ADVERTISEMENT

ರಾಮದುರ್ಗ | ನೆರೆ ಸಂತ್ರಸ್ತರಿಗೆ ‘ತೆರವು’ ತಂದಿಟ್ಟ ಸಂಕಟ!

ತಗಡಿನ ಶೆಡ್‌ ತೆರವುಗೊಳಿಸುವಂತೆ ತೋಟಗಾರಿಕೆ ಇಲಾಖೆ ಪಟ್ಟು, ಸಂತ್ರಸ್ತರಿಗೆ ಮುಂದೆ ವಾಸಕ್ಕೆಲ್ಲಿ ಜಾಗ ಎಂಬ ಇಕ್ಕಟ್ಟು

ಇಮಾಮ್‌ಹುಸೇನ್‌ ಗೂಡುನವರ
Published 16 ಫೆಬ್ರುವರಿ 2026, 21:34 IST
Last Updated 16 ಫೆಬ್ರುವರಿ 2026, 21:34 IST
ರಾಮದುರ್ಗ ತಾಲ್ಲೂಕಿನ ಶಿವಪೇಟೆಯ ತೋಟಗಾರಿಕೆ ಕ್ಷೇತ್ರದಲ್ಲಿನ ತಗಡಿನ ಶೆಡ್‌ನಲ್ಲಿ ವಾಸವಿರುವ ಸಂತ್ರಸ್ತರು   ಪ್ರಜಾವಾಣಿ ಚಿತ್ರ
ರಾಮದುರ್ಗ ತಾಲ್ಲೂಕಿನ ಶಿವಪೇಟೆಯ ತೋಟಗಾರಿಕೆ ಕ್ಷೇತ್ರದಲ್ಲಿನ ತಗಡಿನ ಶೆಡ್‌ನಲ್ಲಿ ವಾಸವಿರುವ ಸಂತ್ರಸ್ತರು   ಪ್ರಜಾವಾಣಿ ಚಿತ್ರ   

ಅವರಾದಿ: ರಾಮದುರ್ಗ ತಾಲ್ಲೂಕಿನ ಶಿವಪೇಟೆಯ ತೋಟಗಾರಿಕೆ ಕ್ಷೇತ್ರದಲ್ಲಿ ತಾತ್ಕಾಲಿಕ ತಗಡಿನ ಶೆಡ್‌ಗಳಲ್ಲಿ ಆರು ವರ್ಷಗಳಿಂದ ವಾಸವಿರುವ ನೆರೆ ಸಂತ್ರಸ್ತರಿಗೆ ಈಗ ತೋಟಗಾರಿಕೆ ಇಲಾಖೆ ಕೈಗೊಳ್ಳಲಿರುವ ‘ತೆರವು’ ಪ್ರಕ್ರಿಯೆ ಸಂಕಷ್ಟ ತಂದಿದೆ. ಅತ್ತ ಸ್ವಂತ ಮನೆಗೆ ಹೋಗಲು, ಕಾಮಗಾರಿ ಪೂರ್ಣಗೊಂಡಿಲ್ಲ. ಇತ್ತ ಶೆಡ್‌ನಲ್ಲಿ ಇರಲು ತೋಟಗಾರಿಕೆ ಇಲಾಖೆ ಬಿಡುತ್ತಿಲ್ಲ.

2019ರಲ್ಲಿ ಮಲಪ್ರಭಾ ನದಿ ಪ್ರವಾಹದಿಂದ ರಾಮದುರ್ಗ ತಾಲ್ಲೂಕಿನ ಅವರಾದಿ, ಹಂಪಿಹೊಳಿಯಲ್ಲಿ ಹಲವು ಮನೆಗಳು ಬಿದ್ದಿದ್ದವು. ಮನೆ ಕಳೆದುಕೊಂಡು ಅತಂತ್ರರಾಗಿದ್ದ ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್‌ಗಳನ್ನು 2020ರ ಸೆಪ್ಟೆಂಬರ್‌ನಲ್ಲಿ ನಿರ್ಮಿಸಿಕೊಡಲಾಗಿತ್ತು.

ನೆರೆ ಸಂತ್ರಸ್ತರಿಗೆ ಮನೆಗಳ ನಿರ್ಮಾಣಕ್ಕಾಗಿ ₹5 ಲಕ್ಷ ಪರಿಹಾರವನ್ನು ಸರ್ಕಾರ ಘೋಷಿಸಿತ್ತು. ಈ ಪೈಕಿ ಹಂತಹಂತವಾಗಿ ಬಂದ ಪರಿಹಾರ ಬಳಸಿ ಮನೆ ನಿರ್ಮಿಸಿಕೊಂಡವರು ತಾತ್ಕಾಲಿಕ ಶೆಡ್‌ನಿಂದ ತಮ್ಮ ಮನೆಗೆ ಸ್ಥಳಾಂತರವಾಗಿದ್ದಾರೆ. ಆದರೆ, ತಾಂತ್ರಿಕ ಕಾರಣಗಳಿಂದ ಈವರೆಗೂ ಪೂರ್ತಿ ಪರಿಹಾರ ಕೈಗೆಟುಕದವರು ಶೆಡ್‌ನಲ್ಲೇ ಉಳಿದುಕೊಂಡಿದ್ದಾರೆ. 

