ADVERTISEMENT

ಬೆಳಗಾವಿ | ಜೋತು ಬಿದ್ದ ತಂತಿ, ಹಾಳಾದ ಪರಿಕರ: ಇರಲಿ ಎಚ್ಚರ

ಇಮಾಮ್‌ಹುಸೇನ್‌ ಗೂಡುನವರ
Published 1 ಸೆಪ್ಟೆಂಬರ್ 2025, 3:04 IST
Last Updated 1 ಸೆಪ್ಟೆಂಬರ್ 2025, 3:04 IST
<div class="paragraphs"><p>ಬೆಳಗಾವಿಯ ಹನುಮಾನ ನಗರದಲ್ಲಿನ ವಿದ್ಯುತ್‌ ಪರಿಕರ ಅಪಾಯಕ್ಕೆ ಆಹ್ವಾನ ನೀಡುತ್ತಿದೆ</p></div>

ಬೆಳಗಾವಿಯ ಹನುಮಾನ ನಗರದಲ್ಲಿನ ವಿದ್ಯುತ್‌ ಪರಿಕರ ಅಪಾಯಕ್ಕೆ ಆಹ್ವಾನ ನೀಡುತ್ತಿದೆ

   

ಬೆಳಗಾವಿ: ಒಂದೆಡೆ ಮಳೆ, ಇನ್ನೊಂದೆಡೆ ಹಬ್ಬ, ಮತ್ತೊಂದೆಡೆ ಜನಜಂಗುಳಿ. ಈ ಎಲ್ಲದರ ಮಧ್ಯೆ ಎಚ್ಚರಿಕೆ ವಹಿಸಬೇಕಾದದ್ದು ವಿದ್ಯುತ್ ಅವಘಡಗಳ ಬಗ್ಗೆ.

ನಗರದ ವಿವಿಧ ಮಾರ್ಗಗಳಲ್ಲಿನ ವಿದ್ಯುತ್‌ ಮೀಟರ್‌ ಬಾಕ್ಸ್‌ಗಳು, ಕೇಬಲ್‌ ಟರ್ಮಿನೇಷನ್‌ ಬಾಕ್ಸ್‌ಗಳು ತೆರೆದ ಸ್ಥಿತಿಯಲ್ಲಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಹಲವೆಡೆ ವಿದ್ಯುತ್‌ ತಂತಿ ಜೋತು ಬಿದ್ದಿರುವುದು ಕಂಡುಬರುತ್ತಿದೆ. ಇಂಥದ್ದೇ ಸ್ಥಿತಿಯಲ್ಲಿ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮ ಸಂಕಟಕ್ಕೆ ಆಸ್ಪದ ನೀಡಬಾರದು ಎಂದರೆ ಮುನ್ನೆಚ್ಚರಿಕೆ ಅಗತ್ಯ.

ADVERTISEMENT

ಕಳೆದ ವರ್ಷ ವಿದ್ಯುತ್‌ ಮೀಟರ್‌ ಬಾಕ್ಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರೆದ ಸ್ಥಿತಿಯಲ್ಲಿದ್ದವು. ಈ ಪೈಕಿ ಹಲವು ಮುಚ್ಚಿ ಸುರಕ್ಷತಾ ಕ್ರಮ ಅನುಸರಿಸಲಾಗಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಈ ಕೆಲಸವಾಗಿಲ್ಲ.

ಗಣೇಶ ಹಬ್ಬದ ಅಂಗವಾಗಿ ವಿವಿಧ ಬಡಾವಣೆಗಳ ಮುಖ್ಯರಸ್ತೆಗಳು, ವೃತ್ತಗಳು ಮತ್ತು ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಸ್ಥಳಗಳು ವಿದ್ಯುದ್ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿವೆ.

ನಗರ ಮತ್ತು ಉಪನಗರ ವ್ಯಾಪ್ತಿಯಲ್ಲಿ 378 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಸಂಜೆ ಆಗುತ್ತಿದ್ದಂತೆ ಅವುಗಳ ವೀಕ್ಷಣೆಗಾಗಿ ನಗರ ಮಾತ್ರವಲ್ಲದೆ; ಗ್ರಾಮೀಣ ಭಾಗದಿಂದಲೂ ಜನಸಾಗರವೇ ಹರಿದುಬರುತ್ತಿದೆ. ಆಗಾಗ ತುಂತುರು ಮಳೆಯೂ ಸುರಿಯುತ್ತಿದೆ. ಹೀಗಿರುವಾಗ, ‘ತೆರೆದ ಸ್ಥಿತಿಯಲ್ಲಿನ ಪರಿಕರಗಳ ಮೂಲಕ ವಿದ್ಯುತ್‌ ಪ್ರವಹಿಸಿ ಅವಘಡ ಸಂಭವಿಸಿದರೆ ಹೇಗೆ’ ಎಂಬುದು ಜನರ ಆತಂಕ.

ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ರಾಣಿ ಚನ್ನಮ್ಮನ ವೃತ್ತದ ಮಾರ್ಗವಾಗಿ ಕಾಲೇಜು ರಸ್ತೆಗೆ ತೆರಳಿದರೆ ಸಾಕು. ಸ್ಮಾರ್ಟ್‌ಸಿಟಿ ಯೋಜನೆಯಡಿ ರಸ್ತೆ ವಿಭಜಕದಲ್ಲಿ ಅಳವಡಿಸಿದ ಬೀದಿದೀಪಗಳಲ್ಲಿ ಹಲವು ಕೇಬಲ್‌ ಟರ್ಮಿನೇಷನ್‌ ಬಾಕ್ಸ್‌ಗಳು ತೆರೆದ ಸ್ಥಿತಿಯಲ್ಲಿರುವುದು ಕಣ್ಣಿಗೆ ಬೀಳುತ್ತದೆ.

ಸದಾಶಿವ ನಗರ, ಹನುಮಾನ ನಗರ, ಕೋಟೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲೂ ವಿದ್ಯುತ್‌ ಪರಿಕರ ಅಪಾಯಕ್ಕೆ ಆಹ್ವಾನ ನೀಡುವ ಸ್ಥಿತಿಯಲ್ಲಿವೆ. ಗಣೇಶೋತ್ಸವ 11ನೇ ದಿನ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಭವ್ಯ ಮೆರವಣಿಗೆ ಮೂಲಕ ವಿಸರ್ಜಿಸಲಾಗುತ್ತದೆ. ನರಗುಂದಕರ ಭಾವೆ ಚೌಕ್‌ನಿಂದ ಆರಂಭವಾಗುವ ಮೆರವಣಿಗೆ ಕಪಿಲೇಶ್ವರ ದೇವಸ್ಥಾನದ ಹೊಂಡದಲ್ಲಿ ಮುಕ್ತಾಯವಾಗುತ್ತದೆ. ಇದನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಜನ ಸೇರುತ್ತಾರೆ.

ಆದರೆ, ಮೆರವಣಿಗೆ ಸಾಗುವ ರಾಮಲಿಂಗಖಿಂಡ ಗಲ್ಲಿಯಲ್ಲಿ ವಿದ್ಯುತ್‌ ಮೀಟರ್‌ ಬಾಕ್ಸ್‌ವೊಂದು ತೆರೆದ ಸ್ಥಿತಿಯಲ್ಲಿದೆ. ಇನ್ನೊಂದು ಬಾಕ್ಸ್‌ನ ಮುಚ್ಚಳ ಮುರಿದಿದೆ.

ಬೆಳಗಾವಿಯ ಸದಾಶಿವ ನಗರದಲ್ಲಿ ವಿದ್ಯುತ್‌ ಪರಿಕರ ತೆರೆದ ಸ್ಥಿತಿಯಲ್ಲಿದೆ

ಸುರಕ್ಷತೆಗೆ ಕ್ರಮ ವಹಿಸಿದ್ದೇವೆ: ಶಿಂಧೆ

‘ಗಣೇಶೋತ್ಸವ ಪ್ರಯುಕ್ತ ನಗರದಲ್ಲಿನ ಎಲ್ಲ ವಿದ್ಯುತ್‌ ಪರಿಕರಗಳ ನಿರ್ವಹಣೆ, ದುರಸ್ತಿ ಮಾಡಿದ್ದೇವೆ. ದೋಷಪೂರಿತ ವಿದ್ಯುತ್‌ ಪರಿವರ್ತಕಗಳನ್ನು ಬದಲಿಸಿದ್ದೇವೆ. ತೆರೆದ ಸ್ಥಿತಿಯಲ್ಲಿದ್ದ ವಿದ್ಯುತ್‌ ಮೀಟರ್‌ ಬಾಕ್ಸ್‌ ಮುಚ್ಚಿದ್ದೇವೆ. ವಿದ್ಯುತ್‌ ಪರಿಕರಗಳಿಗೆ ತಾಗಿದ್ದ ಮರಗಳನ್ನು ಅರಣ್ಯ ಇಲಾಖೆ ಮೂಲಕ ತೆರವುಗೊಳಿಸಿದ್ದೇವೆ. ಜನರ ಸುರಕ್ಷತೆಗೆ ಅಗತ್ಯ ಕ್ರಮ ವಹಿಸಿದ್ದೇವೆ’ ಎಂದು ಹೆಸ್ಕಾಂ ಬೆಳಗಾವಿ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎ.ಎಂ.ಶಿಂಧೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಗಣೇಶನ ಹಬ್ಬದಲ್ಲಿ 11 ದಿನ ನಿರಂತರವಾಗಿ ವಿದ್ಯುತ್‌ ಪೂರೈಕೆ ಮಾಡುತ್ತಿದ್ದೇವೆ. ಜನರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸುತ್ತಿದ್ದೇವೆ. ಆದರೂ, ಯಾವುದಾದರೂ ಸ್ಥಳದಲ್ಲಿ ವಿದ್ಯುತ್‌ ಪರಿಕರಗಳು ತೆರೆದ ಸ್ಥಿತಿಯಲ್ಲಿದ್ದರೆ ತಕ್ಷಣವೇ ಮುಚ್ಚಲಾಗುವುದು’ ಎಂದರು.

