ADVERTISEMENT

ಆಹಾರ ಉತ್ಪಾದನೆ: ಶೇ 10ರಷ್ಟು ಹೆಚ್ಚು

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 15:07 IST
Last Updated 7 ಜೂನ್ 2021, 15:07 IST

ಬೆಳಗಾವಿ: ‘ರಾಜ್ಯದಲ್ಲಿ ಕಳೆದ ವರ್ಷ ಉತ್ತಮವಾದ ಮಳೆಯಾಗಿದ್ದು, 153 ಲಕ್ಷ ಟನ್ ಆಹಾರ ಉತ್ಪಾದನೆಯಾಗಿದೆ. ಇದು, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇ 10ರಷ್ಟು ಹೆಚ್ಚು’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಮುಂಗಾರು ಪೂರ್ವ 142 ಮಿ.ಮೀ. ವಾಡಿಕೆ ಇದ್ದು, 244 ಮಿ.ಮೀ. ಆಗಿದೆ. ಅಂದರೆ ಶೇ 72ರಷ್ಟು ಹೆಚ್ಚಾಗಿದೆ. ಜಿಲ್ಲೆಯಲ್ಲಿ 93 ಮಿ.ಮೀ. ವಾಡಿಕೆ ಇದ್ದು, 144 ಮಿ.ಮೀ. (ಶೇ 55ರಷ್ಟು ಜಾಸ್ತಿ) ಬಿದ್ದಿದೆ’ ಎಂದು ಹೇಳಿದರು.

‘ಮುಂಗಾರು ಹಂಗಾಮಿನಲ್ಲಿ 77 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇದೆ. ಈವರೆಗೆ 3 ಲಕ್ಷ ಹೆ. ಬಿತ್ತನೆಯಾಗಿದೆ. 6 ಲಕ್ಷ ಕ್ವಿಂಟಲ್ ಬಿತ್ತನೆ ಬೀಜಗಳ ಬೇಡಿಕೆ ಇದೆ. ಸದ್ಯ 7.74 ಲಕ್ಷ ಕ್ವಿಂ. ಲಭ್ಯವಿದೆ. 90ಸಾವಿರ ಕ್ವಿಂ. ವಿತರಿಸಲಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ 1.81 ಲಕ್ಷ ಕ್ವಿಂ. ಲಭ್ಯವಿದೆ’ ಎಂದರು.

ADVERTISEMENT

‘ಕಿತ್ತೂರು ತಾಲ್ಲೂಕಿನಲ್ಲಿ ಜೈವಿಕ ಡಿ.ಎ.ಪಿ. ಗೊಬ್ಬರ ಎಂದು ಮಾರುತ್ತಿದ್ದ ಅಂದಾಜು ₹ 1 ಲಕ್ಷ ಮೌಲ್ಯದ 75 ಬ್ಯಾಗ್ ಜಪ್ತಿ ಮಾಡಲಾಗಿದೆ. ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರುವುದು ಹಾಗೂ ಕೃತಕ ಅಭಾವ ಸೃಷ್ಟಿಸುವುದು ಸಹಿಸುವುದಿಲ್ಲ. ಈಗಾಗಲೇ 266 ಅಂಗಡಿಗಳ ಪರವಾನಗಿ ಅಮಾನತು ಮಾಡಲಾಗಿದ್ದು, 15 ಪರವಾನಗಿ ರದ್ದುಪಡಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.