ಬೆಳಗಾವಿ: ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಜೂಜಾಟ ಆಡುವುದು, ಸ್ಮಾರ್ಟ್‌ಫೋನ್ ಬಳಕೆ ಮಾಡುವ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಜೈಲಿನೊಳಗಿದ್ದವರೇ ಈ ವಿಡಿಯೊಗಳನ್ನು ಹರಿಬಿಟ್ಟಿದ್ದಾರೆ.
ಜೈಲಿನ ಸರ್ಕಲ್ ನಂಬರ್-2ರ ಬ್ಯಾರಕ್‌ನಲ್ಲಿ ಗಾಂಜಾ ಡೀಲರ್ ಶಾಹಿದ್ ಖುರೇಶಿ ಹಾಗೂ ಶಿವಮೊಗ್ಗ ಮೂಲದ ಅಪರಾಧಿ ಆನಂದ ನಾಯಕ್ ಸೇರಿ ಹಲವರು ವಿಡಿಯೊದಲ್ಲಿ ಕಾಣಿಸಿದ್ದಾರೆ. ನಾಲ್ವರು ಕೈದಿಗಳು ಜೂಜಿಗೆ ಹಣ ಕಟ್ಟಿ ಆಡುವುದು ರೆಕಾರ್ಡ್ ಆಗಿದೆ. ಇನ್ನುಳಿದ ಹಲವು ಕೈದಿಗಳು ಈ ಜೂಜಾಟ ನೋಡುತ್ತಲೇ ಮೋಜು– ಮಸ್ತಿಯಲ್ಲಿ ತೊಡಗಿದ್ದಾರೆ.
ಇವರೊಂದಿಗೇ ಇದ್ದ ಕೈದಿ ಇದನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು, ಹೊರಗಿರುವ ತನ್ನ ಗೆಳೆಯರಿಗೆ ಹಂಚಿದ್ದಾನೆ. ಜೈಲಿನಲ್ಲಿದ್ದರೂ ತಾನು ಐಷಾರಾಮಿ ಆಗಿದ್ದೇನೆ ಎಂಬ ಸಂದೇಶ ರವಾನಿಸಲು ಹೀಗೆ ಮಾಡಿದ್ದಾನೆ ಎನ್ನಲಾಗಿದೆ.
ಕಾರಾಗೃಹದಲ್ಲಿ ಮೊಬೈಲ್‌ಗೆ ಕಡಿವಾಣ ಹಾಕಲು ಜಾಮರ್ ಅಳವಡಿಸಲಾಗಿದೆ ಎಂದು ಈ ಹಿಂದೆಯೇ ಬಂದಿಖಾನೆ ಇಲಾಖೆ ಅಧಿಕಾರಿಗಳು ಹೇಳಿದ್ದರು. ಎರಡು ತಿಂಗಳ ಹಿಂದೆಯೇ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು 250ಕ್ಕೂ ಹೆಚ್ಚು ಪೊಲೀಸ್ ಪಡೆಯೊಂದಿಗೆ ಏಕಾಏಕಿ ದಾಳಿ ನಡೆಸಿದ್ದರು. ಆಗಲೂ ಏನೂ ಸಿಕ್ಕಿಲ್ಲ ಎಂದು ಹೇಳಿದ್ದರು. ಆದರೆ, ಈಗ ಗಾಂಜಾ, ಇಸ್ಪೀಟ್ ಎಲೆಗಳು, ಸಿಗರೇಟ್ ತುಣುಕು, ಮೊಬೈಲ್‌ಗಳೂ ಪತ್ತೆಯಾಗಿವೆ.
ಇದೇ ಕಾರಾಗೃಹದಲ್ಲಿರುವ ಕೊಲೆ ಅಪರಾಧಿ ಜಯೇಶ್ ಪೂಜಾರಿ ಎಂಬಾತ, ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಕೊಲೆ ಬೆದರಿಕೆ ಹಾಕಿದ್ದ. ₹100 ಕೋಟಿ ನೀಡದಿದ್ದರೆ ಗಡ್ಕರಿ ಅವರ ನಾಗ್ಪುರದ ಕಚೇರಿಯನ್ನು ಬಾಂಬ್ ಇಟ್ಟು ಸ್ಫೋಟಿಸುತ್ತೇನೆ, ನಾನು ದಾವೂದ್ ಇಬ್ರಾಹಿಂ ಸಹಚರ ಎಂದೆಲ್ಲ ಹೇಳಿದ್ದ. ಈ ಪ್ರಕರಣದ ಬಳಿಕ ಜೈಲಿನೊಳಗೆ ಮೊಬೈಲ್ ಬಳಕೆ ಆಗುತ್ತಿರುವ ಸಂಗತಿ ಹೊರಬಿದ್ದಿತ್ತು.
ಬಳಿಕ ಗೃಹಸಚಿವ ಡಾ.ಜಿ.ಪರಮೇಶ್ವರ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದರು. ಜೈಲಿನೊಳಗೆ ಮೊಬೈಲ್ ಬಳಕೆಗೆ ಕಡಿವಾಣ ಹಾಕಿದ್ದಾಗಿ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.