ADVERTISEMENT

ದೇವನಹಳ್ಳಿ: ಜೆಡಿಎಸ್‌ನಿಂದ ರುದ್ರೇಶ್ ಕಣಕ್ಕೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 3:46 IST
Last Updated 18 ಮಾರ್ಚ್ 2021, 3:46 IST
ನಗರೇಶ್ವರ ದೇವಾಲಯದ ಆವರಣದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿದರು
ನಗರೇಶ್ವರ ದೇವಾಲಯದ ಆವರಣದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿದರು   

ದೇವನಹಳ್ಳಿ: ಪುರಸಭೆಯ 14ನೇ ವಾರ್ಡಿನ ಉಪ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ರುದ್ರೇಶ್ ಅವರನ್ನು ಚುನಾವಣಾ ಕಣಕ್ಕೆ ಇಳಿಸಲಾಗುತ್ತಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ನಗರೇಶ್ವರ ದೇವಾಲಯದಲ್ಲಿ ಬುಧವಾರ ನಾಮಪತ್ರ ಸಲ್ಲಿಕೆಗೆ ಮೊದಲು ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಆದೇಶದಂತೆ ಯುವಕರಿಗೆ ಆದ್ಯತೆ ನೀಡಲಾಗಿದೆ. ಈ ಹಿಂದೆ ಜೆಡಿಎಸ್ ಸದಸ್ಯರಾಗಿದ್ದ ವೈ.ಸಿ. ಸತೀಶ್ ಕುಮಾರ್ ಕಳೆದ ವರ್ಷ ಅಕಾಲಿಕ ಮರಣದಿಂದಾಗಿ ಖಾಲಿಯಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಕಳೆದ 20 ವರ್ಷಗಳಿಂದ 14ನೇ ವಾರ್ಡ್ ಜೆಡಿಎಸ್‌ನ ಭದ್ರಕೋಟೆಯಾಗಿದೆ. ವಾರ್ಡ್‌ನಲ್ಲಿರುವ ಜೆಡಿಎಸ್ ಮುಖಂಡರು, ನಿಷ್ಠಾವಂತ ಕಾರ್ಯಕರ್ತರು ಅಭ್ಯರ್ಥಿ ರುದ್ರೇಶ್ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.

ADVERTISEMENT

ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ.ಎ. ರವೀಂದ್ರ ಮಾತನಾಡಿ, ಈ ವಾರ್ಡಿನಲ್ಲಿ ಯಾವುದೇ ಒತ್ತಡ, ಆಕ್ಷೇಪವಿಲ್ಲದೆ ಸ್ಥಳೀಯ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರ ಒಮ್ಮತದ ನಿರ್ಣಯದ ಮೇರೆಗೆ ರುದ್ರೇಶ್‌ಗೆ ಪಕ್ಷದ ಬಿ. ಫಾರಂ ನೀಡಲಾಗಿದೆ. ಅವರನ್ನು ಗೆಲ್ಲಿಸುವ ಗುರುತರ ಜವಾಬ್ದಾರಿ ಸ್ಥಳೀಯ ಮುಖಂಡರ ಮೇಲಿದೆ ಎಂದು ಹೇಳಿದರು.

ಜೆಡಿಎಸ್ ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ಆರ್. ಮುನೇಗೌಡ, ನಗರ ಘಟಕದ ಅಧ್ಯಕ್ಷ ಮುನಿನಂಜಪ್ಪ, ಪ್ರಧಾನ ಕಾರ್ಯದರ್ಶಿ ಬಾಬು, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಭರತ್ ಕುಮಾರ್, ಪ್ರಚಾರ ಸಮಿತಿ ಘಟಕ ತಾಲ್ಲೂಕು ಅಧ್ಯಕ್ಷ ನಗರಗನಹಳ್ಳಿ ಶ್ರೀನಿವಾಸ್, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಮುನಿರಾಜು, ಪುರಸಭೆ ಉಪಾಧ್ಯಕ್ಷೆ ಪುಷ್ಪಲತಾ ಲಕ್ಷ್ಮಿನಾರಾಯಣ್, ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಎಸ್. ನಾಗೇಶ್, ಸದಸ್ಯೆ ಲೀಲಾವತಿ, ರವಿಕುಮಾರ್, ಸಿ.ಬಿ. ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.