ADVERTISEMENT

ದೇಶದಲ್ಲೇ ವ್ಯಾಸಂಗ ಮುಂದುವರಿಕೆಗೆ ಅವಕಾಶ ಕೊಡಿ: ವಿದ್ಯಾರ್ಥಿ ಪ್ರಜ್ವಲ್

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2022, 15:35 IST
Last Updated 3 ಮಾರ್ಚ್ 2022, 15:35 IST
ವಿದ್ಯಾರ್ಥಿ ಪ್ರಜ್ವಲ ಗಂಗಪ್ಪ ತಿಪ್ಪಣ್ಣವರ
ವಿದ್ಯಾರ್ಥಿ ಪ್ರಜ್ವಲ ಗಂಗಪ್ಪ ತಿಪ್ಪಣ್ಣವರ    

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ‘ಉಕ್ರೇನ್‌ನಿಂದ ವಾಪಸಾಗುವ ವೈದ್ಯಕೀಯ ವಿದ್ಯಾರ್ಥಿಗಳು ದೇಶದಲ್ಲೆ ವ್ಯಾಸಂಗ ಮುಂದುವರಿಸಲು ಅನುಕೂಲ ಮಾಡಿಕೊಡಬೇಕು’ ಎಂದು ಅಲ್ಲಿಂದ ವಾಪಸಾದ ವೈದ್ಯಕೀಯ ವಿದ್ಯಾರ್ಥಿ ಪ್ರಜ್ವಲ ಗಂಗಪ್ಪ ತಿಪ್ಪಣ್ಣವರ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಪಟ್ಟಣದ ವಿದ್ಯಾನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದರು.

‘ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧದ ಮುನ್ಸೂಚನೆ ಮನಗಂಡು ಈಚೆಗೆ ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿದೆ’ ಎಂದು ಹೇಳಿದರು.

ADVERTISEMENT

‘ಉಕ್ರೇನ್‌ನಲ್ಲಿ 4ನೇ ವರ್ಷದ 2ನೇ ಸೆಮಿಸ್ಟರ್ ಓದುತ್ತಿದ್ದೆ. 60ಕ್ಕೂ ಹೆಚ್ಚಿನ ದೇಶಗಳ ವಿದ್ಯಾರ್ಥಿಗಳು ಅಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಅವರಿಗೆ ವ್ಯಾಸಂಗ ಮುಂದುವರಿಸಲು ಆಯಾ ದೇಶದಲ್ಲಿಯೇ ಅನುಕೂಲ ಮಾಡಿಕೊಡಲು ಕೆಲವೆಡೆ ವ್ಯವಸ್ಥೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಅಂತೆಯೇ ನಮಗೂ ಇಲ್ಲಿ ಅವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಪ್ರಧಾನಿ, ಮುಖ್ಯಮಂತ್ರಿ ಕ್ರಮ ವಹಿಸಬೇಕು’ ಎಂದು ಕೋರಿದರು.

‘ಭಾರತದ ರಾಯಭಾರಿ ಕಚೇರಿಯಿಂದ ಸ್ಪಷ್ಟ ಮಾಹಿತಿ ಇರಲಿಲ್ಲ. ಯುದ್ಧ ಆರಂಭವಾಗುವ 24 ಗಂಟೆಗಳ ಮೊದಲು ಭಾರತದ ರಾಯಭಾರಿ ಕಚೇರಿಯಿಂದ ಮಾಹಿತಿ ಸಿಕ್ಕಿತ್ತು. ಅಷ್ಟು ಅಲ್ಪ ಸಮಯದಲ್ಲಿ ದೇಶ ಬಿಟ್ಟು ಬರಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇನ್ನೂ ಹಲವು ಮಂದಿ ಕನ್ನಡಿಗರು ಹಾಗೂ ವಿವಿಧ ರಾಜ್ಯದವರು ಅಲ್ಲಿ ಸಿಲುಕಿದ್ದಾರೆ’ ಎಂದು ತಿಳಿಸಿದರು.

‘ಕಾಡಾ’ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ವಿದ್ಯಾರ್ಥಿಯ ಯೋಗಕ್ಷೇಮ ವಿಚಾರಿಸಿದರು. ವ್ಯಾಸಂಗದ ಕುರಿತು ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಅನುಕೂಲ ಮಾಡಿಕೊಡಲಾಗವುದು ಎಂದು ಭರವಸೆ ನೀಡಿದರು.

ಪಟ್ಟಣದ ತಿಗಡಿ ಗಲ್ಲಿಯ ಡಾ.ಐಜಾಜಹುಸೇನ ಬಾಗೆವಾಡಿ ಪುತ್ರಿ ರಾಬಿಯಾ ಅವರೂ ಯುದ್ಧದ ಮುನ್ಸೂಚನೆ ಅರಿತು ಫೆ.21ರಂದು ತಾಯ್ನಾಡಿಗೆ ಸುರಕ್ಷಿತವಾಗಿ ಬಂದು ತಲುಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.