
ಬೆಳಗಾವಿ: ‘ಭಾರತೀಯ ಸೈನ್ಯ ಸೇರಲಿಚ್ಛಿಸುವ ಯುವಕರಿಗೆ ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಉಚಿತ ತರಬೇತಿ, ಜತೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ.
ಕ್ಷೇತ್ರದ ಕುದ್ರೆಮನಿ ಗ್ರಾಮದಲ್ಲಿ ಬುಧವಾರ ಹಳದಿ– ಕುಂಕುಮ ಕಾರ್ಯಕ್ರಮ ನಡೆಸಿ, ಭಾರತೀಯ ಸೇನೆಗೆ ಆಯ್ಕೆಯಾಗಿರುವ ಗ್ರಾಮದ ಇಬ್ಬರು ಯುವತಿಯರು ಸೇರಿದಂತೆ ಒಟ್ಟು 9 ಜನರನ್ನು ಸನ್ಮಾನಿಸಿ ಅವರು ಮಾತನಾಡಿದರು.
‘ಬೆಳಗುಂದಿಯಲ್ಲಿ ಕ್ರೀಡಾಂಗಣ ನಿರ್ಮಿಸಿ, ಭಾರತೀಯ ಸೈನ್ಯ ಸೇರಲು ಇಚ್ಛಿಸುವ ಕ್ಷೇತ್ರದ ಯುವಕರಿಗೆ ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಉಚಿತ ತರಬೇತಿ ನೀಡಲಾಗುವುದು. ಮಕ್ಕಳ ಭವಿಷ್ಯಕ್ಕಾಗಿ ಇನ್ನೂ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು. ಪಾಲಕರು ಕೂಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಅವರ ಭವಿಷ್ಯ ರೂಪಿಸಬೇಕು’ ಎಂದು ಸಚಿವರು ತಿಳಿಸಿದರು.
‘ನಮ್ಮ ಮಕ್ಕಳು ಎಲೆಕ್ಟ್ರಿಷಿಯನ್, ಪೇಂಟರ್, ಗ್ಯಾರೇಜ್ ಕೆಲಸ ಇವುಗಳಲ್ಲೇ ಎಷ್ಟು ವರ್ಷ ಮುಂದುವರಿಯುವುದು? ಇವರೂ ದೊಡ್ಡ ದೊಡ್ಡ ಹುದ್ದೆಗೆ ಹೋಗುವುದು ಬೇಡವೇ? ದೊಡ್ಡ ಅಧಿಕಾರಿಗಳಾಗುವುದು ಬೇಡವೇ ಎಂದು ಪ್ರಶ್ನಿಸಿದ ಸಚಿವೆ, ಈ ಬಾರಿ 9 ಯುವಕರನ್ನು ಸನ್ಮಾನಿಸಿದ್ದೇನೆ. ಮುಂದಿನ ವರ್ಷ ಇದು 100 ಆಗಬೇಕು. ಈಗ ಆಯ್ಕೆಯಾಗಿರುವ ಯುವಕ, ಯುವತಿಯರು ಇತರರಿಗೆ ಮಾದರಿಯಾಗಬೇಕು’ ಎಂದರು.
‘ಗ್ರಾಮದಲ್ಲಿ ದೇವಸ್ಥಾನಗಳ ನಿರ್ಮಾಣ ಸೇರಿದಂತೆ ಹಲವು ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮದ ವ್ಯಕ್ತಿಯೊಬ್ಬರಿಗೆ ಅನಾರೋಗ್ಯ ಉಂಟಾದಾಗ ಸುಮಾರು ₹20 ಲಕ್ಷ ವೆಚ್ಚದ ಚಿಕಿತ್ಸೆಯನ್ನು ಉಚಿತವಾಗಿ ಮಾಡಿಸಿಕೊಡಲಾಗಿದೆ’ ಎಂದು ಹೇಳಿದರು.
ಕರಾಟೆಯಲ್ಲಿ ವಿವಿಧ ಪ್ರಶಸ್ತಿಗಳನ್ನು ಪಡೆದ ಮಕ್ಕಳನ್ನು ಸಹ ಸಚಿವೆ ಸನ್ಮಾನಿಸಿದರು. ನಂತರ ಗ್ರಾಮದ ನಾಯಕ ಗಲ್ಲಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪೂಜೆ ನೆರವೇರಿಸಿದರು.
ಕಾಡಾ ಅಧ್ಯಕ್ಷರಾದ ಯುವರಾಜ ಕದಂ, ಮುಖಂಡರಾದ ಬಾಳು ದೇಸೂರಕರ್, ವಿನಾಯಕ ಪಾಟೀಲ, ದೀಪಕ್ ಪಾಟೀಲ, ಅರುಣ ದೇವನ್, ವೈಜನಾಥ್ ರಾಜಗೋಳ್ಕರ್, ವಿಮಲ ಸಾಕರೆ, ಶುಭಾಂಗಿ ರಾಜಗೋಳ್ಕರ್, ಪಿಡಿಒ ಸುಮಿತ್ರಾ ಮಿರ್ಜಿ, ಲತಾ ಶಿವಣಗೇಕರ್, ಶಂಕರ ಪಾಟೀಲ, ಪ್ರಕಾಶ್ ಯರೋಳಕರ್, ವೈಶಾಲಿ ಕಾಂಡೇಕರ್ ಹಾಗೂ ಗ್ರಾಮದ ಪ್ರಮುಖರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸಗಡ ಗ್ರಾಮದ ಒಳಗಿನ ರಸ್ತೆಗಳ ಅಭಿವೃದ್ಧಿಗಾಗಿ ಸುಮಾರು ₹1 ಕೋಟಿ ಅನುದಾನ ಒದಗಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿದರು. ನಂತರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಅರಿಸಿನ– ಕುಂಕುಮ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಗ್ರಾಮದ ಸಮಗ್ರ ಅಭಿವೃದ್ಧಿಗೆ ಕಳೆದ 7 ವರ್ಷದಿಂದ ಸಾಕಷ್ಟು ಅನುದಾನ ಒದಗಿಸಲಾಗಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ಇಡೀ ಕ್ಷೇತ್ರದ ಅಭಿವೃದ್ಧಿ ಮಾಡಲಾಗುತ್ತಿದ್ದು ಜನರ ಸಹಕಾರ ಇದೇ ರೀತಿ ಇರಲಿ ಎಂದು ವಿನಂತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.