
ಬೆಳಗಾವಿ: ಬೆಳಗಾವಿ ವಿಭಜಿಸಿ ಗೋಕಾಕ ಪ್ರತ್ಯೇಕ ಜಿಲ್ಲೆ ರಚಿಸಬೇಕು ಎಂದು ಒತ್ತಾಯಿಸಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿತು.
ಇಲ್ಲಿನ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಂಜೆ ಸಿದ್ದರಾಮಯ್ಯ ಭೇಟಿಯಾದ ನಿಯೋಗ, ಪ್ರತ್ಯೇಕ ಜಿಲ್ಲೆ ರಚಿಸಬೇಕು ಎಂದು ಒತ್ತಾಯಿಸಿತು. ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ತಾಲ್ಲೂಕಿನ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಪಕ್ಷಾತೀತವಾಗಿ ಮನವಿ ಮಾಡಿದರು.
ಗೋಕಾಕದ ಶೂನ್ಯ ಸಂಪಾದನಾ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಅಂಕಲಗಿಯ ಕುಂದರಗಿ ಮಠದ ಅಮರಸಿದ್ಧೇಶ್ವರ ಸ್ವಾಮೀಜಿ, ಘಟಪ್ರಭಾದ ಕೆಂಪಯ್ಯಸ್ವಾಮಿ ಗುಬ್ಬಲಗುಡ್ಡ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕ ಬಾಲಚಂದ್ರ ಜಾರಕಿಹೊಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ ಜಾರಕಿಹೊಳಿ, ಮುಖಂಡರಾದ ಅಶೋಕ ಪೂಜೇರಿ, ಡಾ.ಮಹಾಂತೇಶ ಕಡಾಡಿ, ವಕೀಲರ ಸಂಘದ ಅಧ್ಯಕ್ಷ ಸುಭಾಸ ಬಿರಾದಾರಪಾಟೀಲ ಇತರರಿದ್ದರು.
ಸಚಿವರಾದ ಎಚ್.ಸಿ.ಮಹದೇವಪ್ಪ, ಎಚ್.ಕೆ.ಪಾಟೀಲ, ಬೈರತಿ ಸುರೇಶ ಕೂಡ ಹಾಜರಿದ್ದರು.
18 ಶಾಸಕರ ಅಭಿಪ್ರಾಯ ಪಡೆದು ನಿರ್ಣಯ
‘ಇಂದು ಸಿದ್ದರಾಮಯ್ಯ ಭೇಟಿಯಾಗಿ ಗೋಕಾಕ ಮತ್ತು ಚಿಕ್ಕೋಡಿ ಜಿಲ್ಲೆ ರಚಿಸಬೇಕು ಎಂದು ಒತ್ತಾಯಿಸಿದ್ದೇವೆ. ಜಿಲ್ಲೆಯ 18 ವಿಧಾನಸಭೆ ಕ್ಷೇತ್ರಗಳ ಶಾಸಕರ ಅಭಿಪ್ರಾಯ ಪಡೆದು ನಿರ್ಣಯ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ’ ಎಂದು ಸತೀಶ ಜಾರಕಿಹೊಳಿ ಸುದ್ದಿಗಾರರಿಗೆ ತಿಳಿಸಿದರು.
‘ಅಥಣಿ, ಬೈಲಹೊಂಗಲ ಪ್ರತ್ಯೇಕ ಜಿಲ್ಲೆ ರಚನೆ ಕೂಗು ಕೇಳಿಬರುತ್ತಿದೆಯಲ್ಲ’ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಅಥಣಿ, ಬೈಲಹೊಂಗಲ ಜಿಲ್ಲೆ ರಚನೆಯಾಗುವುದು ಕಷ್ಟದ ಕೆಲಸ. ಆದರೆ, ಗೋಕಾಕ ಮತ್ತು ಚಿಕ್ಕೋಡಿಗೆ ಭೌಗೋಳಿಕ, ಆರ್ಥಿಕ ಹಿನ್ನೆಲೆ ಇದೆ. ಇವುಗಳನ್ನು ಜಿಲ್ಲೆಯಾಗಿ ರಚಿಸಬಹುದು ಎಂದು ಈ ಹಿಂದೆ ಹಲವು ಆಯೋಗಗಳು ಸರ್ಕಾರಕ್ಕೆ ವರದಿ ನೀಡಿವೆ. ಬೆಳಗಾವಿ ವಿಭಜನೆಯಾದರೆ ಒಳ್ಳೆಯದು’ ಎಂದು ಪ್ರತಿಕ್ರಿಯಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ, ಮುಖಂಡ ಅಶೋಕ ಪೂಜಾರಿ ಮಾತನಾಡಿದರು.
ಜಿಲ್ಲೆ ವಿಭಜಿಸುವುದಾದರೆ ಮೊದಲು ಗೋಕಾಕ ಜಿಲ್ಲೆ ರಚಿಸಬೇಕು ಎಂದು ಮನವಿ ಮಾಡಿದ್ದೇವೆ. ಅಧಿವೇಶನದಲ್ಲಿ ಆಶಾವಾದ ಇದೆಬಾಲಚಂದ್ರ ಜಾರಕಿಹೊಳಿ ಶಾಸಕ
ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಮ್ಮ ಬೇಡಿಕೆ ಈಡೇರಿಸುತ್ತಾರೆ ಎಂಬ ವಿಶ್ವಾಸವಿದೆಅಶೋಕ ಪೂಜೇರಿ ರಾಜಕೀಯ ಮುಖಂಡ
ಜಿಲ್ಲೆ ವಿಭಜನೆಗೆ ಸಂಬಂಧಿಸಿ ಇದೇ ಅಧಿವೇಶನ ವೇಳೆ ಸಭೆ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಹೀಗೆ ಶಾಸಕರ ಸಭೆ ನಡೆಯುತ್ತಿರುವುದು ಇದೇ ಮೊದಲ ಸಲಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.