ADVERTISEMENT

ಸಾರ್ವಜನಿಕರಿಗೆ ಉಚಿತ ಕಷಾಯ

ಸಾಹಿತ್ಯ, ಸಂಸ್ಕೃತಿ ಮತ್ತು ಕೃಷಿ ವಿಚಾರ ವೇದಿಕೆ ಸೇವೆ

ಸುಧಾಕರ ಎಸ್.ತಳವಾರ, ಬೆಂಗಳೂರು
Published 1 ಮೇ 2021, 5:07 IST
Last Updated 1 ಮೇ 2021, 5:07 IST
ನಿಪ್ಪಾಣಿ ತಾಲ್ಲೂಕಿನ ಬೇಡಕಿಹಾಳ ವೃತ್ತದಲ್ಲಿ ಉಚಿತ ಕಷಾಯ ವಿತರಣೆ ಮಾಡುತ್ತಿರುವ ಸಾಹಿತ್ಯ, ಸಂಸ್ಕೃತಿ ಮತ್ತು ಕೃಷಿ ವಿಚಾರ ವೇದಿಕೆಯವರು
ನಿಪ್ಪಾಣಿ ತಾಲ್ಲೂಕಿನ ಬೇಡಕಿಹಾಳ ವೃತ್ತದಲ್ಲಿ ಉಚಿತ ಕಷಾಯ ವಿತರಣೆ ಮಾಡುತ್ತಿರುವ ಸಾಹಿತ್ಯ, ಸಂಸ್ಕೃತಿ ಮತ್ತು ಕೃಷಿ ವಿಚಾರ ವೇದಿಕೆಯವರು   

ಚಿಕ್ಕೋಡಿ: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎನ್ನಲಾಗುವ ಕಷಾಯವನ್ನು ಸ್ವಯಂ ಸೇವಾ ಸಂಸ್ಥೆಯು ನಿತ್ಯವೂ ಜನರಿಗೆ ಉಚಿತವಾಗಿ ವಿತರಿಸಿ ಗಮನಸೆಳೆದಿದೆ.

ನಿಪ್ಪಾಣಿ ತಾಲ್ಲೂಕಿನ ಬೇಡಕಿಹಾಳ ಗ್ರಾಮದ ಸಾಹಿತ್ಯ, ಸಂಸ್ಕೃತಿ ಮತ್ತು ಕೃಷಿ ವಿಚಾರ ವೇದಿಕೆಯು ಏ.19ರಿಂದ ಬೇಡಕಿಹಾಳ-ಶಮನೇವಾಡಿ ವೃತ್ತದಲ್ಲಿ ಈ ಕಾರ್ಯ ಮಾಡುತ್ತಿದೆ.

ನಿತ್ಯ 300 ಜನರಿಗೆ ಕಷಾಯ:

ADVERTISEMENT

ಎಲ್ಲೆಡೆ ಪಸರಿಸಿಕೊಂಡಿರುವ ಕೊರೊನಾ ವೈರಾಣು ಕುಣಿತಕ್ಕೆ ಜನ ಜೀವನ ನಲುಗಿ ಹೋಗಿದ್ದು, ಸಾವು–ನೋವುಗಳು ಸಾಮಾನ್ಯವಾಗಿವೆ. ರೋಗಾಣು ನಿಗ್ರಹಕ್ಕೆ ಸರ್ಕಾರ ಕದನಕ್ಕಿಳಿದಿದೆ. ಸರ್ಕಾರೇತರ ಸಂಸ್ಥೆಗಳು, ಸಹೃದಯಿಗಳೂ ನೆರವಿಗೆ ಧಾವಿಸಿದ್ದಾರೆ. ವಾಯುವಿಹಾರಕ್ಕೆ ಬರುವವರು, ದಾರಿಹೋಕರು ಸೇರಿದಂತೆ ನಿತ್ಯವೂ ಸರಾಸರಿ 300 ಜನರಿಗೆ ಕಷಾಯ ವಿತರಣೆ ಮಾಡಲಾಗುತ್ತಿದೆ. ವೇದಿಕೆಯ ಈ ಸಾಮಾಜಿಕ ಕಳಕಳಿ ಜನರ ಪ್ರಶಂಸೆಗೆ ಪಾತ್ರವಾಗಿದೆ.

