ADVERTISEMENT

ಗೋವಾ ಕನ್ನಡ ಭವನ ನಿರ್ಮಾಣಕ್ಕೆ ಜಾಗ ಖರೀದಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 17:44 IST
Last Updated 30 ಜುಲೈ 2025, 17:44 IST
ಗೋವಾದ ಪಂಜಿಮ್‌ ನಗರದಲ್ಲಿ ಬುಧವಾರ ನಡೆದ ಸಭೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ಹಾಗೂ ಗೋವಾ ಕನ್ನಡಿಗರು ಪಾಲ್ಗೊಂಡಿದ್ದರು
ಗೋವಾದ ಪಂಜಿಮ್‌ ನಗರದಲ್ಲಿ ಬುಧವಾರ ನಡೆದ ಸಭೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ಹಾಗೂ ಗೋವಾ ಕನ್ನಡಿಗರು ಪಾಲ್ಗೊಂಡಿದ್ದರು   

ಬೆಳಗಾವಿ: ‘ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ನಿವೇಶನ ಖರೀದಿ ಮಾಡಿದೆ. ಗೋವಾ ಕನ್ನಡಿಗರ ನಾಲ್ಕು ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ತಿಳಿಸಿದ್ದಾರೆ.

ಗೋವಾದ ಪಂಜಿಮ್‌ ನಗರದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮೊರ್ಮುಗೋವಾ ತಾಲ್ಲೂಕಿನಲ್ಲಿ ಬರುವ ಕೊರ್ಟಾಲಿಮ್ ಎಂಬ ಹಳ್ಳಿಯಲ್ಲಿ ಚದರ್‌ ಅಡಿಯಷ್ಟು ಜಾಗ ಖರೀದಿ ಮಾಡಲಾಗಿದೆ. ಗೋವಾದಲ್ಲಿ ಈಗಲೂ 6 ಲಕ್ಷಕ್ಕೂ ಅಧಿಕ ಕನ್ನಡಿಗರು ಇದ್ದಾರೆ. ಅವರಿಗೆ ಒಂದೆಡೆ ಸೇರಲು, ಚಟುವಟಿಕೆಗಳನ್ನು ನಡೆಸಲು, ಕುಂದುಕೊರತೆಗಳನ್ನು ಆಲಿಸಲು ಒಂದು ಜಾಗ ಬೇಕಿತ್ತು. ಇನ್ನು ಮುಂದೆ ಈ ಸಮಸ್ಯೆ ನೀಗಲಿದೆ’ ಎಂದರು.

‘2022–23ನೇ ಸಾಲಿನ ಆಯವ್ಯಯದಲ್ಲಿ ‘ಗೋವಾದಲ್ಲಿ ಕನ್ನಡ ಭವನ’ ನಿರ್ಮಾಣ ಮಾಡುವ ಯೋಜನೆ ಘೋಷಣೆಯಾಗಿತ್ತು. ನಿವೇಶನ ಖರೀದಿಗೆ ಅಡತಡೆಗಳು ಇದ್ದವು. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಅಗತ್ಯ ಕ್ರಮ ಕೈಗೊಂಡು ಹೊರನಾಡ ಕನ್ನಡಿಗರ ಬೇಡಿಕೆ ಈಡೇರಿಸಿದೆ’ ಎಂದರು.

