ADVERTISEMENT

ಬೆಳಗಾವಿ: ಪ್ರಸವ ನಂತರದ ರಕ್ತಸ್ರಾವದಿಂದ ಮರಣ ಪ್ರಮಾಣ ಹೆಚ್ಚಳ -ಡಾ.ಹೇಮಾ ದಿವಾಕರ್

'ತಡೆಗಟ್ಟಲು ಸಮಯೋಚಿತ ವ್ಯವಸ್ಥೆಯ ಅಗತ್ಯ'

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 13:20 IST
Last Updated 23 ಜುಲೈ 2021, 13:20 IST
ಬೆಳಗಾವಿಯ ಕೆಎಲ್‌ಇ ಶತಮಾನೋತ್ಸವ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಆರ್‌ಟಿಎಸ್‌ ಕಾರ್ಬೆಟೋಸಿನ್‌’ ಔಷಧಿಯ ಜಾಗತಿಕ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ.ಹೇಮಾ ದಿವಾಕರ್ ಮಾತನಾಡಿದರು
ಬೆಳಗಾವಿಯ ಕೆಎಲ್‌ಇ ಶತಮಾನೋತ್ಸವ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಆರ್‌ಟಿಎಸ್‌ ಕಾರ್ಬೆಟೋಸಿನ್‌’ ಔಷಧಿಯ ಜಾಗತಿಕ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ.ಹೇಮಾ ದಿವಾಕರ್ ಮಾತನಾಡಿದರು   

ಬೆಳಗಾವಿ: ‘ಅಭಿವೃದ್ಧಿಯಾಗದ ರಾಷ್ಟ್ರಗಳಲ್ಲಿ ‘ಪ್ರಸವದ ನಂತರದ ರಕ್ತಸ್ರಾವ’ವು ತಾಯಂದಿರ ಮರಣ ಪ್ರಮಾಣಕ್ಕೆ ಹೆಚ್ಚಿನ ಕಾರಣವಾಗಿದೆ. ಇದನ್ನುತಡೆಗಟ್ಟುವುದಕ್ಕಾಗಿ ಔಷಧಿಗಳ ಸುಲಭ ಲಭ್ಯತೆ, ಸಂಗ್ರಹಣೆ ಮತ್ತು ಸಮಯೋಚಿತ ವ್ಯವಸ್ಥೆಯ ಅಗತ್ಯವಿದೆ’ ಎಂದು ಡಾ.ಹೇಮಾ ದಿವಾಕರ್‌ ಹೇಳಿದರು.

ಇಲ್ಲಿನ ಕೆ.ಎಲ್.ಇ. ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ, ಜವಾಹರಲಾಲ್‌ ನೆಹರೂ ವೈದ್ಯಕೀಯ ಮಹಾವಿದ್ಯಾಲಯ, ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಕೆಎಲ್‌ಇ ಶತಮಾನೋತ್ಸವ ಸಭಾಂಗಣದಲ್ಲಿ ಪ್ರಸವನಂತರದ ರಕ್ತಸ್ರಾವ ತಡೆಗಟ್ಟಲು ಸಂಶೋಧಿಸಲಾಗಿರುವ ‘ಆರ್‌ಟಿಎಸ್‌ ಕಾರ್ಬೆಟೋಸಿನ್‌’ ಔಷಧಿಯ ಜಾಗತಿಕ ಬಿಡುಗಡೆ ಕಾರ್ಯಕ್ರಮದಲ್ಲಿ ಶುಕ್ರವಾರ ಅವರು ಮಾತನಾಡಿದರು.

‘ಪ್ರಸ್ತುತ ದೇಶದಲ್ಲಿ ಲಭ್ಯವಿರುವ ಔಷಧಿಗಳಿಗೆ ಶೈತ್ಯೀಕರಣ ಸೇರಿದಂತೆ ವಿಶೇಷ ಶೇಖರಣಾ ವ್ಯವಸ್ಥೆಗಳು ಬೇಕಾಗುತ್ತವೆ. ಆದರೆ, ಕಾರ್ಬೆಟೋಸಿನ್ ಔಷಧಿಯನ್ನು ಕೋಣೆಯ ತಾಪಮಾನದಲ್ಲಿ ಇಡಬಹುದಾಗಿದೆ. ಶಾಖ ಸ್ಥಿರವಾಗಿರುತ್ತದೆ ಮತ್ತು ಶೈತ್ಯೀಕರಣದ ಅಗತ್ಯ ಇರುವುದಿಲ್ಲ. ವಿದ್ಯುತ್ ಪೂರೈಕೆ ಸ್ಥಿರವಾಗಿರದ ದೇಶಗಳಲ್ಲಿ ಬಳಕೆಗೆ ಇದು ಸೂಕ್ತವಾಗಿದೆ. ಭಾರತದಲ್ಲಿ ಕಾರ್ಬೆಟೋಸಿನ್ ಬಳಕೆ ಇದೇ ಮೊದಲು’ ಎಂದು ತಿಳಿಸಿದರು.

