ಅಥಣಿ: ‘ಕೃಷ್ಣಾ ನದಿ ತೀರದ ನೆರೆ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕೇಂದ್ರವನ್ನು ಒದಗಿಸುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದ್ದು, ಪುನರ್ವಸತಿ ಕಲ್ಪಿಸಿದ ಗ್ರಾಮಸ್ಥರಿಗೆ ಈವರೆಗೂ ಹಕ್ಕುಪತ್ರ ನೀಡಿಲ್ಲ. ಇದರಿಂದ ನೆರೆ ಸಂತ್ರಸ್ತರಿಗೆ ವಾಸಿಸಲು ತೊಂದರೆಯಾಗುತ್ತಿದ್ದು, ತಾಲ್ಲೂಕು ಆಡಳಿತ ಶೀಘ್ರ ಶಾಶ್ವತ ಪುನರ್ವಸತಿ ಕಲ್ಪಿಸಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಮಹಾದೇವ ಮಡಿವಾಳ ಆಗ್ರಹಿಸಿದರು.
ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರತಿಭಟನೆಯ ನೇತೃತ್ವ ವಹಿಸಿ ಗುರುವಾರ ತಹಶೀಲ್ದಾರ್ ಸಿದರಾಯ ಬೋಸಗೆ ಅವರಿಗೆ ಮನವಿಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೃಷ್ಣಾ ನದಿ ಹಿನ್ನೀರಿನಿಂದ ಮುಳುಗಡೆ ಹೊಂದಿರುವ ಗ್ರಾಮಗಳಾದ ಹುಲಗಬಾಳಿ, ಸಪ್ತಸಾಗರ, ತೀರ್ಥ, ನದಿ ಇಂಗಳಗಾಂವ, ದರೂರ, ಸತ್ತಿ, ಖವಟಕೊಪ್ಪ, ಶೇಗುಣಸಿ ಮತ್ತು ಹಲ್ಯಾಳ ಈ ಎಲ್ಲ ಗ್ರಾಮಗಳಿಗೆ ಇನ್ನೂವರೆಗೆ ಯಾವುದೇ ಪರಿಹಾರವನ್ನು ನೀಡಿರುವುದಿಲ್ಲ. ಹಾಗೂ ಇವರಿಗೆ ಶಾಶ್ವತವಾಗಿ ವಾಸ ಮಾಡಲು ಯಾವುದೇ ಸ್ಥಳಾವಕಾಶವನ್ನು ನೀಡಿರುವುದಿಲ್ಲ. ಈ ಎಲ್ಲ ಗ್ರಾಮದ ನಿರಾಶ್ರೀತರಿಗೆ ಪರಿಹಾರ ನೀಡಿ ಅವರಿಗೆ ವಾಸ ಮಾಡಲು ಸ್ಥಳಾವಕಾಶವನ್ನು ಕಲ್ಪಿಸಬೇಕು. ನಾಗನೂರ ಪಿ.ಕೆ. ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ದೊಡವಾಡ, ಅವರಖೋಡ ಮತ್ತು ನಾಗನೂರ ಪಿ.ಕೆ. ಗ್ರಾಮಗಳ ನಿರಾಶ್ರಿತರಿಗೆ ರಡ್ಡೆರಹಟ್ಟಿ ಪುನರ್ವಸತಿ ಕೇಂದ್ರದಲ್ಲಿ ಜಾಗ ಮಂಜೂರಿ ಮಾಡಿದ್ದು, ಇಲ್ಲಿಯವರೆಗೆ ಮನೆಯ ಹಕ್ಕುಪತ್ರವನ್ನು ವಿತರಣೆ ಮಾಲ್ಲ. ಆ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಬೇಕು’ ಎಂದು ಒತ್ತಾಯಿಸಿದರು.
ತಾಲ್ಲೂಕಿನ ಉತ್ತರ ಭಾಗದ ರೈತರ ಬಹುದಿನಗಳ ಬೇಡಿಕೆಯಾದ ಬಸವೇಶ್ವರ ಏತ ನೀರಾವರಿ ಯೋಜನೆಯು ಆಮೆ ವೇಗದಲ್ಲಿ ನಡೆದಿದ್ದು, ಸರ್ಕಾರ ಹೆಚ್ಚಿನ ಅನುದಾನವನ್ನು ಒದಗಿಸುವ ಮೂಲಕ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎನ್ನುವುದನ್ನು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ರೈತ ಸಂಘದ ಮುಖಂಡರಾದ ಬಸಪ್ಪ ಜಗದಾಳ, ರಮೇಶ್ ಕುಂಬಾರ, ದಗಡು ಮಿಸ್ಸಾಳ, ಶಿವಾನಂದ ಶಿರಗೂರ, ಸಿದ್ದು ಮಿಸಾಳ, ಅಲ್ಲೂ ಹವಾಲ್ದಾರ, ನಿಂಗನಗೌಡ ಪಾಟೀಲ, ಬಾಹುಬಲಿ ಸಂಕಣ್ಣವರ, ಸಂಗಪ್ಪ ಕರಿಗಾರ, ಪಾರಿಸ್ ಯಳಗೂಡ, ಪ್ರಕಾಶ್ ಜೋಶಿ, ಬಸಪ್ಪ ಕೋಳಿ, ಬೇಬಿ ಜಾನ್ ಮುಲ್ಲಾ, ಇಂದಾ ಸಾಳುಂಕೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.