ADVERTISEMENT

ಅರಣ್ಯ ವೀಕ್ಷಕ: ಲಿಖಿತ ಪರೀಕ್ಷೆ ಕೈಬಿಟ್ಟ ಸರ್ಕಾರ

ಅಪಾರ ಸಂಖ್ಯೆಯ ಆಕಾಂಕ್ಷಿಗಳಿಗೆ ಅವಕಾಶ ವಂಚಿತರಾಗುವ ಆತಂಕ

ಸಂತೋಷ ಈ.ಚಿನಗುಡಿ
Published 12 ಅಕ್ಟೋಬರ್ 2023, 20:32 IST
Last Updated 12 ಅಕ್ಟೋಬರ್ 2023, 20:32 IST
Competitive exam answer sheet used to measure intelligence or to mark correct options
Competitive exam answer sheet
Competitive exam answer sheet used to measure intelligence or to mark correct options Competitive exam answer sheet   

ಬೆಳಗಾವಿ: ರಾಜ್ಯ ಸರ್ಕಾರ 310 ಅರಣ್ಯ ವೀಕ್ಷಕ (ಡಿ ಗ್ರೂಪ್‌) ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಆದರೆ, ಲಿಖಿತ ಪರೀಕ್ಷೆ ಕೈಬಿಟ್ಟಿದ್ದು ಹಲವು ಆಕಾಂಕ್ಷಿಗಳ ಆತಂಕಕ್ಕೆ ಕಾರಣವಾಗಿದೆ.

ಅರಣ್ಯ ಇಲಾಖೆಯ 13 ವಲಯಗಳಲ್ಲಿ ಖಾಲಿ ಇರುವ ಅರಣ್ಯ ವೀಕ್ಷಕ ಹುದ್ದೆಗಳ ನೇಮಕಾತಿಗೆ ಸೆಪ್ಟೆಂಬರ್ 27ರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅಕ್ಟೋಬರ್ 26ರವರೆಗೆ ಅವಕಾಶವಿದೆ. ದೈಹಿಕ ಸಾಮರ್ಥ್ಯ ಪರೀಕ್ಷೆ ಮುಗಿಸಿ, ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ವೈದ್ಯಕೀಯ ಪರೀಕ್ಷೆ ಬಳಿಕ ನೇಮಕಾತಿ ಆದೇಶ ಕೊಡಲಾಗುತ್ತಿತ್ತು.

ಆದರೆ, ಈ ಬಾರಿ ಪ್ರವೇಶ ಪರೀಕ್ಷೆ ಕೈಬಿಡಲಾಗಿದೆ. ದೈಹಿಕ ಸಾಮರ್ಥ್ಯ ಪರೀಕ್ಷೆ ಮುಗಿದ ಬಳಿಕ ಎಸ್ಸೆಸ್ಸೆಲ್ಸಿ ಅಂಕಗಳ ಮೆರಿಟ್‌ ಆಧರಿಸಿ ನೇಮಕಾತಿ ಮಾಡಿಕೊಳ್ಳುವುದಾಗಿ ಅಧಿಸೂಚನೆ ತಿಳಿಸಿದೆ.

ADVERTISEMENT

ಕಾರಣವೇನು: ‘2011, 2016 ಹಾಗೂ 2018ರ ನೇಮಕಾತಿ ಸಂದರ್ಭದಲ್ಲಿ ದೈಹಿಕ ಸಾಮರ್ಥ್ಯ ಮತ್ತು ಲಿಖಿತ ಪರೀಕ್ಷೆ ಇತ್ತು. 2019ರಲ್ಲಿ ಕೋವಿಡ್‌ ಕಾರಣ ನೇಮಕಾತಿ ನಿಯಮ ಬದಲಿಸಿ, ಲಿಖಿತ ಪರೀಕ್ಷೆ ಕೈಬಿಡಲಾಯಿತು. ಆದರೆ, ಆಗ ನೇಮಕಾತಿ ನಡೆಯಲಿಲ್ಲ. ಅದೇ ಹಳೆಯ ಆದೇಶವನ್ನು ಕೋವಿಡ್ ನಂತರದ ನೇಮಕಾತಿಗಳಿಗೂ ಅನ್ವಯ ಮಾಡಲಾಗಿದೆ’ ಎಂದು ಆಕಾಂಕ್ಷಿಗಳು ದೂರುತ್ತಾರೆ.

‘ಅರಣ್ಯ ವೀಕ್ಷಕ ಹುದ್ದೆಗೆ ಎಸ್ಸೆಸ್ಸೆಲ್ಸಿ ಶಿಕ್ಷಣ ಮಾತ್ರ ಮಾನದಂಡ. 2019 ಮತ್ತು 2020ರ ಬ್ಯಾಚ್‌ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನೆಪ ಮಾತ್ರಕ್ಕೆ ನಡೆಯಿತು. ‘ಕೋವಿಡ್‌ ಬ್ಯಾಚ್‌’ನ ಅಪಾರ ಸಂಖ್ಯೆ ವಿದ್ಯಾರ್ಥಿಗಳು ಶೇ 95ಕ್ಕೂ ಹೆಚ್ಚು ಫಲಿತಾಂಶ ಪಡೆದಿದ್ದಾರೆ. ಮೆರಿಟ್‌ ಆಧಾರದ ಮೇಲೆ ನೇಮಕಾತಿಯಾದರೆ, 19 ರಿಂದ 20 ವರ್ಷದ ವಯೋಮಾನದವರೇ ಹೆಚ್ಚು ನೇಮಕ ಆಗಬಹುದು. 20 ರಿಂದ 30 ವರ್ಷ ವಯೋಮಾನದವರಿಗೆ ಅವಕಾಶ ಸಿಗುವುದಿಲ್ಲ’ ಎಂದು ಅವರು ಹೇಳುತ್ತಾರೆ.

