ಖಾನಾಪುರ (ಬೆಳಗಾವಿ ಜಿಲ್ಲೆ): ‘ತಾಲ್ಲೂಕಿನ ಲೋಂಡಾ ಅರಣ್ಯ ವಲಯ ವ್ಯಾಪ್ತಿಯ ಶಿರೋಲಿ ಗ್ರಾಮದ ಕೃಷಿ ಭೂಮಿಯಲ್ಲಿ ಬೆಳೆದ 40 ಮರಗಳನ್ನು ಅನುಮತಿ ಇಲ್ಲದೇ ಕತ್ತರಿಸಲಾಗಿದೆ. ಪ್ರಕರಣ ನಡೆದು ಆರು ತಿಂಗಳಾಗಿದೆ. ಈ ಬಗ್ಗೆ ಕಾಂಗ್ರೆಸ್ ಹೋರಾಟ ಮಾಡಿದರೂ ಅರಣ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಖುದ್ದಾಗಿ ತಾವೇ ಶಿಸ್ತುಕ್ರಮ ಜರುಗಿಸಬೇಕು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಅಂಜಲಿ ನಿಂಬಾಳಕರ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಮಂಗಳವಾರ ಭೇಟಿ ಮಾಡಿ ಆಗ್ರಹಿಸಿದ್ದಾರೆ.
‘ಶಿರೋಲಿ ವ್ಯಾಪ್ತಿಯ 10 ಎಕರೆ ಜಮೀನಿನಲ್ಲಿ ಸುಮಾರು 40ಕ್ಕೂ ಹೆಚ್ಚು ಮರಗಳನ್ನು ಕತ್ತರಿಸಿ ರಸ್ತೆ ಮಾಡಿಕೊಳ್ಳಲಾಗಿದೆ. ಇದಕ್ಕೆ ಜೆಸಿಬಿ ಬಳಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಜೆಸಿಬಿ ಬಳಸುವುದಕ್ಕೂ ಅವಕಾಶವಿಲ್ಲ. ರಸ್ತೆ ಕಾಮಗಾರಿ ನಡೆದ ಸಂದರ್ಭದಲ್ಲಿ ಗಸ್ತಿನಲ್ಲಿದ್ದ ಅಧಿಕಾರಿಗಳು ಯಂತ್ರಗಳನ್ನು ವಶಕ್ಕೆ ಪಡೆಯಬೇಕಿತ್ತು. ಕರ್ತವ್ಯ ಮರೆತು ಆರೋಪಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅ.3ರಂದೇ ದೂರು ದಾಖಲಾಗಿದೆ. ಆದರೂ ವಲಯ ಅರಣ್ಯಾಧಿಕಾರಿ ಆರೋಪಿಗಳನ್ನು ಬಂಧಿಸಿಲ್ಲ’ ಎಂದು ಅವರು ದೂರಿದ್ದಾರೆ.
‘ಈ ಹಿಂದೆ ಖಾನಾಪುರದಲ್ಲಿದ್ದ ಇನ್‌ಸ್ಪೆಕ್ಟರ್ ಒಬ್ಬರ ಸಂಬಂಧಿಕರಿಗೆ ಈ ಜಮೀನು ಸೇರಿದೆ. ಪೊಲೀಸ್ ಅಧಿಕಾರಿ ಮೇಲಿನ ಭಯದಿಂದ ಅರಣ್ಯಾಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ಇದರಲ್ಲಿ ಎಲ್ಲರೂ ಶಾಮೀಲಾದ ಸಂದೇಹವಿದೆ’ ಎಂದೂ ಅವರು ಮನವರಿಕೆ ಮಾಡಿದ್ದಾರೆ.
‘ಲೋಂಡಾ ವಲಯ ಅರಣ್ಯಾಧಿಕಾರಿ ದೂರು ದಾಖಲಿಸಿಕೊಳ್ಳುವುದಕ್ಕೂ ಐದು ದಿನ ವಿಳಂಬ ಮಾಡಿದ್ದಾರೆ. ಮರಮುಟ್ಟು ಹಾಗೂ ಜೆಸಿಬಿ ಯಂತ್ರಗಳನ್ನು ಬೇರೆಡೆ ಸಾಗಿಸಲು ಅವಕಾಶ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಖಾನಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಘಾಡಿ ಆಗ್ರಹಿಸಿದ್ದಾರೆ.
‘ಗಸ್ತಿನಲ್ಲಿದ್ದ ವೇಳೆ ಮರ ಕಡಿದಿದ್ದು ಗೊತ್ತಾಗಿದೆ. ಅನಧಿಕೃತವಾಗಿ ರಸ್ತೆ ನಿರ್ಮಿಸಲಾಗಿದೆ. ಅರಣ್ಯದ ಹದ್ದು ಗುರುತಿಸಿದ್ದ ಕಲ್ಲನ್ನು ಕಿತ್ತೆಸೆಯಲಾಗಿದೆ. ಅಲ್ಲದೇ, ಸ್ಥಳದಲ್ಲಿದ್ದ ತಂತಿಬೇಲಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಜಮೀನು ಸವಿತಾ ಕಾಂಬಳೆ ಎನ್ನುವವರಿಗೆ ಸೇರಿದೆ’ ಎಂದು ಅರಣ್ಯಾಧಿಕಾರಿಗಳು ದಾಖಲಿಸಿದ ದೂರಿನಲ್ಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಲು, ಅರಣ್ಯ ಇಲಾಖೆಯ ಖಾನಾಪುರ ವಲಯದ ಅಧಿಕಾರಿಗಳು ಕರೆ ಸ್ವೀಕರಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.