ನಿತೇಶ್ ಪಾಟೀಲ, ಭೀಮಪ್ಪ ಗಡಾದ
ಬೆಳಗಾವಿ: ‘ಆಶ್ರಯ ಯೋಜನೆಗಾಗಿ ಬೈಲಹೊಂಗಲ ತಾಲ್ಲೂಕಿನ ಬೆಳವಡಿಯಲ್ಲಿ ರಾಜ್ಯಪಾಲರ ಹೆಸರಿನಲ್ಲಿ ಖರೀದಿಸಿದ್ದ ಭೂಮಿಯಲ್ಲಿ 5 ಎಕರೆ, 3 ಗುಂಟೆ ಕಬಳಿಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಳವಡಿಯ ಸರ್ವೆ ಸಂಖ್ಯೆ 221/1ಬಿಯಲ್ಲಿ ಖರಾಬ್ ಹೊರತುಪಡಿಸಿ, 13 ಎಕರೆ, 13 ಗುಂಟೆ ಜಮೀನಿತ್ತು. ಈ ಪೈಕಿ 6 ಎಕರೆ ಜಮೀನನ್ನು ಮಾಲೀಕ ಇಮಾಮ್‌ಹುಸೇನ್ ಅತ್ತಾರ್ ಅವರಿಂದ 2002ರಲ್ಲಿ ರಾಜ್ಯಪಾಲರ ಹೆಸರಿನಲ್ಲಿ ಖರೀದಿಸಲಾಗಿತ್ತು. ಆದರೆ, 2022ರಲ್ಲಿ ಪೋಡಿ ಮತ್ತು ಕ್ಷೇತ್ರ ದುರಸ್ತಿ ವೇಳೆ, ರಾಜ್ಯಪಾಲರ ಹೆಸರಿನಲ್ಲಿ 37 ಗುಂಟೆ ಮಾತ್ರ ದಾಖಲಿಸಿ ಕಂದಾಯ ಮತ್ತು ಭೂಮಾಪನ ಇಲಾಖೆ ಅಧಿಕಾರಿಗಳು ವಂಚಿಸಿದ್ದಾರೆ. ಸರ್ಕಾರದ ಬೊಕ್ಕಸಕ್ಕೆ ₹10 ಕೋಟಿ ನಷ್ಟ ಉಂಟು ಮಾಡಿದ್ದಾರೆ’ ಎಂದು ದೂರಿದರು.
‘ಈ ಹಿಂದೆ ಬೆಳಗಾವಿ ಜಿಲ್ಲಾಧಿಕಾರಿಯಾಗಿದ್ದ ನಿತೇಶ್ ಪಾಟೀಲ, ಬೈಲಹೊಂಗಲ ಉಪವಿಭಾಗಾಧಿಕಾರಿಯಾಗಿದ್ದ ಶಶಿಧರ ಬಗಲಿ, ಭೂದಾಖಲೆಗಳ ಉಪನಿರ್ದೇಶಕರಾಗಿದ್ದ ಮೋಹನ ಶಿವನ್ನವರ, ಜಿಲ್ಲಾಧಿಕಾರಿ ಕಾನೂನು ಸಲಹೆಗಾರ ಮುರಗೋಡ ಸೇರಿ ಅನೇಕರು, ಈ ಜಮೀನಿನಲ್ಲಿ ನಿವೇಶನ ನಿರ್ಮಿಸಿ ಖಾಸಗಿಯವರಿಗೆ ದುಬಾರಿ ಬೆಲೆಗೆ ಮಾರಲು ಪೋಡಿ ಮತ್ತು ಕ್ಷೇತ್ರ ದುರಸ್ತಿ ಮಾಡಿದ್ದಾರೆ. ಆದರೆ, ಈ ಪ್ರಕ್ರಿಯೆ ಕೈಗೊಳ್ಳುವ ಮುನ್ನ, ನಿಯಮದಂತೆ ಸರ್ಕಾರದಿಂದ ಅನುಮತಿ ಪಡೆದಿಲ್ಲ’ ಎಂದು ಆರೋಪಿಸಿದರು.
‘ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು, ರಾಜ್ಯಪಾಲರ ಹೆಸರಿನಲ್ಲಿದ್ದ ಆಸ್ತಿಯನ್ನೇ ಕಬಳಿಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಇಲಾಖೆ ವಿಚಾರಣೆಗೆ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗುವುದು’ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.