ADVERTISEMENT

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಪ್ರವೇಶಾತಿ ಹೆಚ್ಚಾಗಬೇಕು: ಮಧು ಬಂಗಾರಪ್ಪ ತಾಕೀತು

ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 13:54 IST
Last Updated 8 ಜುಲೈ 2025, 13:54 IST
<div class="paragraphs"><p>ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು. ಜಯಶ್ರೀ ಶಿಂತ್ರೆ, ರಾಹುಲ್ ಶಿಂಧೆ, ಶಾಸಕರಾದ ಮಹಾಂತೇಶ ಕೌಜಲಗಿ, ದುರ್ಯೋಧನ ಐಹೊಳೆ ಕೂಡ ಪಾಲ್ಗೊಂಡರು</p></div>

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು. ಜಯಶ್ರೀ ಶಿಂತ್ರೆ, ರಾಹುಲ್ ಶಿಂಧೆ, ಶಾಸಕರಾದ ಮಹಾಂತೇಶ ಕೌಜಲಗಿ, ದುರ್ಯೋಧನ ಐಹೊಳೆ ಕೂಡ ಪಾಲ್ಗೊಂಡರು

   

ಬೆಳಗಾವಿ: ‘ಮುಖ್ಯಮಂತ್ರಿ ಅವರ ನಿರ್ದೇಶನದಂತೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಪ್ರವೇಶಾತಿ ಹೆಚ್ಚಾಗಬೇಕು. ಖಾಸಗಿ ಶಾಲೆಗಳ ಮಾದರಿಯಲ್ಲೇ ಸರ್ಕಾರಿ ಶಾಲೆಗಳು ನಿರ್ವಹಿಸುವ ಜೊತೆಗೆ, ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಾಕೀತು ಮಾಡಿದರು.

ಇಲ್ಲಿನ ಸುವರ್ಣ ವಿಧಾನ ಸೌಧದ ಸಭಾಂಗಣದಲ್ಲಿ ಮಂಗಳವಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಕಳೆದ ಬಾರಿಗಿಂತ ಹಾಜರಾತಿ ಕಡಿಮೆ ಇದ್ದ ಶಾಲೆಗಳ ಬಗ್ಗೆ ಗಮನ ವಹಿಸಿ ಮಕ್ಕಳನ್ನು ಶಾಲೆಗೆ ಕರೆತರಬೇಕು. ಈ ಕಾರ್ಯಕ್ಕೆ ಇಲಾಖೆ ವತಿಯಿಂದ ಮನೆ ಮನೆಗೆ ಭೇಟಿ ನೀಡಿ ‘ಶಾಲೆಗೆ ಬಾ’ ಎಂಬ ಅಭಿಯಾನ ಹಮ್ಮಿಕೊಳ್ಳಬೇಕು’ ಎಂದರು.

ADVERTISEMENT

‘ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಸಮವಸ್ತ್ರ, ಊಟ, ಪುಸ್ತಕ ಸೇರಿದಂತೆ ಅಗತ್ಯ ಸೌಕರ್ಯ ನೀಡಲಾಗುತ್ತಿದೆ. ಇನ್ನು ಜುಲೈ 30 ರವರೆಗೆ ಶಾಲಾ ಪ್ರವೇಶಕ್ಕೆ ಅವಕಾಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸರ್ಕಾರಿ ಶಾಲೆಗೆ ಪ್ರವೇಶ ಪಡೆಯುವಂತೆ ಕ್ರಮ ವಹಿಸಬೇಕು’ ಎಂದರು.

