
ಬೆಳಗಾವಿ: ಸಮಕಾಲೀನ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಆದರ್ಶಗಳ ಮಹತ್ವ ಸಾರುವ ಉದ್ದೇಶದಿಂದ ನಾಟಕವೊಂದು ಸಿದ್ಧಗೊಂಡಿದೆ. ಬೆಳಗಾವಿಯ ನಾಟಕಕಾರ ಡಿ.ಎಸ್.ಚೌಗಲೆ ವಿರಚಿತ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ ಈಗ ರಾಜ್ಯದ ವಿವಿಧೆಡೆ ರಂಗ ಪ್ರಯೋಗವಾಗುತ್ತಿದೆ. ಕುಂದಾನಗರಿ ನೆಲದಲ್ಲಿ ಹುಟ್ಟಿದ ಈ ನಾಟಕ ನಾಡಿನಾದ್ಯಂತ ಗಾಂಧಿ ತತ್ವಗಳ ಸಿಹಿ ಉಣಬಡಿಸುತ್ತಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಾಯಣ ಶಿವಮೊಗ್ಗ, ಬೆಳಗಾವಿಯ ಕನ್ನಡ ಭವನ ಸಹಯೋಗದಲ್ಲಿ ಜ.21ರಂದು ಸಂಜೆ 6.30ಕ್ಕೆ ರಾಮದೇವ್ ಹೋಟೆಲ್ ಹಿಂಭಾಗದ ಕನ್ನಡ ಭವನ ರಂಗಮಂದಿರದಲ್ಲಿ ಉಚಿತ ಪ್ರಯೋಗ ಕೂಡ ಆಯೋಜಿಸಲಾಗಿದೆ. ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಅಧಿವೇಶನ ನಡೆದು ನೂರು ವರ್ಷಗಳು ಸಂದ ಸಂದರ್ಭದಲ್ಲಿ ಅವರ ಆದರ್ಶಗಳ ಪುನರ್ ಆಂದೋಲನ ಯುವಜನರನ್ನು ಸೆಳೆಯಲಿದೆ.
ಶಿವಮೊಗ್ಗ ರಂಗಾಯಣದ ರೆಪರ್ಟರಿ ಕಲಾವಿದರು ಅಭಿನಯಿಸುವ ಈ ನಾಟಕವನ್ನು ಚಿದಂಬರರಾವ್ ಜಂಬೆ ಅವರು ನಿರ್ದೇಶಿಸಿದ್ದಾರೆ. ಗಾಂಧಿ ತತ್ವಗಳನ್ನೇ ಹನನ ಮಾಡುವಂಥ ಇಂದಿನ ದಿನಗಳಲ್ಲಿ ಅದರ ಮಹತ್ವವನ್ನು ಮನೋಜ್ಞವಾಗಿ ಮೂಡಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಸಹ ನಿರ್ದೇಶಕರಾದ ಓಂಕಾರ ಮೇಗಳಾಪುರ, ಸಂಗೀತ ಸಂಯೋಜನೆ ಮಾಡಿದ ರಾಘವ ಕಮ್ಮಾರ, ಪುರುಷೋತ್ತಮ ತಲವಾಟ ಅವರ ಪ್ರಸಾಧನ, ತಜುಮಾ ವಿಶೇಷವಾದ ವಸ್ತ್ರ ವಿನ್ಯಾಸ ಎಲ್ಲವೂ ಹದವಾಗಿರುವುದು ಈ ನಾಟಕದ ವಿಶೇಷ.
ಸ್ವಾತಂತ್ರ್ಯ ಪೂರ್ವದಲ್ಲಿ ನಡೆಯುವ ಕತೆಯೊಂದನ್ನು ಕೃತಿಕರ್ತೃ ಡಿ.ಎಸ್.ಚೌಗಲೆ ನಾಜೂಕಿನಿಂದ ನೇಯ್ದಿದ್ದಾರೆ. ಹಳ್ಳಿಯೊಂದರ ಅಜ್ಜ ತನ್ನ ಸುತ್ತಲಿನ ಜನರನ್ನು ಸೇರಿಸಿಕೊಂಡು ಸ್ವಾತಂತ್ರ್ಯ ಹೋರಾಟಕ್ಕೆ ಸಜ್ಜಾಗುವುದೇ ಕತೆಯ ಹೂರಣ. ಬ್ರಿಟಿಷರೊಂದಿಗೆ ಊರಿನ ಜನ ಹೋರಾಡಲು ನಿಂತಾಗ ಕಂಪನಿ ಸರ್ಕಾರದ ಬಾಲಂಗೋಚಿಗಳಂತೆ ಇದ್ದ ಸ್ಥಳೀಯರೇ ಏನೆಲ್ಲ ಕಿತಾಪತಿ ಮಾಡುತ್ತಾರೆ, ಬಾಪೂವಿನ ಅವತಾರಿ ಅಜ್ಜ ಅವುಗಳನ್ನು ಹೇಗೆ ಮೆಟ್ಟಿ ನಿಲ್ಲುತ್ತಾನೆ ಎನ್ನುವುದು ಪ್ರೇಕ್ಷಕನ ಕಣ್ಣಲ್ಲಿ ಉಳಿಯುವಂಥದ್ದು. ಮಹಾತ್ಮ ಗಾಂಧೀಜಿ ತಮ್ಮೂರಿಗೆ ಬರುತ್ತಾರೆ ಎಂಬ ನಿರೀಕ್ಷೆಯ ಕಣ್ಣುಗಳನ್ನು ಲೇಖಕ ಸೊಗಸಾಗಿ ಚಿತ್ರಿಸಿದ್ದಾರೆ. ಬಾಪೂಜಿ ಆ ಊರಿಗೆ ಬರುತ್ತಾರೆಯೇ? ಊರಿನ ಗಾಂಧಿ ಎಂದೇ ಖ್ಯಾತನಾದ ಅಜ್ಜನ ಕತೆ ಹೇಗೆ ಕೊನೆಗೊಳ್ಳುತ್ತದೆ ಎಂಬುದನ್ನು ನಾಟಕ ನೋಡಿಯೇ ಅನುಭವಿಸಬೇಕು.
