ADVERTISEMENT

ದುರಸ್ತಿಯಾಗದ ರಸ್ತೆಗಳು: ಜನರು ಹೈರಾಣ

ಹಲವು ತಾಲ್ಲೂಕುಗಳಲ್ಲಿ ದುಃಸ್ಥಿತಿ; ಕ್ರಮ ವಹಿಸದ ಅಧಿಕಾರಿಗಳು

ಎಂ.ಮಹೇಶ
Published 11 ಡಿಸೆಂಬರ್ 2019, 17:30 IST
Last Updated 11 ಡಿಸೆಂಬರ್ 2019, 17:30 IST
ಸವದತ್ತಿ ತಾಲ್ಲೂಕಿನ ಮುನವಳ್ಳಿ-ಚುಂಚನೂರ ರಸ್ತೆ
ಸವದತ್ತಿ ತಾಲ್ಲೂಕಿನ ಮುನವಳ್ಳಿ-ಚುಂಚನೂರ ರಸ್ತೆ   

ಬೆಳಗಾವಿ: ಜಿಲ್ಲೆಯಲ್ಲಿ ಪ್ರವಾಹ ಮತ್ತು ಧಾರಾಕಾರ ಮಳೆಯಿಂದಾಗಿ ಹಾಳಾದ ರಸ್ತೆಗಳ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಸೇರಿದಂತೆ ಸಂಬಂಧಿಸಿ ಇಲಾಖೆ ಅಥವಾ ಆಯಾ ಸ್ಥಳೀಯ ಸಂಸ್ಥೆಯವರು ಕ್ರಮ ಕೈಗೊಂಡಿಲ್ಲದಿರುವುದರಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಪ್ರವಾಹ ಬಂದು ಬರೋಬ್ಬರಿ 4 ತಿಂಗಳುಗಳೇ ಕಳೆದಿವೆ. ಆದರೂ ಬಹುತೇಕ ರಸ್ತೆಗಳು ದುರಸ್ತಿ ಭಾಗ್ಯ ಕಂಡಿಲ್ಲ. ಇದರಿಂದಾಗಿ ವಾಹನಗಳ ಚಾಲಕರು, ಸವಾರರು ‘ಸರ್ಕಸ್‌’ ಮಾಡಿಕೊಂಡು ಹೋಗಬೇಕಾದ ಸ್ಥಿತಿ ಇದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆಗಳ ಸ್ಥಿತಿ ಚಿಂತಾಜನಕವಾಗಿದೆ. ರಸ್ತೆಗಳಲ್ಲಿ ಗುಂಡಿಗಳಿವೆಯೋ, ಗುಂಡಿಗಳೊಳಗೆ ರಸ್ತೆ ಅಡಗಿದೆಯೋ ಎನ್ನುವ ಅನುಮಾನಗಳು ಬರುವಂಥ ಚಿತ್ರಣವಿದೆ. ಕನಿಷ್ಠ ಮೂಲಸೌಲಭ್ಯವಾದ ರಸ್ತೆಗಳ ಸುಧಾರಣೆಗೆ ಆದ್ಯತೆ ನೀಡಿಲ್ಲದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಅಪಘಾತಕ್ಕೆ ಆಹ್ವಾನ:

ADVERTISEMENT

ಅಥಣಿ, ಕಾಗವಾಡ, ಖಾನಾಪುರ, ಬೈಲಹೊಂಗಲ, ಸವದತ್ತಿ, ರಾಮದುರ್ಗ, ರಾಯಬಾಗ, ನಿಪ್ಪಾಣಿ, ಚಿಕ್ಕೋಡಿ, ಗೋಕಾಕ, ಮೂಡಲಗಿ ಮೊದಲಾದ ತಾಲ್ಲೂಕುಗಳಲ್ಲಿನ ಹೆಚ್ಚಿನ ರಸ್ತೆಗಳು ಹಾಳಾಗಿವೆ. ಜಿಲ್ಲೆಯಲ್ಲಿ ಪ್ರವಾಹ ಹಾಗೂ ಅತಿವೃಷ್ಟಿಯಿಂದಾಗಿ 6755.26 ಕಿ.ಮೀ. ರಸ್ತೆಗಳು ₹ 1,179.39 ಕೋಟಿ ಹಾನಿ ಸಂಭವಿಸಿದೆ ಎಂದು ಜಿಲ್ಲಾಡಳಿತದಿಂದ ಅಂದಾಜಿಸಲಾಗಿತ್ತು.