‘ಇಲಾಖೆಯ ಅನುದಾನವನ್ನು ಸಮರ್ಪಕವಾಗಿ ಬಳಕೆ‌ ಆಗಬೇಕು. ಶಾಲೆಗಳಲ್ಲಿ ಮಕ್ಕಳಿಗೆ ವಿತರಿಸಲಾಗುವ ಶೂ ಹಾಗೂ ಸಾಕ್ಸ್ ಗುಣಮಟ್ಟದಿಂದ ಕೂಡಿರಬೇಕು. ಜುಲೈ ಅಂತ್ಯದೊಳಗಾಗಿ ಎಲ್ಲ‌ ಮಕ್ಕಳಿಗೆ ಶಾಲಾ‌ ಸಮವಸ್ತ್ರ ಹಾಗೂ ಪಠ್ಯಪುಸಕ್ತಗಳು ವಿತರಿಸಬೇಕು. ಶಿಕ್ಷಣ ಇಲಾಖೆಯಿಂದ ಜಾರಿಯಾಗುವಂತಹ ಯೋಜನೆಗಳ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಮಳೆಗಾಲ ಇರುವುದರಿಂದ ಶಿಥಿಲಗೊಂಡ ಶಾಲಾ ಕಟ್ಟಡಗಳನ್ನು ಗುರುಸಿ ಇಲಾಖೆಯ ಗಮನಕ್ಕೆ ತರಬೇಕು. ಒಂದು ವೇಳೆ ಅಂತಹ ಶಾಲೆಗಳು ಕಂಡು ಬಂದಲ್ಲಿ ಅಂತಹ ಶಾಲೆಗಳಲ್ಲಿ, ಕೊಠಡಿಗಳಲ್ಲಿ ಕಲಿಕಾ ಪ್ರಕ್ರಿಯೆ ಮುಂದುವರೆಸಬಾರದು’ ಎಂದೂ ಅವರು ಹೇಳಿದರು.

‘ಪ್ರತಿ ಶಾಲೆ ಭೇಟಿ ನೀಡಿ ಶಾಲಾ ಕಟ್ಟಡದ ಮಾಹಿತಿ ಪಡೆಯಲಾಗುತ್ತಿದೆ. ಅಂತಹ ಕಟ್ಟಡಗಳು ಕಂಡುಬಂದಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಡಿ ಕಟ್ಟಡ ದುರಸ್ತಿಗೆ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪ ನಿರ್ದೇಶಕಿ ಲೀಲಾವತಿ ಹಿರೇಮಠ ವಿವರಿಸಿದರು.

ಶಾಸಕರಾದ ಮಹಾಂತೇಶ ಕೌಜಲಗಿ, ದುರ್ಯೋಧನ ಐಹೊಳೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಬೆಳಗಾವಿ ಶೈಕ್ಷಣಿಕ ವಿಭಾಗದ ಹೆಚ್ಚುವರಿ ಆಯುಕ್ತರಾದ ಜಯಶ್ರೀ ಶಿಂತ್ರೆ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.

‘ಗೋಕಾಕ, ರಾಯಬಾಗದಲ್ಲಿ ಕಡಿಮೆ’

‘ಗೋಕಾಕ ಹಾಗೂ ರಾಯಬಾಗ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಯ ಮಕ್ಕಳ ಹಾಜರಾತಿ ಬಹಳ ಕಡಿಮೆ ಇದೆ. ಸಂಬಂಧಿಸಿದ ಅಧಿಕಾರಿಗಳು ಕಡ್ಡಾಯವಾಗಿ ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ನಿರಂತರ ಪರಿಶೀಲನೆ ನಡೆಸಬೇಕು’ ಎಂದೂ ಸಚಿವ ಮಧು ಬಂಗಾರಪ್ಪ ಸೂಚಿಸಿದರು.

‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಳೆದ ವರ್ಷಕ್ಕಿಂತ ಅಧಿಕ ಮಕ್ಕಳು ಈ ವರ್ಷ ಉತ್ತೀರ್ಣರಾಗಿದ್ದಾರೆ. ಜಿಲ್ಲೆಯಲ್ಲಿ ಕಲಿಕೆಯಿಂದ ಹಿಂದುಳಿದ ಮಕ್ಕಳನ್ನು ಗುರುತಿಸಿ, ಬಲಪಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಪ್ರತಿ ಜಿಲ್ಲೆಯಲ್ಲಿ ‘ಓದು ಕರ್ನಾಟಕ’ ಎಂಬ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸರ್ಕಾರದಿಂದ ಈಗಾಗಲೇ ನಿರ್ದೇಶನ ನೀಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.