‘ಗಾಂಧೀಜಿ ವ್ಯಕ್ತಿತ್ವ ಎಲ್ಲ ಕಾಲಕ್ಕೂ ಪ್ರಸ್ತುತ. ಇಡೀ ಪ್ರಪಂಚ ಅವರ ತತ್ವ, ಸಿದ್ಧಾಂತಗಳನ್ನು ಒಪ್ಪಿಕೊಂಡಿದೆ. ಪ್ರಭುತ್ವದ ವಿರುದ್ಧ ಅಹಿಂಸಾತ್ಮಕ ಪ್ರತಿಭಟನೆಯನ್ನು ರೂಪಿಸಿದ ಬಾಪು ಅದನ್ನು ‘ಸತ್ಯಾಗ್ರಹ’ ಎಂದು ಕರೆದರು. ಸಾತ್ವಿಕ ರೂಪದ ಈ ಸಂಘರ್ಷ ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸಿ ಕಾಪಿಡಲು ಕಂಡುಕೊಂಡ ಪರ್ಯಾಯ ಮಾರ್ಗ. ನಿರಂತರ ಸತ್ಯಶೋಧದಲ್ಲಿ ತೊಡಗಿದ ಬಾಪು, ಆ ಶೋಧದ ಬೆಳಗಲ್ಲಿ ತಮ್ಮನ್ನು ತಾವು ರೂಪಿಸಿಕೊಳ್ಳುತ್ತ ಸಾಗಿದವರು. ‘ನಮ್ಮೊಳಗೊಬ್ಬ ಗಾಂಧಿ’ ನಾಟಕವು ವರ್ತಮಾನದಲ್ಲೂ ಅಂಥ ಮಹಾತ್ಮನನ್ನು ಅರಿಯಲು ಯತ್ನಿಸುವ ಪ್ರಾಮಾಣಿಕ ಪ್ರಯತ್ನ’ ಎಂಬುದು ಇದಕ್ಕೆ ರಂಗರೂಪ ಕೊಟ್ಟವರ ಮಾತು.
‘ಗಾಂಧಿವಾದಿ ಅಜ್ಜ ಒಂದೆಡೆ ಚಳವಳಿ ನಡೆಸುತ್ತಿದ್ದರೆ, ಅದನ್ನು ತಡೆಯುವ ಕುತಂತ್ರಗಳನ್ನು ಶಾನುಭೋಗನಂತ ಕಂಪನಿ ಸರ್ಕಾರದ ದಲ್ಲಾಳಿಗಳು ಮಾಡುತ್ತಾರೆ. ಶೆಟ್ಟಿ ಮತ್ತು ಮೂಕಮ್ಮನವರ ಮಧ್ಯದ ಸೂಕ್ಷ್ಮ ಮಾನವ ಸಂಬಂಧಗಳು ಹೀಗೆ ಹಲವು ರಸಾನುಭವಗಳಿಗೆ ನಾಟಕವು ಸಾಕ್ಷಿಯಾಗುತ್ತದೆ. ಗಾಂಧೀಜಿಯವರ ಮೌಲ್ಯಗಳ ಜೊತೆ ಬದುಕುವ ಶ್ರೀಸಾಮಾನ್ಯ ಒಂದೆಡೆಯಾದರೆ, ಇನ್ನೊಂದೆಡೆ ಪ್ರಭುತ್ವದೊಂದಿಗೆ ರಾಜಿಗೊಂಡ ಶಕ್ತಿಗಳು ಮುಖಾಮುಖಿಗೊಂಡು ಹುಟ್ಟುವ ನಾಟಕೀಯ ಸಂಘರ್ಷದಲ್ಲಿ ನಾಟಕವು ಒಂದು ವಿಲಕ್ಷಣ ಅನುಭೂತಿ ನೀಡುತ್ತದೆ’ ಎನ್ನುತ್ತಾರೆ ಕೃತಿಕಾರ.
ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಹಿನ್ನೆಲೆಯಲ್ಲಿ ‘ಗಾಂಧಿ ಭಾರತ’ ಆಯೋಜಿಸಲಾಗಿದೆ. ಅದರ ಅನುದಾನವನ್ನು ಈ ರಂಗಪ್ರಯೋಗಕ್ಕೆ ನೀಡಿದರೆ ಹೆಚ್ಚು ಪ್ರಚುರಪಡಿಸಬಹುದುಡಿ.ಎಸ್.ಚೌಗಲೆ ನಾಟಕಕಾರ
21ರಂದು ಪ್ರದರ್ಶನ
ಇದೇ 21ರಂದು ಪ್ರದರ್ಶನಗೊಳ್ಳುವ ‘ನಮ್ಮೊಳಗೊಬ್ಬ ಗಾಂಧಿ’ ನಾಟಕದ ರಂಗ ಪ್ರಯೋಗವನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ. ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವಲಯದ ಜಂಟಿ ನಿರ್ದೇಶಕ ಕೆ.ಎಚ್.ಚೆನ್ನೂರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಡಿ.ಎಸ್.ಚೌಗಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಉಪಸ್ಥಿತರಿರುವರು. ನಾಟಕ ವೀಕ್ಷಣೆಗೆ ಉಚಿತ ಪ್ರವೇಶವಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.