ಬೆಳಗಾವಿ: ‘ಇಲ್ಲಿ ನಡೆಯುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಶಾಸಕರಿಗೆ ದಿನದ ಭತ್ಯೆ ನೀಡಲಾಗುತ್ತಿದೆ. ಹೀಗಿರುವಾಗ ಅವರಿಗೆ ಉಚಿತವಾಗಿ ಊಟ, ಉಪಾಹಾರ ನೀಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಅದಕ್ಕೆ ತಗುಲುವ ವೆಚ್ಚವನ್ನು ವಿಧಾನಸಭೆ ಅಧ್ಯಕ್ಷ, ವಿಧಾನ ಪರಿಷತ್ ಸಭಾಪತಿ ಅಥವಾ ಸಂಬಂಧಿತ ಅಧಿಕಾರಿಯಿಂದ ಭರಿಸಿಕೊಳ್ಳುವಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಹೇಳಿದರು.
ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧಿವೇಶನ ವೇಳೆ ಊಟ, ಉಪಾಹಾರಕ್ಕಾಗಿ ಶಾಸಕರಿಗೆ ದಿನಕ್ಕೆ ₹2,500 ಭತ್ಯೆ ನೀಡಲಾಗುತ್ತಿದೆ. ಈ ಹಣದಲ್ಲೇ ಶಾಸಕರು ಊಟ, ಉಪಾಹಾರ ಸೇವಿಸಬಹುದು. ಹಾಗಾಗಿ ಅವರಿಗೆ ಉಚಿತವಾಗಿ ಊಟ, ಉಪಾಹಾರ ನೀಡದಂತೆ ವಿಧಾನಸಭೆ ಅಧ್ಯಕ್ಷರು, ವಿಧಾನ ಪರಿಷತ್ ಸಭಾಪತಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ’ ಎಂದರು.
‘ಸದನದ ಕಲಾಪಗಳಲ್ಲಿ ಕಡ್ಡಾಯವಾಗಿ ಭಾಗವಹಿಸದ ಶಾಸಕರಿಗೆ ಸರ್ಕಾರದಿಂದ ನೀಡಲಾಗುವ ಭತ್ಯೆ ತಡೆಯುವ ಬದಲಿಗೆ, ಹಾಜರಾತಿ ಹೆಚ್ಚಳಕ್ಕಾಗಿ ಸರ್ಕಾರದಿಂದಲೇ ಉಚಿತವಾಗಿ ಊಟ, ಉಪಾಹಾರ ನೀಡುವುದನ್ನು ಮುಂದುವರಿಸುವುದು ಸರಿಯಲ್ಲ’ ಎಂದು ದೂರಿದರು.
‘ಅಧಿವೇಶನದಲ್ಲಿ ಭತ್ಯೆ ಪಡೆದುಕೊಳ್ಳುತ್ತಿರುವ ಶಾಸಕರಿಗೆ ಉಚಿತವಾಗಿ ಊಟ, ಉಪಾಹಾರ ನೀಡಲು ನಿಯಮಾವಳಿಯಲ್ಲಿ ಅವಕಾಶವಿದ್ದರೆ, ಅದರ ಪ್ರತಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ವಿಧಾನಸಭೆ ಸಚಿವಾಲಯದ ಅಧಿಕಾರಿಗೆ ಅರ್ಜಿ ಸಲ್ಲಿಸಿದ್ದೆವು. ಆದರೆ, ಯಾರೂ ನಿಖರ ಮಾಹಿತಿ ನೀಡದೆ ಸತಾಯಿಸುತ್ತಿರುವ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.