ADVERTISEMENT

ಬಾಲೆಯರ ನೆಚ್ಚಿನ ಕಿತ್ತೂರು ‘ಜಿಜಿಎಚ್‌ಎಸ್‌’

ಅರ್ಧ ಶತಮಾನ ಪೂರೈಸಿದ ಸರ್ಕಾರಿ ಶಾಲೆ

ಪ್ರದೀಪ ಮೇಲಿನಮನಿ
Published 2 ಆಗಸ್ಟ್ 2019, 11:51 IST
Last Updated 2 ಆಗಸ್ಟ್ 2019, 11:51 IST
ಚನ್ನಮ್ಮನ ಕಿತ್ತೂರು ಜಿಜಿಎಚ್ಎಸ್‌ನಲ್ಲಿ ನಡೆದ ಕಾರ್ಯಕ್ರಮದ ನೋಟ
ಚನ್ನಮ್ಮನ ಕಿತ್ತೂರು ಜಿಜಿಎಚ್ಎಸ್‌ನಲ್ಲಿ ನಡೆದ ಕಾರ್ಯಕ್ರಮದ ನೋಟ   

ಚನ್ನಮ್ಮನ ಕಿತ್ತೂರು: ಕಿತ್ತೂರು ಸೇರಿದಂತೆ ಸುತ್ತಲಿನ ಗ್ರಾಮಗಳ ಬಾಲಕಿಯರಿಗಾಗಿಯೇ ಇರುವ ಸರೋಜಾದೇವಿ ಬಸವರಾಜ ಮಾರಿಹಾಳ ಸರ್ಕಾರಿ ಪ್ರೌಢಶಾಲೆ (ಜಿಜಿಎಚ್‌ಎಸ್‌– ಬಾಲಕಿಯರ ಸರ್ಕಾರಿ ಪ್ರೌಢಶಾಲೆ) ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಾಧನೆಯಿಂದಾಗಿ ಗಮನಸೆಳೆದಿದೆ.

ಇಡೀ ತಾಲ್ಲೂಕಿನಲ್ಲಿ ವಿದ್ಯಾರ್ಥಿನಿಯರಿಗಾಗಿ ತೆರೆಯಲಾದ ಏಕೈಕ ಸರ್ಕಾರಿ ಹೈಸ್ಕೂಲ್ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.

ರಾಜಗುರುಗಳ ಭೂದಾನ:‘ರಾಣಿ ಕಿತ್ತೂರು ಚನ್ನಮ್ಮನ ನಾಡಾದ ಇಲ್ಲಿಗೆ ಬಾಲಕಿಯರಿಗಾಗಿಯೇ ಹೈಸ್ಕೂಲ್‌ ತೆರೆಯಲು ಸರ್ಕಾರ ನಿರ್ಧರಿಸಿದಾಗ ಕಲ್ಮಠದ ಆವರಣದಲ್ಲಿ ಜಾಗದ ವ್ಯವಸ್ಥೆ ಮಾಡಿಕೊಡಲಾಯಿತು. ಮುಂದೆ ಶ್ರೀಗಳು ಮೂರೂವರೆ ಎಕರೆ ಭೂಮಿ ದಾನ ನೀಡಿದರು. ಸ್ವಂತ ಶಿಕ್ಷಣ ಸಂಸ್ಥೆಯನ್ನು ಕಲ್ಮಠದ ಶ್ರೀಗಳು ಹೊಂದಿದ್ದರೂ ಬಾಲಕಿಯರ ಸರ್ಕಾರಿ ಶಾಲೆಗೆ ನಿವೇಶನ ನೀಡಿದ್ದು ಗಮನಾರ್ಹವಾದ ವಿಷಯ’ ಎಂದು ಹಿರಿಯರು ಈಗಲೂ ಸ್ಮರಿಸುತ್ತಾರೆ.

ADVERTISEMENT

ನೂತನ ಜಾಗದಲ್ಲಿ ಕಟ್ಟಡ ನಿರ್ಮಾಣಗೊಂಡ ನಂತರ ವಿದ್ಯಾರ್ಥಿನಿಯರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಾಯಿತು. ಈಗ 508 ವಿದ್ಯಾರ್ಥಿನಿಯರು 8, 9 ಮತ್ತು 10ನೇ ತರಗತಿಯಲ್ಲಿ ಓದುತ್ತಿದ್ದಾರೆ.

