ADVERTISEMENT

ಬೆಳಗಾವಿ | ಆಹಾರದ ಕಿಟ್ ಮನೆಗಳಿಗೆ ಪೂರೈಕೆ

ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ನೆರವು

ಎಂ.ಮಹೇಶ
Published 26 ಜುಲೈ 2020, 19:45 IST
Last Updated 26 ಜುಲೈ 2020, 19:45 IST
ಹುಕ್ಕೇರಿ ತಾಲ್ಲೂಕಿನ ಯಾದಗೂಡ ಗ್ರಾಮದಲ್ಲಿ ಈಚೆಗೆ ಗರ್ಭಿಣಿಯೊಬ್ಬರಿಗೆ ಅಂಗನವಾಡಿ ಸಿಬ್ಬಂದಿ ಪೌಷ್ಟಿಕ ಆಹಾರದ ಕಿಟ್ ವಿತರಿಸಿದರು
ಹುಕ್ಕೇರಿ ತಾಲ್ಲೂಕಿನ ಯಾದಗೂಡ ಗ್ರಾಮದಲ್ಲಿ ಈಚೆಗೆ ಗರ್ಭಿಣಿಯೊಬ್ಬರಿಗೆ ಅಂಗನವಾಡಿ ಸಿಬ್ಬಂದಿ ಪೌಷ್ಟಿಕ ಆಹಾರದ ಕಿಟ್ ವಿತರಿಸಿದರು   

ಬೆಳಗಾವಿ: ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳು ಮುಚ್ಚಿವೆ. ಆದರೆ, ಜಿಲ್ಲೆಯಲ್ಲಿ ಫಲಾನುಭವಿಗಳಾದ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಆಹಾರ ಧಾನ್ಯ ಪೂರೈಸುವ ಕಾರ್ಯ ನಿಂತಿಲ್ಲ. ಕಿಟ್‌ಗಳನ್ನು ಸಿದ್ಧಪಡಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಮನೆಗಳಿಗೆ ತಲುಪಿಸಲಾಗುತ್ತಿದೆ.

6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳಿಗೆ ‘ಪುಷ್ಟಿ ಪುಡಿ’ ರೂಪದ ಆಹಾರವನ್ನು ದಿನಕ್ಕೆ 75 ಗ್ರಾಂ.ನಂತೆ ತಿಂಗಳಲ್ಲಿ 25 ದಿನಗಳಿಗೆ 1 ಕೆ.ಜಿ.ಗೆ 875 ಗ್ರಾಂ. ಜೊತೆಗೆ 300 ಗ್ರಾಂ. ಹಾಲಿನ ಪುಡಿ ಮತ್ತು 200 ಗ್ರಾಂ. ಸಕ್ಕರೆ ನೀಡಲಾಗುತ್ತಿದೆ.

3 ವರ್ಷದಿಂದ 6 ವರ್ಷದೊಗಿನವರಿಗೆ 25 ದಿನಗಳಿಗೆ ಘಟಕ ವೆಚ್ಚ ₹ 8ರಂತೆ 3 ಕೆ.ಜಿ. 950 ಗ್ರಾಂ. ವಿವಿಧ ಆಹಾರ ಪದಾರ್ಥ, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಘಟಕ ವೆಚ್ಚ ₹ 21ರಂತೆ ತಿಂಗಳಿಗೆ 25 ದಿನಗಳಿಗೆ 6 ಕೆ.ಜಿ. 900 ಗ್ರಾಂ. ಆಹಾರವನ್ನು ಒದಗಿಸಲಾಗುತ್ತಿದೆ.

ADVERTISEMENT

ದುರುಪಯೋಗ ಆಗದಂತೆ:ಜಿಲ್ಲೆಯಲ್ಲಿ 59 ಮಿನಿ ಸೇರಿ ಒಟ್ಟು 5,326 ಅಂಗನವಾಡಿ ಕೇಂದ್ರಗಳಿವೆ. ಪ್ರಸ್ತುತ 6 ತಿಂಗಳಿಂದ 3 ವರ್ಷದ 2,24,568 ಮಕ್ಕಳು, 3–6 ವರ್ಷದ 1,63,393 ಮಕ್ಕಳು, 42,399 ಗರ್ಭಿಣಿಯರು ಮತ್ತು 39,326 ಬಾಣಂತಿಯರಿಗೆ ಇಲಾಖೆಯಿಂದ ಪೌಷ್ಟಿಕ ಆಹಾರ ತಲುಪಿಸಲಾಗುತ್ತಿದೆ. ತಾಲ್ಲೂಕಿಗೆ ಒಂದರಂತೆ ಇರುವ ಮಹಿಳಾ ಪೂರಕ ಪೌಷ್ಟಿಕ ಆಹಾರದ ಘಟಕಗಳು ಕಿಟ್‌ಗಳನ್ನು ಸಿದ್ಧಪಡಿಸಿ ಪೂರೈಸುತ್ತಿವೆ. ಅವುಗಳನ್ನು ಅಂಗನವಾಡಿಗಳ ಮೂಲಕ ಕೊಡಲಾಗುತ್ತಿದೆ.