ADVERTISEMENT

ಶಿಷ್ಟಾಚಾರ ಪಾಲಿಸಬೇಕು:

‘ಪ್ರಸ್ತುತ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿದ ಕೂಡಲೇ ಮಹಿಳೆಯರಿಗೆ ಔಷಧಿ ನೀಡುವುದು ಪ್ರಮಾಣಿತ ಶಿಷ್ಟಾಚಾರ ಆಗಿದೆ. ಇದು ದೇಶದಲ್ಲಿ ತಾಯಿ ಮರಣ ಪ್ರಮಾಣ ತಗ್ಗಲು ಗಮನಾರ್ಹ ಕಾರಣವಾಗಿದೆ. ದೇಶದಲ್ಲಿ ಶೇ.50ರಷ್ಟು ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಅವರಲ್ಲಿ ಅತಿಯಾದ ರಕ್ತಸ್ರಾವವಾದರೆ ಮತ್ತು ಔಷಧಿಯನ್ನು ಸಮಯಕ್ಕೆ ಸರಿಯಾಗಿ ನೀಡದಿದ್ದರೆ ಸಾವಿಗೀಡಾಗುವ ಸಂಭವ ಇನ್ನೂ ಹೆಚ್ಚಾಗುತ್ತದೆ’ ಎಂದು ತಿಳಿಸಿದರು.

‘ಜೀವ ಕೊಡುವಾಗ ತಾಯಿ ತಾನು ಸಾವಿಗೀಡಾಗುವ ಸ್ಥಿತಿ ಬರಬಾರದು’ ಎಂದು ಆಶಿಸಿದರು.

ತರಬೇತಿ:

ಎಫ್‌ಒಜಿಎಸ್‌ಐ ಅಧ್ಯಕ್ಷೆ ಡಾ.ಎಸ್. ಶಾಂತಕುಮಾರಿ ಮಾತನಾಡಿ, ‘ಆಸ್ಪತ್ರೆಗಳಿಗೆ ಶಿಕ್ಷಣ ನೀಡಲು ಮತ್ತು ಆರೋಗ್ಯ ಕಾರ್ಯಕರ್ತರಿಗೆ ವಿವಿಧ ನಿಯಮಾವಳಿಗಳ ಬಗ್ಗೆ ವಿಶೇಷ ಅಭಿಯಾನದ ಮೂಲಕ ತರಬೇತಿ ನೀಡಲಾಗುತ್ತಿದೆ. ಯಾವೊಬ್ಬ ತಾಯಿಯೂ ಹೆರಿಗೆ ವೇಳೆ ಸಾವಿಗೀಡಾಗಬಾರದು ಎನ್ನುವುದು ನಮ್ಮ ಧ್ಯೇಯ’ ಎಂದು ತಿಳಿಸಿದರು.

‘ಸಮಯಕ್ಕೆ ಸರಿಯಾಗಿ ಔಷಧಿಯನ್ನು ನೀಡುವ ಶಿಷ್ಟಾಚಾರದ ಅನುಷ್ಠಾನ ಮತ್ತು ಅಭ್ಯಾಸವನ್ನು ಹೆಚ್ಚಿಸುವ ಮೂಲಕ ಪ್ರಸವಾನಂತರದ ರಕ್ತಸ್ರಾವವನ್ನು ಕಡಿಮೆ ಮಾಡುವುದು ನಮ್ಮ ಉದ್ದೇಶವಾಗಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ‘ಇಂತಹ ಮಹತ್ವದ ಕಾರ್ಯಕ್ರಮಕ್ಕೆ ಕೆಎಲ್ಇ ಸಂಸ್ಥೆ ವೇದಿಕೆ ಆಗಿದ್ದು ಖುಷಿ ತಂದಿದೆ’ ಎಂದು ಹೇಳಿದರು.

ಹಿರಿಯ ಸಂಶೋಧನಾ ಅಧಿಕಾರಿ ಡಾ.ಎನ್.ವಿ. ಹೊನ್ನುಂಗಾರ್ ಅವರನ್ನು ಪ್ರಾಂಶುಪಾಲೆ ಡಾ.ಎನ್.ಎಸ್. ಮಹಾಂತಶೆಟ್ಟಿ ಸನ್ಮಾನಿಸಿದರು.

ಕೆಎಲ್ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಡಾ.ವಿವೇಕ್ ಸಾವೊಜಿ, ಡಾ.ಶೀಲಾ ಮಾನೆ, ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ವಿಜ್ಞಾನ ಸಂಘದ ಅಧ್ಯಕ್ಷ ಡಾ.ಬಸವರಾಜ ಸಜ್ಜನ, ಫೆರಿಂಗ್ ಫಾರ್ಮಾಸ್ಯುಟಿಕಲ್ಸ್‌ ಪ್ರತಿನಿಧಿಗಳಾದ ಸುಧೀಂದ್ರ ಕುಲಕರ್ಣಿ, ಬಾವಿನ್ ವೈದ್ಯ, ಡಾ.ವಿಶಾಲ್‌ ರಾವ್, ಒಲೆಗ್ ಜುರೀವ್, ಮೋನಿಕ್ಯೂ ಬ್ಲಾಮ್, ಅಲೋಕ್‌ ದೇವ್ ಇದ್ದರು.

ಜೆಎನ್‌ಎಂಸಿ ಮಹಿಳಾ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಘಟಕದ ನಿರ್ದೇಶಕ ಡಾ.ಶಿವಪ್ರಸಾದ್ ಎಸ್. ಗೌಡರ ಪ್ರಾಸ್ತಾವಿಕ ಮತನಾಡಿದರು. ಸ್ತ್ರೀರೋಗ ವಿಜ್ಞಾನ ಪ್ರಾಧ್ಯಾಪಕಿ ಡಾ.ಯಶಿತಾ ಪೂಜಾರ ವಂದಿಸಿದರು. ಸಮುದಾಯ ವೈದ್ಯಕೀಯ ವಿಭಾಗದ ಸಹ ಪ್ರಧ್ಯಾಪಕ ಡಾ.ಅವಿನಾಶ್ ಕವಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.