ಕೊಠಡಿ ಕೊರತೆಯಿಲ್ಲ:

‘ಎರಡು ದಶಕದ ಹಿಂದೆ ಪ್ರವೇಶ ಹೆಚ್ಚಾದಾಗ ವಿದ್ಯಾರ್ಥಿನಿಯರಿಗೆ ಕುಳಿತುಕೊಳ್ಳಲು ಜಾಗ ಸಾಲುತ್ತಿರಲಿಲ್ಲ. ಕೊಠಡಿಗಳ ಸಂಖ್ಯೆಯೂ ಹೆಚ್ಚಾಗಿರಲಿಲ್ಲ. ಆದರೆ, ಈಗ ಆ ತೊಂದರೆ ದೂರವಾಗಿದೆ. ಅಗತ್ಯ ಸಂಖ್ಯೆಯ ಕೊಠಡಿಗಳನ್ನು ಸರ್ಕಾರ ನಿರ್ಮಿಸಿಕೊಟ್ಟಿದೆ. 3 ತರಗತಿಯಲ್ಲಿ ತಲಾ 2 ವಿಭಾಗಗಳನ್ನು ಮಾಡಲಾಗಿದೆ. ಒಂದೊಂದು ವಿಭಾಗದಲ್ಲಿ ಸುಮಾರು 75ಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ. ಶಿಕ್ಷಕರ ಸಂಖ್ಯೆಯೂ ಉತ್ತಮವಾಗಿದೆ’ ಎಂದು ಮುಖ್ಯಶಿಕ್ಷಕ ಸಿ.ಎಂ. ಪಾಗಾದ ಮಾಹಿತಿ ನೀಡಿದರು.

ವಿಶೇಷ ತರಬೇತಿ:

‘ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸುತ್ತಿರುವ ಶಾಲೆ, ಪಠ್ಯೇತರ ಚಟುವಟಿಕೆಯಲ್ಲೂ ವಿದ್ಯಾರ್ಥಿನಿಯರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕ್ರೀಡಾ ವಿಭಾಗ ಮತ್ತು ಪ್ರತಿಭಾ ಕಾರಂಜಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.

‘2015-16ನೇ ಸಾಲಿನಲ್ಲಿ ವಿದ್ಯಾರ್ಥಿನಿಯರು ಪ್ರದರ್ಶಿಸಿದ ಜನಪದ ನೃತ್ಯ ರಾಷ್ಟ್ರಮಟ್ಟದಲ್ಲಿ ಗಮನಸೆಳೆದಿತ್ತು. ಅಲ್ಲಿ ಈ ಪ್ರದರ್ಶನಕ್ಕೆ ಪ್ರಥಮ ಸ್ಥಾನ ಬಂದಿತ್ತು’ ಎಂದು ಪಾಗಾದ ಖಷಿಯಿಂದ ತಿಳಿಸಿದರು.

‘ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ವಿಶೇಷ ತರಬೇತಿಗಳನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ವಿದ್ಯಾರ್ಥಿನಿಯರನ್ನು 3 ತಂಡಗಳನ್ನಾಗಿ ಮಾಡಲಾಗುತ್ತದೆ. ಕಲಿಕಾ ಮಟ್ಟ ಆಧರಿಸಿ ವಿಶೇಷ ತರಬೇತಿ ನಡೆಸಲಾಗುತ್ತಿದೆ. ಇದರಿಂದ ಪ್ರಥಮ ದರ್ಜೆಯಲ್ಲಿ ಪಾಸಾಗುವ ಅರ್ಹತೆ ಇದ್ದವರು ಅತ್ಯುನ್ನತ ಶ್ರೇಣಿಯಲ್ಲಿ, ಸೆಕೆಂಡ್ ಕ್ಲಾಸ್ ವಿದ್ಯಾರ್ಥಿನಿಯರು ಫರ್ಸ್ಟ್ ಕ್ಲಾಸ್ ಬಂದ ನಿದರ್ಶನಗಳಿವೆ’ ಎನ್ನುತ್ತಾರೆ ಶಿಕ್ಷಕರು.

ಗುಡ್ಡದ ಮೇಲಿರುವ ಈ ಶಾಲೆ ಪಠ್ಯ ಮತ್ತು ಪಠ್ಯೇತರ ವಿಭಾಗದಲ್ಲೂ ಎತ್ತರದ ಸಾಧನೆ ಮಾಡುತ್ತಿದೆ. ಐದಾರು ಖಾಸಗಿ ಹೈಸ್ಕೂಲುಗಳಿದ್ದರೂ ಇಲ್ಲಿ ಪ್ರವೇಶ ಪಡೆಯುವವರ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಲೇ ಇದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.