ಗೋಕಾಕ: ಈಚೆಗಷ್ಟೇ ನಡೆದ ಗೋಕಾಕದ ಗ್ರಾಮದೇವಿ ಲಕ್ಷ್ಮಿಯ ಜಾತ್ರೆಯ ಸಂಭ್ರಮ ಇನ್ನೂ ಕಡಿಮೆಯಾಗಿಲ್ಲ. ಜಾತ್ರೆಯಲ್ಲಿ ಆರಂಭವಾದ ಜನರಂಜನೆ– ಮನರಂಜನೆ ಚಟುವಟಿಕೆಗಳು ಇನ್ನೂ ಮುಂದುವರಿದಿವೆ. ಅದರಲ್ಲೂ ಶುದ್ಧ ಹಾಸ್ಯ ಹಾಗೂ ಕರುಣ ರಸದ ‘ಗಂಗಿ ಮನ್ಯಾಗ ಗೌರಿ ಹೊಲದಾಗ’ ನಾಟಕ ಪ್ರೇಕ್ಷಕರನ್ನು ಸೆಳೆಯುತ್ತಿದೆ.
ಮಹಾದೇವ ಹೊಸೂರ ವಿರಚಿತ, ರಾಜಣ್ಣ ಜೇವರ್ಗಿ ನಿರ್ದೇಶನ ಮತ್ತು ಮಾಲೀಕತ್ವದ ವಿಶ್ವಜ್ಯೋತಿ ಪಂಚಾಕ್ಷರಿ ನಾಟ್ಯಸಂಘದ ಕಲಾವಿದರು ಈ ನಾಟಕ ಪ್ರದರ್ಶನ ಮಾಡುತ್ತಿದ್ದಾರೆ. ವಿಧಿಯ ಕೈವಾಡದಿಂದ ಇಡೀ ಸಂಸಾರವೇ ಬುಡಮೇಲಾಗುವ ಕಥಾನಕ ನಾಟಕವನ್ನು ತಿಂಗಳಾದರೂ ಜನ ಕಿಕ್ಕಿರಿದು ನೋಡುತ್ತಿದ್ದಾರೆ.
ತಿಳಿಹಾಸ್ಯ, ಗಾಂಭೀರ್ಯ, ವ್ಯಂಗ್ಯ, ಅಣಕದ ಮೂಲಕವೇ ಸಾಗುವ ನಾಟಕ ಕೊನೆಗೆ ಪ್ರೇಕ್ಷಕರನ್ನು ಮಮ್ಮಲ ಮರಗುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಪ್ರೇಮಿಸಿದವಳನ್ನು (ಗೌರಿ) ಮದುವೆಯಾಗಲಾರದೇ ತಂದೆ ಹೇಳಿದವಳನ್ನು (ಗಂಗಿ) ಮದುವೆಯಾದ ವ್ಯಕ್ತಿಯ ಜೀವನ ಚಕ್ರ, ಹೊಲದಲ್ಲಿದ್ದವಳಿಗೆ ಮಗುವಾಗುವುದು, ಮನೆಯಲ್ಲಿದ್ದವಳಿಗೆ ಮಗುವಾಗದೇ ಇರುವುದು, ಹೊಲದಲ್ಲಿದ್ದವಳ ಮಗುವನ್ನೇ ಮನೆಯಲ್ಲಿದ್ದವಳ ಮಗು ಎಂದು ಬಿಂಬಿಸುವುದು, ಹೆತ್ತ ತಾಯಿಯನ್ನೇ ಮಗ ಗುರುತಿಸದೇ ‘ಜಾರಿಣಿ’ ಎಂದು ನಿಂದಿಸುವುದು, ಕೊನೆಗೆ ಸತ್ಯ ಗೊತ್ತಾಗಿ ಹೆತ್ತವಳು ಆತ್ಮಹತ್ಯೆಗೆ ಶರಣಾಗುವುದು... ಇಂಥ ಹಲವಾರು ಸನ್ನಿವೇಶಗಳಿಗೆ ತಾಲ್ಲೂಕಿನ ಜನ ತಲೆದೂಗಿದ್ದಾರೆ. ಹಾಸ್ಯದೊಂದಿಗೆ ಆರಂಭವಾದ ಕಥಾನಕ ಕರುಣ ರಸಕ್ಕೆ ತಿರುಗಿ ರೋಚಕವಾಗಿ ಮೂಡಿಬಂದಿದ್ದು ಸೆಳೆಯುತ್ತಿದೆ.
‘ಜನಪದ ನಾಟಕಗಳಿಗೆ ಹೆಚ್ಚಿದ ಬೇಡಿಕೆ’
ಗ್ರಾಮೀಣ ಕಥಾನಕಗಳಿಗೆ ಜನ ಈಗಲೂ ಮಾರುಹೋಗುತ್ತಾರೆ ಎಂಬುದಕ್ಕೆ ಈ ನಾಟಕ ಸಾಕ್ಷಿ. ಇಂಥ ನಾಟಕಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹಾಸ್ಯ ಪಾತ್ರಧಾರಿಗಳಾದ ಮಾರುತಿ ಶೆಟ್ಟಿ ಹಾಗೂ ನೀಲಾ ಜೇವರ್ಗಿ ಅವರ ಮಾತುಗಾರಿಕೆ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ. ಮಾರುತಿ ಅವರ ‘ಮಂಗಳಮುಖಿ’ ಪಾತ್ರವಂತೂ ಲಿಂಗತ್ವ ಅಲ್ಪಸಂಖ್ಯಾತರ ಬಗೆಗೆ ತಿರಸ್ಕಾರ ಮರೆಯಾಗಿ ಪುರಸ್ಕಾರ ಹುಟ್ಟಿಸುವಂತಿದೆ. ಅನ್ನಪೂರ್ಣ ಕವಿತಾ ಬಸವರಾಜ ಗುಡ್ಡಪ್ಪನವರ ಪ್ರಕಾಶ ಮಾಡಮಗೇರಿ ಪ್ರಭು ಹಿರೇಮಠ ಅವರ ಪಳಗಿದ ಅಭಿನಯ ಬಸಲಿಂಗಪ್ಪ ಕಡ್ಲಿ ಹಿನ್ನೆಲೆ ಗಾಯನ ಗ್ರಾಮೀಣರಿಗೆ ಆಪ್ತವಾಗುತ್ತದೆ. –ಪ್ರೊ.ಸಿ.ಕೆ.ನಾವಲಗಿ ಜಾನಪದ ವಿದ್ವಾಂಸ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.