ಜನರ ಸುರಕ್ಷತೆಗೆ ಅಗತ್ಯ ಕ್ರಮ ವಹಿಸಿದ್ದೇವೆ. ತೆರೆದ ಸ್ಥಿತಿಯಲ್ಲಿರುವ ಕೇಬಲ್‌ ಟರ್ಮಿನೇಷನ್‌ ಬಾಕ್ಸ್‌ಗಳನ್ನು ಮುಚ್ಚಲಾಗುವುದುಬಿ.
ಶುಭ, ಆಯುಕ್ತೆಮಹಾನಗರ ಪಾಲಿಕೆ
ವಿದ್ಯುತ್‌ ಪರಿಕರಗಳು ಅಪಾಯ ಆಹ್ವಾನಿಸುವಂತಿವೆ. ತ್ವರಿತವಾಗಿ ಸಮಸ್ಯೆ ಸರಿಪಡಿಸಿ ಸುರಕ್ಷೆತೆಗೆ ಆದ್ಯತೆ ಕೊಡಬೇಕು
ಸತೀಶ ಗೌರಗೊಂಡ, ಅಧ್ಯಕ್ಷ, ಸಾರ್ವಜನಿಕ ಗಣೇಶೋತ್ಸವ ಮಂಡಳಿ, ಕುಲಕರ್ಣಿ ಗಲ್ಲಿ

‘ಕಳವು ಮಾಡುತ್ತಿದ್ದಾರೆ’

‘ಬೀದಿದೀಪಗಳಲ್ಲಿನ ಕೇಬಲ್‌ ಟರ್ಮಿನೇಷನ್‌ ಬಾಕ್ಸ್‌ಗಳನ್ನು ಮುಚ್ಚಿ ನಾವು ಸುರಕ್ಷತೆಗೆ ಕ್ರಮ ವಹಿಸಿದ್ದೆವು. ಆದರೆ, ಚಿಂದಿ ಆಯಲು ಬರುವವರು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚನ್ನಮ್ಮನ ವೃತ್ತ, ಆಂಜನೇಯ ನಗರ, ಮಹಾಂತೇಶ ನಗರ ರಸ್ತೆಯಲ್ಲಿನ ಕೇಬಲ್‌ ಟರ್ಮಿನೇಷನ್‌ ಬಾಕ್ಸ್‌ಗಳ ಮುಚ್ಚಳ ಕಳವು ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರ ಗಮನಕ್ಕೆ ತಂದಿದ್ದೇವೆ’ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.

‘ಗಣೇಶೋತ್ಸವ ಪ್ರಯುಕ್ತ ನಗರದಲ್ಲಿನ ಎಲ್ಲ ವಿದ್ಯುತ್‌ ಪರಿಕರಗಳ ನಿರ್ವಹಣೆ, ದುರಸ್ತಿ ಮಾಡಿದ್ದೇವೆ. ದೋಷಪೂರಿತ ವಿದ್ಯುತ್‌ ಪರಿವರ್ತಕಗಳನ್ನು ಬದಲಿಸಿದ್ದೇವೆ. ತೆರೆದ ಸ್ಥಿತಿಯಲ್ಲಿದ್ದ ವಿದ್ಯುತ್‌ ಮೀಟರ್‌ ಬಾಕ್ಸ್‌ ಮುಚ್ಚಿದ್ದೇವೆ. ವಿದ್ಯುತ್‌ ಪರಿಕರಗಳಿಗೆ ತಾಗಿದ್ದ ಮರಗಳನ್ನು ಅರಣ್ಯ ಇಲಾಖೆ ಮೂಲಕ ತೆರವುಗೊಳಿಸಿದ್ದೇವೆ. ಜನರ ಸುರಕ್ಷತೆಗೆ
ಅಗತ್ಯ ಕ್ರಮ ವಹಿಸಿದ್ದೇವೆ’ ಎಂದು ಹೆಸ್ಕಾಂ ಬೆಳಗಾವಿ
ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎ.ಎಂ.ಶಿಂಧೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.