ADVERTISEMENT

ಬಾಳು ಕತ್ತಲಾಗಿಸಿದ‌ ನಂದಾದೀಪ | ಬಾಲಕಿ ಸಜೀವ ದಹನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 12:15 IST
Last Updated 25 ಜೂನ್ 2019, 12:15 IST
ದೀಪ ಕೆಳಗೆ ಬಿದ್ದು ಹಾಸಿಗೆಗೆ ತಗುಲಿದ್ದರಿಂದ ಬೆಂಕಿ ಹೊತ್ತಿಕೊಂಡಿರುವುದು. ಮೃತಪಟ್ಟ ಬಾಲಕಿ ಕಸ್ತೂರಿ.
ದೀಪ ಕೆಳಗೆ ಬಿದ್ದು ಹಾಸಿಗೆಗೆ ತಗುಲಿದ್ದರಿಂದ ಬೆಂಕಿ ಹೊತ್ತಿಕೊಂಡಿರುವುದು. ಮೃತಪಟ್ಟ ಬಾಲಕಿ ಕಸ್ತೂರಿ.   

ಬೆಳಗಾವಿ: ಇಲ್ಲಿನ ಅನಗೋಳದ ರಘುನಾಥಪೇಟ್‌ ಪ್ರದೇಶದ ಮನೆಯೊಂದರಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಬಾಲಕಿ ಸಜೀವ ದಹನವಾಗಿದ್ದಾಳೆ. ತಾಯಿ ಹಾಗೂ ಇನ್ನಿಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಸ್ತೂರಿ ರಾಣು ಮಾಲತವಾಡ (8) ಮೃತ ಬಾಲಕಿ. ತಾಯಿ ಲಕ್ಷ್ಮಿ ಇನ್ನಿಬ್ಬರು ಮಕ್ಕಳೊಂದಿಗೆ ಹೊರಗಡೆಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ‘ದೇವರ ಫೋಟೊ ಬಳಿ ಹಚ್ಚಿಟ್ಟಿದ್ದ ನಂದಾದೀಪ ಕೆಳಗೆ ಬಿದ್ದು, ಹಾಸಿಗೆಗೆ ಬೆಂಕಿ ಹೊತ್ತುಕೊಂಡು ಘಟನೆ ಸಂಭವಿಸಿದೆ’ ಎಂದು ಮನೆಯವರು ಹಾಗೂ ಅಕ್ಕಪಕ್ಕದವರು ಬೆಳಿಗ್ಗೆ ತಿಳಿಸಿದ್ದರು. ಆದರೆ, ವಿದ್ಯುತ್‌ ಶಾರ್ಟ್‌ಸರ್ಕೀಟ್‌ನಿಂದ ಅವಘಡ ನಡೆದಿದೆ ಎಂದು ಟಿಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿರುವುದು ತಿಳಿಯುತ್ತಿದ್ದಂತೆಯೇ 12 ವರ್ಷದ ಬಾಳು ಹಾಗೂ 10 ವರ್ಷದ ಗಂಗಾರಾಮನನ್ನು ಎತ್ತಿಕೊಂಡು ಹೊರಗಡೆಗೆ ಓಡಿ ಬಂದಿದ್ದಾರೆ. ಅವರನ್ನು ಹೊರಗಡೆ ಬಿಟ್ಟು, ಒಳಗಿದ್ದ ಕಸ್ತೂರಿಯನ್ನು ರಕ್ಷಿಸಲು ಅವರು ನಡೆಸಿದ ಪ್ರಯತ್ನ ವಿಫಲವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು.

ADVERTISEMENT

ಬೆಂಕಿ ನಂದಿಸಲು ಸ್ಥಳೀಯರು ಕೂಡ ಹರಸಾಹಸ ನಡೆಸಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿ, ಪಕ್ಕದ ಮನೆಗಳಿಗೆ ಹರಡುವುದನ್ನು ತಪ್ಪಿಸಿದರು. ಘಟನೆಯಲ್ಲಿ ಮನೆ ಬಹುತೇಕ ಸುಟ್ಟು ಹೋಗಿದೆ. ₹ 10 ಲಕ್ಷ ನಷ್ಟ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮನೆಯ ಬಳಿ ಕುಟುಂಬದವರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು. ಕುರಿಗಾಹಿಯಾದ ಲಕ್ಷ್ಮಿ ಪತಿ ರಾಣು ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದರು ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.