ADVERTISEMENT

ಶೆಡ್‌ ತೆರವಿಗೆ ಪತ್ರ

ಈ ಮಧ್ಯೆ, ಶೆಡ್‌ ತೆರವುಗೊಳಿಸುವಂತೆ ತೋಟಗಾರಿಕೆ ಇಲಾಖೆಯವರು ಬೈಲಹೊಂಗಲ ಉಪವಿಭಾಗಾಧಿಕಾರಿ ಮತ್ತು ರಾಮದುರ್ಗ ತಹಶೀಲ್ದಾರರಿಗೆ ಪತ್ರ ಬರೆದಿದ್ದಾರೆ. ಶೆಡ್‌ನಿಂದ ಸ್ಥಳಾಂತರವಾಗುವಂತೆ ಸಂತ್ರಸ್ತರಿಗೂ ಹೇಳುತ್ತಿದ್ದಾರೆ.

‘ಶಿವಪೇಟೆಯ ತೋಟಗಾರಿಕೆ ಕ್ಷೇತ್ರದಲ್ಲಿ 13 ಎಕರೆ ಜಾಗವಿತ್ತು. ಈ ಪೈಕಿ ಎರಡು ಎಕರೆ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಕೊಟ್ಟಿದ್ದೇವೆ. ಉಳಿದ 9 ಎಕರೆಯಲ್ಲಿ 320 ತೆಂಗಿನ ಮರ, 300 ಹುಣಸೆ ಮರ, ಕೃಷಿಹೊಂಡವಿದ್ದು, ರೈತರಿಗೆ ಹಂಚಲು ವಿವಿಧ ಸಸಿಗಳನ್ನು ಬೆಳೆಸಲಾಗುತ್ತಿದೆ. ಅದರಲ್ಲಿ 1 ಎಕರೆಯಲ್ಲಿ 34 ತಗಡಿನ ಶೆಡ್‌ ಹಾಕಲಾಗಿತ್ತು. ಆ ಪೈಕಿ 20 ಶೆಡ್‌ಗಳು ಬಿದ್ದಿವೆ. ಉಳಿದ 14 ರಲ್ಲಿ ಕೆಲವರಷ್ಟೇ ಸಂತ್ರಸ್ತರಿದ್ದಾರೆ. ಉಳಿದವರು ಅನಧಿಕೃತವಾಗಿ ವಾಸವಿದ್ದಾರೆ. ಬೇಕಾಬಿಟ್ಟಿಯಾಗಿ ತ್ಯಾಜ್ಯ ಎಸೆದು ಪರಿಸರ ಕೆಡಿಸುತ್ತಿದ್ದಾರೆ. ಮೊದಲೇ ನಮಗೆ ಜಾಗದ ಕೊರತೆ ಇದೆ. ಶೆಡ್‌ ತೆರವುಗೊಳಿಸಿದರೆ ಸಿಗುವ ಒಂದು ಎಕರೆ ಜಾಗದಲ್ಲಿ ತೆಂಗಿನ ಸಸಿಗಳನ್ನು ಬೆಳೆಸಿ, ಸುತ್ತಲಿನ ರೈತರಿಗೆ ಕೊಡಲು ಯೋಜಿಸಿದ್ದೇವೆ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮಗೂ ಶೆಡ್‌ನಲ್ಲಿ ಇರಲು ಮನಸ್ಸಿಲ್ಲ. ಪೂರ್ತಿ ಪರಿಹಾರ ಕೊಟ್ಟರೆ ನಮ್ಮ ಮನೆ ಕಾಮಗಾರಿ ಪೂರ್ಣಗೊಳಿಸಿ, ಅಲ್ಲಿಗೆ ಹೋಗುತ್ತೇವೆ. ಈಗ ಇಲ್ಲಿಂದ ಸ್ಥಳಾಂತರವಾಗುವಂತೆ ಹೇಳಿದರೆ ಎಲ್ಲಿಗೆ ಹೋಗುವುದು? ಅರ್ಧ ನಿರ್ಮಾಣಗೊಂಡಿರುವ ಮನೆಯಲ್ಲಿ ವಾಸಿಸುವುದೇ’ ಎಂದು ಸಂತ್ರಸ್ತರಾದ ಫಾತಿಮಾ ಮುಲ್ಲಾ ಮತ್ತು ಮರಿಯವ್ವ ಮಾದರ ಪ್ರಶ್ನಿಸುತ್ತಾರೆ. 

‘ಅವರಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಕಳೆದುಕೊಂಡ ಕೆಲವರಿಗೆ ತಾಂತ್ರಿಕ ಕಾರಣದಿಂದ ಪೂರ್ತಿ ಪರಿಹಾರ ಸಿಕ್ಕಿಲ್ಲ. ಇದನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ’ ಎಂದು ಅವರಾದಿ ಪಿಡಿಒ ಬಿ.ಎಸ್‌.ಗುಡದನ್ನವರ ಹೇಳಿದರು.

ತಗಡಿನ ಶೆಡ್‌ ತೆರವು ಮಾಡುವಂತೆ ತೋಟಗಾರಿಕೆ ಇಲಾಖೆಯವರು ಕೋರಿದ್ದಾರೆ. ನೆರೆ ಸಂತ್ರಸ್ತರಿಗೆ ಸರ್ಕಾರದಿಂದ ಬರಬೇಕಿರುವ ಪೂರ್ತಿ ಪರಿಹಾರ ಕೊಡಿಸಲು ಕ್ರಮ ವಹಿಸಲಾಗುವುದು
ಪ್ರಕಾಶ ಹೊಳೆಪ್ಪಗೋಳ ತಹಶೀಲ್ದಾರ್‌ ರಾಮದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.