ಬೆಳಗಾವಿ: ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಜಿಲ್ಲೆಯಲ್ಲಿ ಹಿನ್ನಡೆಯಾಗಿದೆ. ಸರ್ಕಾರಿ ಆಸ್ಪತ್ರೆ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಕಚೇರಿಗಳಲ್ಲಿ ಪ್ರಕ್ರಿಯೆ ನಡೆದಿದ್ದು, ಹಲವರು ಇಲ್ಲಿಗೆ ಬರಲು ಹಿಂಜರಿಯುತ್ತಿರುವುದು ಹಿನ್ನಡೆಗೆ ಕಾರಣವಾಗಿದೆ.
ಸಮೀಕ್ಷೆಯು ಸೆ.15ರಿಂದ ಆರಂಭಗೊಂಡಿದ್ದು, 45 ದಿನ ನಡೆಯಬೇಕಿದೆ. ಸರ್ಕಾರದ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಅನುವಾಗುವಂತೆ ಲಿಂಗತ್ವ ಅಲ್ಪಸಂಖ್ಯಾತರ ದತ್ತಾಂಶ ಸಂಗ್ರಹಿಸುವುದು ಸಮೀಕ್ಷೆಯ ಉದ್ದೇಶ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಹಿಳಾ ಅಭಿವೃದ್ಧಿ ನಿಗಮದಿಂದ ಸಮೀಕ್ಷೆ ಕೈಗೊಳ್ಳಲಾಗಿದೆ. ಸೆ.26ರವರೆಗೆ 252 ಜನರು ಸಮೀಕ್ಷೆಗೆ ಸ್ಪಂದಿಸಿದ್ದಾರೆ. ಬೆಳಗಾವಿ, ಚಿಕ್ಕೋಡಿ, ಗೋಕಾಕ, ಬೈಲಹೊಂಗಲ ಹೊರತುಪಡಿಸಿ ಉಳಿದೆಡೆ ನಿರೀಕ್ಷಿತ ಸ್ಪಂದನ ಸಿಕ್ಕಿಲ್ಲ.
ಮನವೊಲಿಸಿದರೂ ಬರುತ್ತಿಲ್ಲ: ‘ಬೆಳಗಾವಿ ಜಿಲ್ಲಾಸ್ಪತ್ರೆ, ಬೆಳಗಾವಿಯ ಸಖಿ ಒನ್ ಸ್ಟಾಪ್ ಸೆಂಟರ್, ಆರು ತಾಲ್ಲೂಕು ಆಸ್ಪತ್ರೆಗಳು, ಮೂರು ಸಿಡಿಪಿಒ ಕಚೇರಿಗಳಲ್ಲಿ ಸಮೀಕ್ಷೆ ನಡೆಯುತ್ತಿದೆ. ಜಿಲ್ಲೆಯಲ್ಲಿ 2 ಸಾವಿರಕ್ಕೂ ಅಧಿಕ ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ.
‘ಸಮಾಜಕ್ಕೆ ಹೆದರಿ ಈ ಕಚೇರಿಗಳಿಗೆ ಸಮೀಕ್ಷೆಗೆ ಬರಲು ಹಲವರು ಹಿಂಜರಿಯುತ್ತಿದ್ದಾರೆ. ಮನವೊಲಿಸಿದರೂ ಬರುತ್ತಿಲ್ಲ. ತಾವು ವಾಸವಿರುವ ಸ್ಥಳದ ಸಮೀಪದ ಸರ್ಕಾರಿ ಕಟ್ಟಡದಲ್ಲೇ ಸಮೀಕ್ಷೆಗೆ ವ್ಯವಸ್ಥೆ ಕಲ್ಪಿಸಲು ಪಟ್ಟು ಹಿಡಿದಿದ್ದಾರೆ’ ಎಂದು ಹ್ಯೂಮಿನಿಟಿ ಫೌಂಡೇಷನ್ ಸಂಸ್ಥಾಪಕ ತಾನಾಜಿ ಸಾವಂತ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕೆಲ ಲಿಂಗತ್ವ ಅಲ್ಪಸಂಖ್ಯಾತರಿಗೆ ಸಮೀಕ್ಷೆ ಬಗ್ಗೆ ತಪ್ಪುಕಲ್ಪನೆ ಇದೆ. ಹೀಗಾಗಿ ನಿಗದಿತ ಸ್ಥಳಕ್ಕೆ ಬರುತ್ತಿಲ್ಲ. ವಾಸ ಸ್ಥಳದ ಸಮೀಪವೇ ಸಮೀಕ್ಷೆಗೆ ವ್ಯವಸ್ಥೆ ಮಾಡಿದರೆ ಅನುಕೂಲ’ ಎಂದು ಸಾವಲಿ ಫೌಂಡೇಷನ್ ಅಧ್ಯಕ್ಷ ದಿನೇಶ ಪಾಟೀಲ ಉರ್ಫ್ ನಿಶಾ ತಿಳಿಸಿದರು.
ಲಿಂಗತ್ವ ಅಲ್ಪಸಂಖ್ಯಾತರು ಸಮೀಕ್ಷೆಗೆ ಆಸ್ಪತ್ರೆ ಸಿಡಿಪಿಒ ಕಚೇರಿಗೆ ಬರಲು ಒಪ್ಪದಿದ್ದರೆ ವಾಸ ಸ್ಥಳದ ಸಮೀಪವೇ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತೇವೆಎಂ.ಎನ್.ಚೇತನಕುಮಾರ ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.