ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್
ಗೋಕಾಕ: ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳ ಪ್ರವಾಹದಿಂದ ನಗರದ 200 ಮನೆಗಳು ಜಲಾವೃತವಾಗಿವೆ. ಎಲ್ಲ ಕುಟುಂಬಗಳನ್ನು ನಗರದ ಮಿನ್ಸಿಪಲ್ ಶಾಲೆಯಲ್ಲಿ ತೆರೆದ ಕಾಳಜಿ ಕೇಂದ್ರಕ್ಕೆ ಸೇರಿಸಲಾಗಿದೆ.
ಇಲ್ಲಿನ ಮಟನ್ ಮಾರ್ಕೆಟ್, ಉಪ್ಪಾರ ಗಲ್ಲಿ, ಬೋಜಗಾರ ಗಲ್ಲಿ, ದಾಳಂಬರಿತೋಟ, ಹಳೆ ದನದ ಪೇಟೆ ಸೇರಿ ಮತ್ತಿತರ ಪ್ರದೇಶಗಳ ಮನೆಗಳಿಗೆ ಮಂಗಳವಾರ ಮಧ್ಯರಾತ್ರಿಯೇ ನೀರು ನುಗ್ಗಿದೆ. ಜನರು ರಾತೋರಾತ್ರಿ ಕೈಗೆ ಸಿಕ್ಕ ಪಾತ್ರೆ, ಗ್ಯಾಸ್, ಸಿಲಿಂಡರ್, ಬಟ್ಟೆ-ಬರೆ ಕಟ್ಟಿಕೊಂಡು, ಪುಟ್ಟ ಮಕ್ಕಳನ್ನು ಎತ್ತಿಕೊಂಡು ಮನೆ ಬಿಟ್ಟು ಬಂದಿದ್ದಾರೆ.
200 ಕುಟುಂಬಗಳಲ್ಲಿ 40ಕ್ಕೂ ಹೆಚ್ಚು ಪುಟಾಣಿ ಮಕ್ಕಳೂ ಇದ್ದಾರೆ.
ಶಾಶ್ವತ ಪರಿಹಾರಕ್ಕೆ ಆಗ್ರಹ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕಾಳಜಿ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಂತೆ ಸಂತ್ರಸ್ತ ಮಹಿಳೆಯರು ಒಕ್ಕೊರಲಿನಿಂದ ಧ್ವನಿ ಎತ್ತಿದರು.
'ಇನ್ನೆಷ್ಟು ವರ್ಷ ಬರೀ ಪರಿಹಾರ ನೀಡುತ್ತೀರಿ, ನಮ್ಮನ್ನು ಸ್ಥಳಾಂತರಿಸಿ ಶಾಶ್ವತ ನೆರಳು ಮಾಡಿ ಕೊಡಿ' ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಾಲಿಗೆ ಬಿದ್ದ ಮಹಿಳೆಯೊಬ್ಬರು, 'ಅಳಲು ತೋಡಿಕೊಂಡರು. ಪ್ರತಿ ವರ್ಷ ಈ ಗೋಳು ನಮಗೆ ತಪ್ಪಿದ್ದಲ್ಲ. ಮಕ್ಕಳಿಗೆ ಬಹಳ ಕಷ್ಟವಾಗುತ್ತಿದೆ. ದಯವಿಟ್ಟು ಶಾಶ್ವತ ಪರಿಹಾರ ಕೊಡಿ' ಎಂದು ಅಂಗಲಾಚಿದರು.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಮೊಹಮ್ಮದ್ ರೋಷನ್, 'ನೆರೆ ಸಂತ್ರಸ್ತರಿಗೆ ಕಾಳಜಿ ಕೇಂದ್ರದಲ್ಲಿ ವ್ಯವಸ್ಥೆ ಕಲ್ಪಿಸಿದ್ದೇವೆ.12 ಚಿಕ್ಕಮಕ್ಕಳಿಗೆ ತೊಂದರೆ ಆಗದಂತೆ ಪ್ರತ್ಯೇಕ ವ್ಯವಸ್ಥೆ ನೀಡಲಾಗುವುದು. ಅತ್ಯಂತ ಸೂಕ್ಷ್ಮತೆಯಿಂದ ಈ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೇವೆ' ಎಂದರು.
'ಊಟ, ವಸತಿ, ನೀರು, ಶೌಚಾಲಯ ಸೇರಿದಂತೆ ಮಹಿಳೆಯರ ಖಾಸಗಿತನಕ್ಕೆ ಧಕ್ಕೆ ಆಗದಂತೆ ಉತ್ತಮ ವ್ಯವಸ್ಥೆ ಕಲ್ಪಿಸಿದ್ದೇವೆ. ಇಲ್ಲಿನ ಸಂತ್ರಸ್ತರು ಬಹುತೇಕ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಹಾಗಾಗಿ, ಮನೆ ಮಾಲೀಕರಿಗೆ ಪರಿಹಾರ ತಲುಪುತ್ತದೆ. ಆದರೆ, ನಿಜವಾದ ಸಂತ್ರಸ್ತರಿಗೆ ಪರಿಹಾರ ನೀಡಲ್ಲ ಎಂಬ ಆರೋಪಕ್ಕೆ ನಿಯಮ ಆ ರೀತಿ ಇದೆ. ಈ ಸಂಬಂಧ ಸರ್ಕಾರದ ಗಮನಕ್ಕೆ ತರುತ್ತೇನೆ. ಎಸ್.ಡಿ.ಆರ್.ಎಫ್, ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪ್ರಕಾರ ಬಾಡಿಗೆ ಮನೆಯಲ್ಲಿ ವಾಸವಿದ್ದ ಸಂತ್ರಸ್ತರಿಗೂ ಪರಿಹಾರ ನೀಡುವಂತೆ ತಹಶೀಲ್ದಾರ್ ಅವರಿಗೆ ಸೂಚಿಸುತ್ತೇನೆ' ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಪ್ರವಾಹ ಪರಿಸ್ಥಿತಿಯಿಂದ ಜಾನುವಾರುಗಳಿಗೆ ಸಮಸ್ಯೆ ಆಗದಂತೆ ಮೇವು ಬ್ಯಾಂಕ್ ಸ್ಥಾಪಿಸುವ ಬಗ್ಗೆ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕರಿಗೆ ತಿಳಿಸಿದ್ದೇವೆ. ಹೋದ ವರ್ಷ ಅಥಣಿ ತಾಲ್ಲೂಕಿನ ಸಪ್ತಸಾಗರ ಗ್ರಾಮದಲ್ಲಿ ಸಮಸ್ಯೆ ಆಗಿತ್ತು. ಈ ವರ್ಷ ಎಲ್ಲಿಯೂ ಮೇವಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.