ADVERTISEMENT

ಬೆಳಗಾವಿ | ಅಂಬಾರಿ ಮೇಲೆ ತ್ರಿವರ್ಣ ಧ್ವಜ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 23:15 IST
Last Updated 13 ಆಗಸ್ಟ್ 2022, 23:15 IST
ಕಾಗವಾಡದಲ್ಲಿ ಶನಿವಾರ ಆನೆಯ ಮೇಲೆ ಅಂಬಾರಿಯಲ್ಲಿ ಭಾರತ ಮಾತೆಯ ಭಾವಚಿತ್ರ ಹಾಗೂ ತ್ರಿವರ್ಣ ಧ್ವಜ ಮೆರವಣಿಗೆ ನಡೆಸಲಾಯಿತುಪ್ರಜಾವಾಣಿ ಚಿತ್ರ: ವಿಜಯ ಮಹಾಂತೇಶ ಅರಕೇರಿ
ಕಾಗವಾಡದಲ್ಲಿ ಶನಿವಾರ ಆನೆಯ ಮೇಲೆ ಅಂಬಾರಿಯಲ್ಲಿ ಭಾರತ ಮಾತೆಯ ಭಾವಚಿತ್ರ ಹಾಗೂ ತ್ರಿವರ್ಣ ಧ್ವಜ ಮೆರವಣಿಗೆ ನಡೆಸಲಾಯಿತುಪ್ರಜಾವಾಣಿ ಚಿತ್ರ: ವಿಜಯ ಮಹಾಂತೇಶ ಅರಕೇರಿ   

ಕಾಗವಾಡ: ಪಟ್ಟಣದಲ್ಲಿ ಶನಿವಾರ ಆನೆ ಅಂಬಾರಿಯ ಮೇಲೆ ರಾಷ್ಟ್ರಧ್ವಜದ ಮೆರವಣಿಗೆ ಮಾಡುವ ಮೂಲಕ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಭಿಯಾನವನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ತಾಲ್ಲೂಕು ಆಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ, ಆರೋಗ್ಯ ಇಲಾಖೆ, ತೋಟಗಾರಿಕೆ, ಅರಣ್ಯ, ಪೊಲೀಸ್‌ ಇಲಾಖೆ ಹಾಗೂ ಶಿವಾನಂದ ಮಹಾವಿದ್ಯಾಲಯ ಆಶ್ರಯದಲ್ಲಿ ಜರುಗಿದ ಈ ಆಂದೋಲನ ನೋಡಲ ಜನ ಮುಗಿಬಿದ್ದರು.

ಶಾಸಕ ಶ್ರೀಮಂತ ಪಾಟೀಲ ಭಾರತಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಿದರು. ಅಂಬಾರಿ ಹೊತ್ತ ಆನೆಯ ಮೇಲೆ ಭಾರತಾಂಬೆ ಭಾವಚಿತ್ರ ಇರಿಸಲಾಗಿತ್ತು. ಅದರ ಸುತ್ತ ಧ್ವಜ ಕಟ್ಟಿ ಹಾರಿಸಲಾಯಿತು.

ADVERTISEMENT

ಮೆರವಣಿಗೆಯ ಮುಂದೆ ವಿವಿಧ ಕಲಾ ತಂಡಗಳು, ವಾದ್ಯಮೇಳಗಳು ಸಾಗಿದವು. ತಹಶೀಲ್ದಾರ್‌ ರಾಜೇಶ ಬುರ್ಲಿ, ಅಥಣಿ ಸಿಪಿಐ ರವೀಂದ್ರ ನಾಯ್ಕೋಡೆ ತೆರೆದ ವಾಹನದಲ್ಲಿ ನಿಂತು ಸಾರ್ವಜನಿಕರಿಗೆ ಅಮೃತ ಮಹೋತ್ಸವದ ಶುಭಾಷಯ ಸಲ್ಲಿಸಿದರು.

