ಗೋಕಾಕ ತಾಲ್ಲೂಕಿನ ಘಟಪ್ರಭಾ ರೈಲ್ವೆ ನಿಲ್ದಾಣಕ್ಕೆ ಶುಕ್ರವಾರ ಭೇಟಿ ನೀಡಿದ ಸಂಸದ ಜಗದೀಶ್ ಶೆಟ್ಟರ್ ಅವರು ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಘಟಪ್ರಭಾ (ಗೋಕಾಕ): ಕುಂಟುತ್ತ ಸಾಗಿರುವ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ನೀಡಿ, ಮುಂದಿನ ಎರಡು ತಿಂಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸುವಂತೆ ಸಂಸದ ಜಗದೀಶ ಶೆಟ್ಟರ ಅವರು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಶುಕ್ರವಾರ ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ ಬಳಿಕ, ನಿಲ್ದಾಣದ ಒಳಗಡೆ ಮತ್ತು ಹೊರಗಡೆ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ ಆಗುತ್ತಿರುವ ವಿಳಂಬಕ್ಕೆ ಕಾರಣಗಳು ಏನು? ಎಂದು ಗುತ್ತಿಗೆದಾರರನ್ನು ಪ್ರಶ್ನಿಸಿದರು.
ಪ್ರಯಾಣಿಕರು ರೈಲ್ವೆ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಟಿಕೆಟ್ ಕೌಂಟರ್, ಅದರ ಪಕ್ಕದಲ್ಲೇ ಪ್ರಯಾಣಿಕರ ಕನಿಷ್ಠ ಸೌಲಭ್ಯಗಳುಳ್ಳ ಕಂಪ್ಯೂಟರ್ ಆಧಾರಿತ ಟಿಕೆಟ್‌ಗಳ ಮುಂಗಡ ಕಾಯ್ದಿರಿಸುವ ಕೊಠಡಿ, ಸಾಮಾನ್ಯ ವರ್ಗದ ಪ್ರಯಾಣಿಕರ ಮತ್ತು ಮುಂಗಡ ಟಿಕೆಟ್ ಕಾಯ್ದಿರಿಸಿದವರಿಗಾಗಿ ಪ್ರತ್ಯೇಕ ಕೊಠಡಿ ಈ ಎಲ್ಲ ಸೌಲಭ್ಯಗಳು ನೆಲಮಹಡಿಯಲ್ಲೇ ಒದಗಿಸಬೇಕು ಎಂದು ಸೂಚನೆ ನೀಡಿದರು.
ನಿಲ್ದಾಣ ಹೊಂದಿರುವ ಎರಡು ಪ್ಲಾಟ್‌ಫಾರ್ಮಗಳನ್ನು ತಲುಪಲು ಉಭಯ ಕಡೆಗಳಿಂದ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಲಿಫ್ಟ್ ವ್ಯವಸ್ಥೆ ಅಲ್ಲದೇ ವಿದ್ಯುತ್‌ಚಾಲಿತ ಎಸ್ಕಲೇಟರ್‌ಗಳ ಅಳವಡಿಕೆಯನ್ನು ಕಡ್ಡಾಯವಾಗಿ ಒದಗಿಸಿಕೊಡುವಂತೆ ಕೇಳಿಬಂದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಿಲ್ದಾಣ ಕಾಮಗಾರಿ ನೀಲನಕ್ಷೆಯಲ್ಲಿ ಅನುಮೋದನೆ ನೀಡಲಾಗಿರುವ ಎಲ್ಲ ಸೌಲಭ್ಯಗಳನ್ನು ಮುಂದಿನ ಎರಡು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವ ಭರವಸೆಯನ್ನು ಗುತ್ತಿಗೆದಾರರು ನೀಡಿದ್ದಾರೆ ಎಂದರು.
ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕ ಅಧ್ಯಕ್ಷ ಸುಭಾಷ ಪಾಟೀಲ, ಪಕ್ಷದ ಗೋಕಾಕ ಗ್ರಾಮೀಣ ಘಟಕ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಸಚಿನ ಖಡಬಡಿ, ಸುರೇಶ ಪಾಟೀಲ, ರಾಮಣ್ಣ ಹುಕ್ಕೇರಿ, ಪುರಸಭೆ ಮಾಜಿ ಸದಸ್ಯರಾದ ಪ್ರವೀಣ ಮಟಗಾರ, ಈರಣ್ಣ ಕಲಕುಟಗಿ ಮತ್ತು ಪರಶುರಾಮ ಕಲಕುಟಗಿ, ಧುಪದಾಳ ಗ್ರಾ.ಪಂ. ಮಾಜಿ ಸದಸ್ಯ ರಾಜು ಕತ್ತಿ, ಪ್ರಮುಖರಾದ ಮಲ್ಲಿಕಾರ್ಜುನ ಗೌರಾಣಿ, ಕಾಶಿನಾಥ ರಾಜಣ್ಣವರ, ಕಾಡಪ್ಪ ಕರೋಶಿ, ಶ್ರೀಕಾಂತ ಮಹಾಜನ, ನಾಗಲಿಂಗ ಪೋತದಾರ, ಮಹಾಂತೇಶ ಹಳ್ಳೂರ, ಶಿರಾಜಅಲಿಷಾ ಮಕಾನದಾರ, ಕೆಂಪಣ್ಣ ಚೌಕಶಿ, ವಿಜಯ ಗಾಯಕವಾಡ, ವಿಜಯ ಗುಪ್ತಾ ಮೊದಲಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.