ADVERTISEMENT

ಚಿನ್ನ ಕಳವು ಪ್ರಕರಣ: ಆರೋಪಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 12:57 IST
Last Updated 30 ಜೂನ್ 2021, 12:57 IST

ಬೆಳಗಾವಿ: ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣೆ ಆವರಣದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿದ್ದ ₹ 2.50 ಕೋಟಿ ಮೌಲ್ಯದ 4 ಕೆ.ಜಿ. 900 ಗ್ರಾಂ. ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಕಿರಣ ವೀರನಗೌಡರ ಅವರಿಗೆ ಇಲ್ಲಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಸಿಐಡಿ ವಶದಲ್ಲಿರುವ ಹುಬ್ಬಳ್ಳಿ ಮೂಲದ ಕಿರಣ ಅವರಿಗೆ ನ್ಯಾಯಾಧೀಶ ಎನ್.ವಿ. ವಿಜಯ್ ಬುಧವಾರ ಆದೇಶ ಹೊರಡಿಸಿದ್ದಾರೆ. ₹ 3 ಲಕ್ಷ ವೈಯಕ್ತಿಕ ಬಾಂಡ್ ನೀಡಬೇಕು ಹಾಗೂ 15 ದಿನಕ್ಕೊಮ್ಮೆ ಸಿಐಡಿ ತನಿಖೆಗೆ ಹಾಜರಾಗಬೇಕು ಎಂದು ನ್ಯಾಯಾಲಯವು ಆರೋಪಿಗೆ ಷರತ್ತು ವಿಧಿಸಿದೆ ಎಂದು ಸಿಐಡಿ ಮೂಲಗಳು ಮಾಹಿತಿ ನೀಡಿವೆ.

ಚಿನ್ನ ಕಳವು ಪ್ರಕರಣದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಆರೋಪ ಕಿರಣ ಅವರ ಮೇಲಿದೆ. ಅವರನ್ನು ಸಿಐಡಿ ಪೊಲೀಸರು ಜೂನ್ 6ರಂದು ಹುಬ್ಬಳ್ಳಿಯಲ್ಲಿ ವಶಕ್ಕೆ ಪಡೆದಿದ್ದರು. 14 ದಿನ ತಮ್ಮ ಕಸ್ಟಡಿಗೆ ಪಡೆದಿದ್ದರು. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ನಕಲಿ ಪೊಲೀಸ್ ಗುರುತಿನ ಚೀಟಿ ಬಳಕೆ (ಹಿರೇಬಾಗೇವಾಡಿ ಟೋಲ್‌ ನಾಕಾದಲ್ಲಿ ಬಳಸಿದ್ದರು) ಪ್ರಕರಣಕ್ಕೆ ಸಂಬಂಧಿಸಿದಂತೆಯೂ ವಿಚಾರಣೆಗಾಗಿ ಮತ್ತೆ 10 ದಿನ ಕಸ್ಟಡಿಗೆ ತೆಗೆದುಕೊಂಡು, ತೀವ್ರ ವಿಚಾರಣೆಗೆ ಒಳಪಡಿಸಿದ್ದರು.

ADVERTISEMENT

ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದ ಈ ಪ್ರಕರಣದಲ್ಲಿ, ಕೆಲವು ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಆರೋಪಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.