‘ಮೂಲತಃ ಬೇಡಕಿಹಾಳದವರಾದ ಯಾದಗೂಡದ ಆಯುರ್ವೇದ ವೈದ್ಯ ಚಂದ್ರಕಾಂತ ದೇಸಾಯಿ ಅವರು ಕಳೆದ ವರ್ಷ ಕೊರೊನಾ ಸಮಯದಲ್ಲಿ ಮಹಾರಾಷ್ಟ್ರದ ಚಂದಗಡ ಪರಿಸರದ ಸಾವಿರಾರು ಜನರಿಗೆ ಕಷಾಯ ನೀಡಿದ್ದರು. ಅದನ್ನು ಸೇವಿಸಿದವರಲ್ಲಿ ಕೊರೊನಾ ಸೋಂಕು ಕಂಡು ಬಂದಿರಲಿಲ್ಲ ಎನ್ನುವುದು ಗೊತ್ತಾಗಿತ್ತು. ಇದನ್ನು ಮನಗಂಡು ನಾವೂ ಜನರಿಗೆ ಉಚಿತ ಕಷಾಯ ವಿತರಣೆ ಆರಂಭಿಸಿದ್ದೇವೆ. ಅರಿಸಿನ, ದಾಲ್ಚಿನ್ನಿ, ಮೊದಲಾದ ಔಷಧೀಯ ಗುಣವುಳ್ಳ ಚೂರ್ಣಗಳ ಪಾಕೆಟ್‌ಗಳನ್ನು ದೇಸಾಯಿ ಅವರಿಂದ ಖರೀದಿಸಿ, ಲೀಟರ್ ನೀರಿಗೆ ಒಂದು ಪಾಕೆಟ್‌ ಚೂರ್ಣ ಮಿಶ್ರಣ ಮಾಡಿ, ಅದರಲ್ಲಿ ಕಪ್ಪು ತುಳಸಿ ಎಲೆ, ರುಚಿಗೆ ತಕ್ಕಷ್ಟು ಸಾವಯವ ಬೆಲ್ಲ ಹಾಕಿ ಕುದಿಸಿ, ನಿತ್ಯವೂ 10 ಲೀಟರ್‌ಗೂ ಹೆಚ್ಚು ಕಷಾಯ ತಯಾರಿಸಿ ಸಾರ್ವಜನಿಕರಿಗೆ ವಿತರಣೆ ಮಾಡುತ್ತಿದ್ದೇವೆ. ಒಂದು ಲೀಟರ್‌ನಲ್ಲಿ 30 ಕಪ್‌ ಕಷಾಯ ತಯಾರಾಗುತ್ತದೆ’ ಎಂದು ವೇದಿಕೆ ಅಧ್ಯಕ್ಷ ಪ್ರೊ.ಡಿ.ಎನ್. ದಾಬಾಡೆ ‘ಪ್ರಜಾವಾಣಿ’ಗೆ ತಿಳಿಸಿದರು.

ಸಹೃದಯಿ ದಾನಿಗಳ ಸಹಕಾರ:

ಉಪಾಧ್ಯಕ್ಷ ಅಭಯ ಖೋತ್, ಪ್ರಮೋದಕುಮಾರ ಪಾಟೀಲ, ಕಸ್ತೂರಿ ಶಾಸ್ತ್ರಿ, ಬ್ರಿಜೇಶ ಶಾಸ್ತ್ರಿ, ಕೆ.ವಿ. ಜೋಶಿ, ಎಸ್.ಬಿ. ನಿಂಬಾಳಕರ, ವಡೇರ್, ಬಿ.ಎನ್. ನಾಯಿಕ, ಜಿ.ಬಿ. ನಿಂಬಾಳಕರ, ಪ್ರಧಾನ ಕುಂಬಾರ, ಹಸನ ಮುಲ್ಲಾ, ಅನಂತ ಮೋರೆ ವಿತರಣೆ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

‘ಕಷಾಯ ಪಾಕೆಟ್ ಖರೀದಿ, ಕಷಾಯ ತಯಾರಿಸುವ ಮಹಿಳೆಯರ ಸಂಬಳ, ಪ್ಲಾಸ್ಟಿಕ್ ಕಪ್ ಮೊದಲಾದ ವೆಚ್ಚ ಸೇರಿದಂತೆ ನಿತ್ಯವೂ ₹ 4,240 ಬೇಕಾಗುತ್ತದೆ. ದಾನಿಗಳು ಕೈಜೋಡಿಸಿದ್ದಾರೆ. ಪ್ರತಿ ವಾರದ ಖರ್ಚು–ವೆಚ್ಚವನ್ನು ಒಬ್ಬೊಬ್ಬ ದಾನಿ ವಹಿಸಿಕೊಂಡಿದ್ದಾರೆ. ವೇದಿಕೆಯ ಕಾರ್ಯಕರ್ತರು ವಿತರಣೆ ಕೆಲಸದಲ್ಲಿ ತೊಡಗಿದ್ದಾರೆ’ ಎಂದು ಅಧ್ಯಕ್ಷರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.