ADVERTISEMENT

Ganesh Chaturthi | ಹೆಚ್ಚಿದ ಉತ್ಸಾಹ: ಎತ್ತರದ ಮೂರ್ತಿಗಳು ಸಿದ್ಧ

ಇಮಾಮ್‌ಹುಸೇನ್‌ ಗೂಡುನವರ
Published 4 ಸೆಪ್ಟೆಂಬರ್ 2024, 6:01 IST
Last Updated 4 ಸೆಪ್ಟೆಂಬರ್ 2024, 6:01 IST
<div class="paragraphs"><p>ಬೆಳಗಾವಿಯಲ್ಲಿ 21 ಅಡಿ ಎತ್ತರದ ಗಣೇಶನ ಮೂರ್ತಿಗೆ ಕಲಾವಿದರು ಅಂತಿಮ ಸ್ಪರ್ಶ ನೀಡಿದರು </p></div>

ಬೆಳಗಾವಿಯಲ್ಲಿ 21 ಅಡಿ ಎತ್ತರದ ಗಣೇಶನ ಮೂರ್ತಿಗೆ ಕಲಾವಿದರು ಅಂತಿಮ ಸ್ಪರ್ಶ ನೀಡಿದರು

   

ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ಬೆಳಗಾವಿ: ಬರದ ಹಿನ್ನೆಲೆಯಲ್ಲಿ ಕಳೆದ ಬಾರಿ ಮಂಕಾಗಿದ್ದ ಗಣೇಶೋತ್ಸವ, ಈ ಬಾರಿ ಕಳೆಗಟ್ಟಿದೆ. ವಿವಿಧ ರಂಗಗಳಲ್ಲಿ ಆರ್ಥಿಕ ವಹಿವಾಟು ಚೇತರಿಕೆ ಕಂಡಿದ್ದು, ‘ಚೌತಿ’ ಸಂಭ್ರಮ ಇಮ್ಮಡಿಗೊಂಡಿದೆ. ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು 10ರಿಂದ 25 ಅಡಿವರೆಗಿನ ಎತ್ತರದ ಮೂರ್ತಿಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ.

ADVERTISEMENT

ಇಲ್ಲಿನ ಬಿ.ಎಸ್‌.ಯಡಿಯೂರಪ್ಪ ಮಾರ್ಗದ ಗೋದಾಮಿನಲ್ಲಿ ಕಲಾವಿದ ಮನೋಹರ ಪಾಟೀಲ, ಅವರ ಪುತ್ರರಾದ ವಿನಾಯಕ ಹಾಗೂ ಪ್ರಸಾದ ಹಲವು ದಶಕಗಳಿಂದ ಗಣೇಶನ ಮೂರ್ತಿ ತಯಾರಿಕೆ ಕಾಯಕದಲ್ಲಿ ತೊಡಗಿದ್ದಾರೆ. ಅವರ ಬಳಿ 20 ಕಾರ್ಮಿಕರು ದುಡಿಯುತ್ತಿದ್ದಾರೆ. ಬೆಳಿಗ್ಗೆ 7ಕ್ಕೆ ಕಲಾಕುಂಚ ಹಿಡಿದರೆ, ಮಧ್ಯರಾತ್ರಿ 12ರವರೆಗೂ ಬೆವರು ಹರಿಸುತ್ತಿದ್ದಾರೆ.

ಈ ವರ್ಷ 50ಕ್ಕೂ ಅಧಿಕ ಸಾರ್ವಜನಿಕ ಗಣೇಶನ ಮೂರ್ತಿ ತಯಾರಿಸಿರುವ ಪಾಟೀಲ ಕುಟುಂಬಸ್ಥರು, ಅವುಗಳಿಗೆ ಅಂತಿಮ ಸ್ಪರ್ಶ ಕೊಡುತ್ತಿದ್ದಾರೆ. ವೈವಿಧ್ಯಮಯ ವಿನ್ಯಾಸಗಳ ಸೀರೆ, ಆಲಂಕಾರಿಕ ವಸ್ತುಗಳಿಂದ ‘ವಿಘ್ನ ನಿವಾರಕ’ನನ್ನು ಸಿಂಗರಿಸುತ್ತಿದ್ದಾರೆ. 

21 ಅಡಿಯ ಮೂರ್ತಿ: ‘ಈ ಬಾರಿ ನಾವು 21 ಅಡಿ ಎತ್ತರದ (ಟ್ರಾಲಿಯೂ ಸೇರಿದರೆ ನೆಲಮಟ್ಟದಿಂದ 25 ಅಡಿ) ಗಣಪನ ಮೂರ್ತಿ ತಯಾರಿಸಿದ್ದೇವೆ. ಸಿಂಹಾಸನದ ಮೇಲೆ ಗಣೇಶ ಕುಳಿತಿರುವ ಅವತಾರದ ಈ ಮೂರ್ತಿಯನ್ನು ಯಳ್ಳೂರ ರಸ್ತೆಯ ಅಷ್ಟವಿನಾಯಕ ನಗರ ಮಂಡಳಿಯವರು ಪ್ರತಿಷ್ಠಾಪಿಸಲಿದ್ದಾರೆ. 16 ಅಡಿ ಎತ್ತರದ ಪರಶುರಾಮನ ಅವತಾರಿ ಗಣೇಶನ ಮೂರ್ತಿಗೆ ದಾವಣಗೆರೆ ಮಂಡಳಿಯವರು ಬೇಡಿಕೆ ಸಲ್ಲಿಸಿದ್ದಾರೆ’ ಎಂದು ಕಲಾವಿದ ವಿನಾಯಕ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮಲ್ಲಿ 10 ಕಾರ್ಮಿಕರು ವರ್ಷವಿಡೀ ದುಡಿಯುತ್ತಾರೆ. ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಮೂರು ತಿಂಗಳಿಂದ 20 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ನಾವು ತಯಾರಿಸಿದ ವಿವಿಧ ವಿನ್ಯಾಸಗಳ ಮತ್ತು ಗಾತ್ರದ ಮೂರ್ತಿಗಳು ಬೆಳಗಾವಿ, ಧಾರವಾಡ, ದಾವಣಗೆರೆ ಮತ್ತಿತರ ಕಡೆ ಪ್ರತಿಷ್ಠಾಪನೆಗೊಳ್ಳಲಿವೆ’ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಗಣೇಶನ ಮೂರ್ತಿಗೆ ಕಲಾವಿದರಿಂದ ಅಂತಿಮ ಸ್ಪರ್ಶ ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
10 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮಲ್ಲಿ ಆಕರ್ಷಣೀಯವಾಗಿ ಸಿದ್ಧಪಡಿಸುವ ಮೂರ್ತಿಗಳಿಗೆ ಇಡೀ ರಾಜ್ಯದಾದ್ಯಂತ ಬೇಡಿಕೆಯಿದೆ
ವೈಭವ ರೇಡಕರ, ಕಾರ್ಮಿಕ
ಹಬ್ಬಕ್ಕೆ ಈ ಬಾರಿ ಜನರು ಉತ್ಸಾಹ ಹೆಚ್ಚಿದೆ. ಸಾರ್ವಜನಿಕ ಮಂಡಳಿಯವರು ಎತ್ತರದ ಮೂರ್ತಿಗಳಿಗೆ ಬೇಡಿಕೆ ಸಲ್ಲಿಸಿದ್ದರಿಂದ ಅನುಕೂಲವಾಗಿದೆ
ಮನೋಹರ ಪಾಟೀಲ ಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.