿ ಲಮಾಣಿ, ಮಂಜುಳಾ ಜತ್ತೆನ್ನವರ, ಸಂಗೀತಾ ಹಣಕಿಕೊಪ್ಪ ಬಂಧಿತ ಆರೋಪಿಗಳು. ಅವರಿಂದ ‘ಪ್ರೈಮ್ ನ್ಯೂಸ್‌ ಯೂಟ್ಯೂಬ್ ಚಾನೆಲ್‌’ ಎಂದು ನಮೂದಿಸಿರುವ ಗುರುತಿನ ಚೀಟಿಗಳು ಹಾಗೂ ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

‘ಇವರು ಜಮಖಂಡಿಯ ವ್ಯಕ್ತಿಯೊಬ್ಬರನ್ನು ಪುಸಲಾಯಿಸಿ ಇಲ್ಲಿನ ನೆಹರೂ ನಗರದ ಹೋಟೆಲ್‌ಗೆ ಕರೆಸಿಕೊಂಡು, ಹನಿಟ್ರ್ಯಾಪ್‌ ಮಾದರಿಯಲ್ಲಿ ಬಲೆಗೆ ಬೀಳಿಸಿಕೊಳ್ಳಲು ಯತ್ನಿಸಿದ್ದರು. ಸಲಗೆಯಿಂದ ಮಾತನಾಡಿದ ಆಡಿಯೊ ಹಾಗೂ ಹೋಟೆಲ್‌ನ ಕೊಠಡಿಯಲ್ಲಿ ಮಹಿಳೆಯರೊಂದಿಗೆ ಇರುವ ವಿಡಿಯೊ ಪ್ರಸಾರ ಮಾಡುವುದಾಗಿ ಬೆದರಿಗೆ ಒಡ್ಡಿದ್ದರು. ₹ 10 ಲಕ್ಷ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಕೊನೆಗೆ ₹ 5 ಲಕ್ಷಕ್ಕೆ ವ್ಯವಹಾರ ಕುದುರಿಸಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು. ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಮಾರ್ಕೆಟ್ ಉಪ ವಿಭಾಗದ ಎಸಿ‍ಪಿ ನಾರಾಯಣ ಭರಮನಿ ಹಾಗೂ ಇನ್‌ಸ್ಪೆಕ್ಟರ್‌ ಬಿ.ಆರ್. ಗಡ್ಡೇಕರ ನೇತೃತ್ವದಲ್ಲಿ ದಾಳಿ ನಡೆದಿದೆ.

ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.