ಮೀಸಲಾತಿಯೂ ಇಲ್ಲ: ‘ಯೋಜನಾ ನಿರಾಶ್ರಿತರಿಗೆ ನೇಮಕಾತಿಯಲ್ಲಿ ಶೇ 5ರಷ್ಟು ಹುದ್ದೆ ಮೀಸಲಿಡಬೇಕು ಎಂಬುದು ನಿಯಮ. ಈ ಬಾರಿಯ ಅಧಿಸೂಚನೆಯಲ್ಲಿ ಅದನ್ನೂ ಕೈಬಿಡಲಾಗಿದೆ. 3ಎ, 3ಬಿ ವರ್ಗಗಳಿಗೂ ಯಾವುದೇ ಮೀಸಲಾತಿ ನಿಗದಿ ಮಾಡಿಲ್ಲ. 2ಎ ವರ್ಗದವರಿಗೆ ಮಾತ್ರ 5 ಸೀಟ್‌ ಇಡಲಾಗಿದೆ. ಈ ಎಲ್ಲ ಗೊಂದಲ ನಿವಾರಿಸಿ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಬೇಕು. ಇಲ್ಲದಿದ್ದರೆ, ತಡೆಯಾಜ್ಞೆ ತರಲು ಮುಂದಾಗುತ್ತೇವೆ’ ಎಂದು ಆಕಾಂಕ್ಷಿ ಮಲ್ಲಪ್ಪ ಅರಕೇರಿ ಹೇಳುತ್ತಾರೆ.

‘ಗೆಜೆಟ್‌ ನೋಟಿಫಿಕೇಷನ್‌ ಪಾಲನೆ’

‘2019ರಲ್ಲಿ ಮಾಡಿದ ಲಿಖಿತ ಪರೀಕ್ಷೆ ಕೈಬಿಟ್ಟು ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಲಾಗಿದೆ. ಅದನ್ನು ಆಧರಿಸಿ ಅರಣ್ಯ ವೀಕ್ಷಕರ ನೇಮಕಾತಿ ಮಾಡಲಾಗುತ್ತಿದೆ. 2019– 20ರಲ್ಲಿ ಎಸ್ಸೆಸ್ಸೆಲ್ಸಿ ಪಾಸಾದವರು ಹೆಚ್ಚು ಅಂಕ ಪಡೆದಿದ್ದಾರೆ ಎಂಬ ಕಾರಣಕ್ಕೆ ಈ ನೇಮಕಾತಿಗೆ ತಕರಾರು ಮಾಡುವುದು ಸರಿಯಲ್ಲ. ಆಗ ಕೋವಿಡ್‌ ಕಾರಣ ಮಕ್ಕಳಿಗೆ ಪಾಠಗಳೇ ನಡೆದಿಲ್ಲ ಎಂಬುದನ್ನೂ ಗಮನಿಸಬೇಕು’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಪಡೆ ಮುಖ್ಯಸ್ಥ ಬ್ರಿಜೇಶ್‌ಕುಮಾರ್‌ ದೀಕ್ಷಿತ ‘ಪ್ರಜಾವಾಣಿ’ಗೆ ತಿಳಿಸಿದರು.

2019ರಲ್ಲಿ ಅನಿವಾರ್ಯ ಕಾರಣ ಬದಲಾಯಿಸಿದ ನಿಯಮವನ್ನು ಈಗಲೂ ಮುಂದುವರಿಸಿದ್ದು ಸರಿಯಲ್ಲ. ಸರ್ಕಾರ ಹೊಸ ಆದೇಶ ಹೊರಡಿಸಬೇಕು
–ಮಲ್ಲಪ್ಪ ಅರಕೇರಿ, ಉದ್ಯೋಗಾಕಾಂಕ್ಷಿ, ಬಾಗಲಕೋಟೆ
ಐದು ವರ್ಷಗಳ ನಂತರ ಸರ್ಕಾರ ನೇಮಕಾತಿ ಮಾಡಿಕೊಳ್ಳುತ್ತಿದೆ. ಮೆರಿಟ್‌ ಆಧಾರದಲ್ಲಿ ನೇಮಕ ಮಾಡಿದರೆ ಹಳೆಯ ಬ್ಯಾಚ್‌ನವರಿಗೆ ಅನ್ಯಾಯವಾಗುತ್ತದೆ
- ಕಿರಣ್‌ ರಾಜ್‌, ಉದ್ಯೋಗಾಕಾಂಕ್ಷಿ, ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.