ಮಳೆಗಾಲ ಮುಗಿದ ನಂತರ ಕೆಲವೇ ಕಡೆಗಳಲ್ಲಿ ದುರಸ್ತಿ ಕಾಮಗಾರಿ ನಡೆದಿದೆ. ಹಾಳಾದ ರಸ್ತೆಗಳಲ್ಲಿ ಜನರು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಆತಂಕದ ಸ್ಥಿತಿ ಇದೆ. ಅಪಘಾತಗಳಿಗೆ ಆಹ್ವಾನ ನೀಡುತ್ತಿರುವುದು ಇದಕ್ಕೆ ಕಾರಣ. ಅದರಲ್ಲೂ ಹಳ್ಳಿಗಳಲ್ಲಿ ಜಮೀನುಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಕೊರಕಲುಗಳು, ಗುಂಡಿಗಳು ಉಂಟಾಗಿರುವುದರಿಂದ ಎತ್ತಿನ ಗಾಡಿಗಳನ್ನು ಕೂಡ ತೆಗೆದುಕೊಂಡು ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಇದರಿಂದ ಕೃಷಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಾಹನಗಳ ಕ್ಷಮತೆಯೂ ಕುಸಿಯುತ್ತಿದೆ. ಸವಾರರು, ಚಾಲಕರು ಹಾಗೂ ಪ್ರಯಾಣಿಕರಿಗೆ ಪ್ರಯಾಣ ಪ್ರಯಾಸದಂತಾಗಿ ಹೋಗಿದೆ. ಈ ತೊಂದರೆ ನಿವಾರಣೆಗೆ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕ್ರಮ ಕೈಗೊಂಡಿಲ್ಲ:

‘ಪ್ರವಾಹ ಮತ್ತು ಮಳೆಯಿಂದ ಸವದತ್ತಿ ತಾಲ್ಲೂಕಿನಲ್ಲಿ ಹಾಳಾದ ರಸ್ತೆಗಳು ಪ್ರಯಾಣ ಮಾಡಲು ಸಾಧ್ಯವಾಗದಷ್ಟು ಹದಗೆಟ್ಟು ಹೋಗಿವೆ. ಮುನವಳ್ಳಿ-ಸವದತ್ತಿ ರಸ್ತೆ ಆರಂಭದಲ್ಲಿ ಮುನವಳ್ಳಿಯಿಂದ ಸೀತಾರಾಮ ಕ್ರಾಸ್‌ವರೆಗೆ ಮಾತ್ರ ಮಾಡಲಾಗಿದೆ. ಗೊರವನಕೊಳ್ಳದ ಹತ್ತಿರ ಎರಡು ಕಿ.ಮೀ. ಮಾಡಿದ್ದಾರೆ. ಉಳಿದಂತೆ ಕೆಲಸವಾಗಿಲ್ಲ. ಮುನವಳ್ಳಿಯಿಂದ ಸವದತ್ತಿಗೆ ಬರುವುದಕ್ಕೆ ಬಾಡಿಗೆ ಕಾರಿನವರೂ ಹಿಂದೇಟು ಹಾಕುತ್ತಿದ್ದಾರೆ. ಕೆಲವರು ನರಗುಂದ ಮಾರ್ಗವಾಗಿ ಹುಬ್ಬಳ್ಳಿಗೆ ಹೋಗುತ್ತಾರೆ. ಇದೇ ರಸ್ತೆಯಲ್ಲಿ ನವಿಲುತೀರ್ಥ ಅಣೆಕಟ್ಟೆ ಕೂಡ ಇದೆ. ಅದನ್ನು ನೋಡಲು ಬರುವ ಜನರು ಬೇಸತ್ತಿದ್ದಾರೆ’ ಎಂದು ಮುನವಳ್ಳಿಯ ನಿವಾಸಿ ಕಿರಣ ಯಲಿಗಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೈಕ್ ಸವಾರರು ಅಪಘಾತಕ್ಕೀಡಾದ ಬಹಳಷ್ಟು ಉದಾಹರಣೆಗಳಿವೆ. ಮುನವಳ್ಳಿ-ಚುಂಚನೂರ ರಸ್ತೆಯನ್ನು ಮುನವಳ್ಳಿಯಿಂದ ಎರಡು ಕಿ.ಮೀ.ವರೆಗಷ್ಟೇ ದುರಸ್ತಿ ಮಾಡಲಾಗಿದೆ. ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ನುರಿಸುವ ಹಂಗಾಮು ಪ್ರಾರಂಭವಾಗಿದ್ದು, ನಿತ್ಯವೂ ಹತ್ತಾರು ಟ್ರ್ಯಾಕ್ಟರ್‌ಗಳು ಕಬ್ಬು ಸಾಗಿಸುವುದರಿಂದಲೂ ರಸ್ತೆಗಳು ಮತ್ತಷ್ಟು ಹಾಳಾಗುತ್ತಿವೆ. ಅರ್ಟಗಲ್, ಬಸರಗಿ ಊರಿನ ರಸ್ತೆಗಳು ಕೂಡ ತೀವ್ರ ಹದಗೆಟ್ಟಿವೆ. ಮುನವಳ್ಳಿ-ಭಂಡಾರಹಳ್ಳಿ ರಸ್ತೆಗಳ ಪರಿಸ್ಥಿತಿ ಹೇಳತೀರದು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.