ಗೋಕಾಕ: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸುವ ಕಾರ್ಯವನ್ನು ಮಾಡಬೇಕು, ಭವಿಷ್ಯತ್ತಿನಲ್ಲಿ ಅದೇ ಶಿಕ್ಷಣ ದೀಪವಾಗಿ ಬೆಳಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ತಾಲ್ಲೂಕಿನ ಕೊಳವಿ ಗ್ರಾಮದ ‘ನಮ್ಮೂರ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆʼಯ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಶತಮಾನೋತ್ಸವದ ಕಾರ್ಯಕ್ರಮಗಳು ಎಲ್ಲ ಗ್ರಾಮಗಳಲ್ಲಿ ನಡೆದಾಗ ಮಾತ್ರ ಗ್ರಾಮೀಣ ಪ್ರದೇಶ ಶೈಕ್ಷಣಿಕ ಉನ್ನತ್ತಿಗೆ ಸಾಕಷ್ಟು ಉತ್ತೇಜನ ದೊರಯಲು ಸಾಧ್ಯ. ಹೀಗಾಗಿ, ಗ್ರಾಮೀಣ ಪ್ರದೇಶದ ಜನರು ಈ ದಿಶೆಯಲ್ಲಿ ಶತಾಯಗತಾಯವಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಇರುವುದು ಅಲ್ಲಿನ ಶಿಕ್ಷಕರಿಗೆ, ಪೋಷಕರಿಗೆ, ಹಳೆಯ ವಿದ್ಯಾಥಿಗಳಿಗೆ ಮತ್ತು ಆ ಊರಿನ ಗ್ರಾಮಸ್ಥರಿಗೆ. ನಮ್ಮೂರ ಸರ್ಕಾರಿ ಶಾಲೆಗಳು ಬೆಳೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಸಿದರು.
ಸತೀಶ ಜಾರಕಿಹೊಳಿ ಪೌಂಢೇಶನ್ʼದಿಂದ ಜಿಲ್ಲೆಯ ವಿವಿಧ ಶಾಲೆಗಳಿಗೆ ಸುಮಾರು 5 ಲಕ್ಷ ಡೆಸ್ಕ್ ನೀಡಲಾಗಿದೆ. ಜೊತೆಗೆ ಮಕ್ಕಳ ಅನುಕೂಲಕ್ಕಾಗಿ ಕುರ್ಚಿಗಳನ್ನೂ ನೀಡಲಾಗಿದೆ. ನೂರಾರು ಸರ್ಕಾರಿ, ಖಾಸಗಿ ಶಾಲೆಗಳಿಗೆ ಸುಸುಜ್ಜಿತವಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಶಾಲಾ ಮಕ್ಕಳಿಗೆ ಶಿಕ್ಷಣಕ್ಕೆ ಅನುಗುಣವಾಗಿ ಪುಸ್ತಕಗಳನ್ನು ವಿತರಿಸಲಾಗಿದೆ. ಕೇವಲ ಎರಡು ವರ್ಷಗಳ ಅವಧಿಯಲ್ಲಿ ಯಮಕನಮರಡಿ ಕ್ಷೇತ್ರದಲ್ಲಿ ಸುಮಾರು 100 ಸರ್ಕಾರಿ ಶಾಲೆಗಳ ನಿರ್ಮಾಣವಾಗಿದೆ. ಅಲ್ಲಿ ಕಲಿಕೆಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
‘ಈ ಶಾಲೆಯಲ್ಲಿ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿಉನ್ನತ ಸ್ಥಾನದಲ್ಲಿದ್ದಾರೆ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಶಾಲೆಯ ವೈಭವವನ್ನು ಕಣ್ಮುಂಬಿಕೊಳ್ಳಬೇಕು. ಮತ್ತೆ ಸಾವಿರಾರು ಮಕ್ಕಳಿಗೆ ಬೆಳಕಾಗಬೇಕು. ಕಲಿತ ಶಾಲೆಗೆ ಸ್ವಲ್ಪ ಸಹಾಯ-ಸಹಕಾರ ಮಾಡಿದಾಗ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗುತ್ತವೆ. ಕಲಿತ ಶಾಲೆಯ ಋಣ ತೀರಿಸುವುದರೊಂದಿಗೆ ಸಮಾಜದ ಸೇವೆಯಲ್ಲಿ ತೊಡಗಿಕೊಳ್ಳಬೇಕು ಅಂದಾಗ ಮಾತ್ರ ಶಿಕ್ಷಣ ಕಲಿಸಿದ ಗುರುಗಳಿಗೂ ಕೀರ್ತಿ ಸಲ್ಲುತ್ತದೆ. ಶಾಲೆಯ ಶತಮಾನ ಪಯಣವು ಶಿಕ್ಷಣದ ಬೆಳಕಿನ ಜೊತೆಗೆ ಸಮಾಜ ನಿರ್ಮಾಣದ ಸಾಕ್ಷಿಯಾಗಿದ್ದು, ಈ ಹೆಮ್ಮೆಯ ಕ್ಷಣದಲ್ಲಿ ಭಾಗಿಯಾಗಿರುವುದು ನನಗೂ ಸಂತಸ ತಂದಿದೆ’ ಎಂದು ಹೇಳಿದರು.
ಕುಷ್ಟಗಿಯ ಕರಿಬಸವ ಸ್ವಾಮೀಜಿ, ತವಗ ಅಜ್ಜಯ್ಯ ಸ್ವಾಮೀಜಿ, ಹುಲಿಕಟ್ಟಿ ಶಿವಲಿಂಗೇಶ್ವರ ಮಠದ ಕುಮಾರ ಸ್ವಾಮಿಜಿ, ಕಪರಟ್ಟಿಯ ಪ್ರವಚನಕಾರ ಬಸವರಾಜ ಹಿರೇಮಠ, ತಹಶೀಲ್ದಾರ ಡಾ. ಮೋಹನ ಭಸ್ಮೆ, ತಾ.ಪಂ. ಇ.ಓ. ಪರಶುರಾಮ ಘಸ್ತೆ, ಗ್ರಾ.ಪಂ. ಪಿಡಿಓ ಸಂಜುಕುಮಾರ ಜೋತಾವರ, ಎಸ್.ಡಿ.ಎಂ.ಸಿ. ಅಧ್ಯಕ್ಷ ಶಿವಾನಂದ ಮಮದಾಪುರ ಮತ್ತಿತರರು ಪಾಲ್ಗೊಂಡಿದ್ದರು.
ಬಾಳಯ್ಯ ಪೂಜೇರಿ ಸ್ವಾಗತಿಸಿದರು.
ಗೋಕಾಕ ತಾಲ್ಲೂಕಿನ ಕೊಳವಿ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಗೋಕಾಕ ತಾಲ್ಲೂಕಿನ ಕೊಳವಿ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡು ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.