ADVERTISEMENT

‍‘2021ರಲ್ಲೇ ಗೋವಾಕ್ಕೆ ಭೇಟಿ ಮಾಡಿ ಅಲ್ಲಿನ ಎಲ್ಲ ಕನ್ನಡ ಪರ ಸಂಘ ಸಂಸ್ಥೆಗಳ ಜೊತೆ ಚರ್ಚಿಸಲಾಯಿತು. ಗೋವಾದ ಜುವ್ಹಾರಿ ಆಗ್ರೋ ಕೆಮಿಕಲ್‌ ಒಡೆತನದಲ್ಲಿದ್ದ 5 ಎಕರೆ ನಿವೇಶನ ಪಡೆದುಕೊಳ್ಳಲು ಪ್ರಯತ್ನ ಮಾಡಲಾಯಿತು. ಅದು ಸಾಧ್ಯವಾಗಲಿಲ್ಲ. 2022ರಲ್ಲಿ ಕೂಡ ಗೋವಾ ಸರ್ಕಾರಕ್ಕೆ ಪತ್ರ ಬರೆದು ಮಾರುಕಟ್ಟೆ ಬೆಲೆಯಲ್ಲಿ 2 ಎಕರೆ ಜಾಗ ಕೊಡಲು ಕೋರಲಾಗಿತ್ತು. ಅದಕ್ಕೂ ಸರ್ಕಾರ ಸ್ಪಂದಿಸಲಿಲ್ಲ. ಖಾಸಗಿ ಜಮೀನು ಖರೀದಿಸಿದರೆ ಭವನ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಗೋವಾ ಸರ್ಕಾರ ಪ್ರತಿಕ್ರಿಯಿಸಿತ್ತು. ಹೀಗಾಗಿ, ಜಾಗ ಖರೀದಿ ಮಾಡಲಾಗಿದೆ’ ಎಂದು ವಿವರಿಸಿದರು.

ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೋವಾ ಗಡಿನಾಡು ಘಟಕದ ಅಧ್ಯಕ್ಷ ಸಿದ್ದಣ್ಣ ಮೇಟಿ, ಹನುಮಂತ ರೆಡ್ಡಿ ಶಿರೂರು, ತವರಪ್ಪ, ರಾಜೇಶ್‌ ಶೆಟ್ಟಿ, ತಡಿವಾಳ್‌, ಶಿವಾನಂದ ಬಿಂಗಿ ಹಾಗೂ ಗೋವಾದ ಕನ್ನಡ ಪರ ಸಂಘ– ಸಂಸ್ಥೆಗಳ ‍ಪ‍ದಾಧಿಕಾರಿಗಳು ಸಭೆಯಲ್ಲಿದ್ದರು.

ಮೂರು ಅಂತಸ್ತಿನ ಕಟ್ಟಡ ಭವನ

ನಿರ್ಮಾಣಕ್ಕೆ ಅಂದಾಜು ಪಟ್ಟಿ ರೂಪುರೇಷೆ ನೀಲನಕ್ಷೆ ತಯಾರಿಸಲು ಸಿದ್ಧತೆ ನಡೆದಿದೆ. ಮೂರು ಅಂತಸ್ತಿನ ಕಟ್ಟಡಕ್ಕೆ ನಿರ್ಮಿಸಲು ಉದ್ದೇಶಿಸಲಾಗಿದೆ. ಬೇಸ್‌ಮೆಂಟ್‌ನಲ್ಲಿ ಪಾರ್ಕಿಂಗ್‌ ವ್ಯವಸ್ಥೆ ನೆಲಮಹಡಿಯಲ್ಲಿ ಸಂಪೂರ್ಣ ವಾಣಿಜ್ಯ ಕಾಂಪ್ಲೆಕ್ಸ್‌ ಮಾಡಿ ಬಾಡಿಗೆಗೆ ಒದಗಿಸುವುದು ಮಾಸಿಕ ಬಾಡಿಗೆಯನ್ನು ಕನ್ನಡ ಭವನದ ನಿರ್ವಹಣೆಗೆ ಬಳಸುವುದು ಮೊದಲ ಮಹಡಿಯಲ್ಲಿ ಭೋಜನಾಲಯ ಹಾಗೂ ಗ್ರಂಥಾಲಯ ಎರಡನೇ ಮಹಡಿಯಲ್ಲಿ 1000 ಜನ ಕುಳಿತುಕೊಳ್ಳುವ ಸಾಮರ್ಥ್ಯದ ಸಾಂಸ್ಕೃತಿಕ  ಭವನ ಮೂರನೇ ಮಹಡಿಯಲ್ಲಿ ಕನ್ನಡಿಗರಿಗಾಗಿ 15 ಗಣ್ಯರ ವಿ‍ಶ್ರಾಂತಿ ಕೊಠಡಿ ನಿರ್ಮಿಸಲು ಸಂಘಟನೆಗಳು ಕೋರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.