ಎನ್‌ಸಿಸಿ, ಎನ್‌ಎಸ್‌ಎಸ್, ಮಾಜಿ ಸೈನಿಕರು, ವಿವಿಧ ಶಾಲೆ– ಕಾಲೇಜುಗಳ ವಿದ್ಯಾರ್ಥಿಗಳೂ ಪಾಲ್ಗೊಂಡರು. ಮಾರ್ಗದುದ್ದಕ್ಕೂ ದೇಶಭಕ್ತಿ ಗೀತೆಗಳು, ಜೈಕಾರಗಳು ಮೊಳಗಿದವು.

ಮಲ್ಲಿಕಾರ್ಜುನ ಮಹಾವಿದ್ಯಾಲಯದಿಂದ ಪ್ರಾರಂಭವಾದ ಭವ್ಯ ಮೆರವಣಿಗೆಯು ಬಸ್ ನಿಲ್ದಾಣ, ಅಂಬೇಡ್ಕರ್‌ ಭವನ, ಸಂತೂಬಾಯಿ ಮಂದಿರ, ಶಿವಾನಂದ ಕಾಲೇಜು ಸೇರಿದಂತೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಪಿಎಸ್‌ಐ ಬಿ.ಎಂ.ರಬಕವಿ ಹಾಗೂ ಸಿಬ್ಬಂದಿ ವರ್ಗದವರು ಸೂಕ್ತ ಬಂದೋ ಬಸ್ತ್ ವ್ಯವಸ್ಥೆಯನ್ನು ಕೈಗೊಂಡರು. ಕಾರ್ಯಕ್ರಮದ ಅಂಗವಾಗಿ ರಂಗೋಲಿ ಸ್ಪರ್ಧೆ, ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ, ಪೌಷ್ಟಿಕ ಆಹಾರ ಶಿಬಿರ ಕೂಡ ನಡೆದವು.

ಸೌಕರ್ಯ ವಿತರಣೆ: ಸಾರ್ವಜನಿಕ ಸಭೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀಮಂತ ಪಾಟೀಲ ಚಾಲನೆ ನೀಡಿದರು. ಅಂಗವಿಕಲರಿಗೆ ತ್ರಿಚಕ್ರ ವಾಹನ, ಪರಿಶಿಷ್ಟ ಪಂಗಡದವರಿಗೆ ಹೊಲಿಗೆ ಯಂತ್ರ, ಸೌರವಿದ್ಯುತ್‌ ಸಲಕರಣೆ, ಪೌರ ಕಾರ್ಮಿಕರಿಗೆ ಸೋಲಾರ್‌ ದೀಪ,200 ಮಂದಿಗೆ ಪಿಂಚಣಿ, ಅಂಬೇಡ್ಕರ್‌ ಆಶ್ರಯ ಯೋಜನೆಯಡಿ ಸುಮಾರು 18 ಮನೆಗಳ ಮಂಜೂರಾತಿ ಪತ್ರಗಳನ್ನೂ ಅವರು ವಿತರಿಸಿದರು.

ಚನ್ನಮ್ಮ ವೃತ್ತದಿಂದ ಏಕ್ ಸರ್ಕಲ್‌ವರೆಗಿನ ₹ 1.50 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೂ ಅವರು ಭೂಮಿಪೂಜೆ ನೆರವೇರಿಸಿದರು.

ಉಗಾರ ಬುದ್ರುಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣಾಗೌಡ ಪಾಟೀಲ, ದಾದಾ ಪಾಟೀಲ, ರಾಜೇಂದ್ರ ಪೋತದಾರ, ರಾಜೇಶ ಪಾಟೀಲ, ಸುಭಾಷ ಕುರಾಡೆ, ಯೋಗೇಶ ಕುಂಬಾರ, ಪ್ರಫುಲ ಥೋರುಸೆ, ನಂದಿನಿ ಪರಾಕಟೆ, ಮದನ ದೇಶಿಂಗೆ, ಹೀನಾ ಶೇಖ, ರಾಜು ಪಾಟೀಲ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.