‘ವಿತರಿಸುವಾಗ ಪ್ರಮಾಣದಲ್ಲಿ ಹೆಚ್ಚು–ಕಡಿಮೆ ಆಗಬಾರದು ಮತ್ತು ದುರುಪಯೋಗ ಆಗದಂತೆ ತಡೆಯಲು ಎಲ್ಲ ಪದಾರ್ಥಗಳನ್ನೂ ಸೇರಿಸಿ ಒಂದು ಕಿಟ್‌ ಸಿದ್ಧಪಡಿಸಿ ಕೊಡಲಾಗುತ್ತಿದೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ, ಅಂಗನವಾಡಿ ನೌಕರರು ಮುಂಜಾಗ್ರತಾ ಕ್ರಮ ಕೈಗೊಂಡು ಫಲಾನುಭವಿಗಳ ಮನೆಗಳಿಗೆ ಕೊಡುತ್ತಿದ್ದಾರೆ. ಅಂಗನವಾಡಿಗಳಿಗೆ ಬರುವುದಕ್ಕೆ ಹಿಂಜರಿಯುತ್ತಿದ್ದವರಿಗೂ ಈಗ ಸೌಲಭ್ಯ ಸಿಗುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಸವರಾಜ ವರವಟ್ಟಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕೋವಿಡ್ ಪರೀಕ್ಷೆ:‘ಕೋಳಿ ಮೊಟ್ಟೆಗಳನ್ನು ಮಕ್ಕಳಿಗೆ ವಾರದಲ್ಲಿ 2ರಂತೆ ಹಾಗೂ ಗರ್ಭಿಣಿ–ಬಾಣಂತಿಯರಿಗೆ ವಾರದಲ್ಲಿ 8ರಂತೆ ತಲುಪಿಸಲಾಗುತ್ತಿದೆ. ನಿಗದಿತ ದಿನಗಳಂದು ಕಿಟ್‌ ತಲುಪಿಸಲಾಗುತ್ತಿದೆ. ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿರುವ ಬಾಲವಿಕಾಸ ಮಹಿಳಾ ಸಮಿತಿಗಳು ಇತ್ತ ಗಮನಹರಿಸುತ್ತವೆ. ಅಲ್ಲದೇ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲೂ ಆಹಾರ ಪದಾರ್ಥ ಪೂರೈಕೆಯಿಂದ ಫಲಾನುಭವಿಗಳಿಗೆ ಅನುಕೂಲವಾಗುತ್ತಿದೆ’ ಎಂದು ತಿಳಿಸಿದರು.

‘ಇಲಾಖೆಯಿಂದ ಕೊರೊನಾ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. 8 ತಿಂಗಳು ತುಂಬಿದ ಗರ್ಭಿಣಿಯರನ್ನು ಮುಂಜಾಗ್ರತಾ ಕ್ರಮವಾಗಿ ಕೋವಿಡ್–19 ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಗರ್ಭಿಣಿ ಹಾಗೂ ಮಗುವಿನ ಹಿತದೃಷ್ಟಿಯಿಂದ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಈ ಕಾರ್ಯ ನಡೆಸಲಾಗುತ್ತಿದೆ. ಪಾಸಿಟಿವ್ ಕಂಡುಬಂದವರನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸವೂ ಆಗುತ್ತಿದೆ’ ಎನ್ನುತ್ತಾರೆ ಅವರು.

***

ಪೌಷ್ಟಿಕ ಆಹಾರ ಪೂರೈಕೆಗೆ ಅನುದಾನದ ಕೊರತೆ ಇಲ್ಲ. ವಿತರಣೆ ಆಗದಿರುವ ಬಗ್ಗೆ ದೂರುಗಳು ಬಂದಿಲ್ಲ.
-ಬಸವರಾಜ ವರವಟ್ಟಿ
ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

***

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಅಂಗನವಾಡಿಗಳು ಮುಚ್ಚಿವೆ. ಆದರೆ, ಆಹಾರ ಪದಾರ್ಥ ಪೂರೈಕೆ ನಿಂತಿಲ್ಲ. ಮನೆಗಳಿಗೆ ತಲುಪಿಸುತ್ತಿರುವುದರಿಂದ ಅನುಕೂಲವಾಗಿದೆ.
-ಮಂಜುಳಾ,ನೇಸರಗಿ

***

ಪೌಷ್ಟಿಕ ಆಹಾರದ ಮಾಹಿತಿ

3 ರಿಂದ 6 ವರ್ಷದ ಮಕ್ಕಳಿಗೆ;ಗರ್ಭಿಣಿಯರು, ಬಾಣಂತಿಯರಿಗೆ

ಪದಾರ್ಥ: ಗ್ರಾಂ.ಗಳಲ್ಲಿ
ಹಾಲಿನಪುಡಿ;
300; 500
ಸಕ್ಕರೆ; 200; 300
ಹೆಸರುಕಾಳು; 800; 500
ಅಕ್ಕಿ/ಗೋಧಿ; 2 ಕೆ.ಜಿ.; 4 ಕೆ.ಜಿ.
ತೊಗರಿಬೇಳೆ; 500; 400
ಮಸಾಲೆ; 150; 200
ಕೋಳಿ ಮೊಟ್ಟೆಗಳು; 8; 25
ಶೇಂಗಾ ಕಾಳು; ಇಲ್ಲ; 500
ಬೆಲ್ಲ; ಇಲ್ಲ; 500
ಒಟ್ಟು; 3,950; 6,900

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.