ADVERTISEMENT

ಕೋಮು ಸೌಹಾರ್ದ ಹಾಳು ಮಾಡುವವರ ವಿರುದ್ಧ ಸರ್ಕಾರ ಬಿಗಿ ಕ್ರಮ ಕೈಗೊಳ್ಳಲಿ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 13:19 IST
Last Updated 11 ಏಪ್ರಿಲ್ 2022, 13:19 IST
ಶಾಸಕ ಬಿ.ಎಸ್. ಯಡಿಯೂರಪ್ಪ
ಶಾಸಕ ಬಿ.ಎಸ್. ಯಡಿಯೂರಪ್ಪ   

ಬೆಳಗಾವಿ: ‘ರಾಜ್ಯದಲ್ಲಿ ಕೋಮು ಸೌಹಾರ್ದ ಹಾಳು ಮಾಡುವಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಸರ್ಕಾರವು ಬಿಗಿಯಾದ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಬಿ.ಎಸ್. ಯಡಿಯೂರಪ್ಪ ಸಲಹೆ ನೀಡಿದರು.

ಪಕ್ಷ ಸಂಘಟನೆಗಾಗಿ ಎರಡು ದಿನಗಳ ಸಭೆಗಾಗಿ ಇಲ್ಲಿಗೆ ಸೋಮವಾರ ಬಂದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

‘ಹಿಂದೂ–ಮುಸ್ಲಿಮರು ಒಂದೇ ತಾಯಿ ಮಕ್ಕಳಂತೆ ಬಾಳಬೇಕು ಎನ್ನುವುದು ಪಕ್ಷ ಹಾಗೂ ಪ್ರಧಾನಿ ನರೇಂದ್ರ ಅವರ ಅಪೇಕ್ಷೆ. ಅಲ್ಲಲ್ಲಿ ಅಹಿತಕರ ಘಟನೆಗಳು ನಡೆದಿವೆ. ಅವುಗಳಿಗೆ ನಮ್ಮ ಬೆಂಬಲವಿಲ್ಲ. ಅಂತಹ ಘಟನೆಗಳನ್ನು ಖಂಡಿಸುತ್ತೇನೆ. ಅದೇ ರೀತಿ ಮುಂದುವರಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಗೊಂದಲ ಉಂಟು ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಈಗಾಗಲೇ ಹೇಳಿದ್ದಾರೆ. ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದರು.

‘ಪಕ್ಷವನ್ನು ಬಲಪಡಿಸುವುದು ಹಾಗೂ ಮುಂದಿನ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲು ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದೇವೆ. ಕಾರ್ಯಕರ್ತರೊಂದಿಗೆ ಸಮಾಲೋಚನೆ, ಸ್ಥಿತಿಗತಿ ತಿಳಿದುಕೊಳ್ಳುವುದು, ಸಂಘಟನೆ ಬಲಪಡಿಸಲು ಏನೇನು ಮಾಡಬೇಕು ಎಂಬ ಸಲಹೆಗಳನ್ನೂ ಪಡೆಯಲಾಗುವುದು. ಮುಂದಿನ ಚುನಾವಣೆವರೆಗೆ ಎಲ್ಲರೂ ಒಟ್ಟಾಗಿ ಪ್ರವಾಸ ಕೈಗೊಳ್ಳುತ್ತೇವೆ’ ಎಂದರು.

‘ಜಿಲ್ಲೆಯಲ್ಲಿ ಪಕ್ಷದಲ್ಲಿರುವ ಭಿನ್ನಮತದ ಬಗ್ಗೆ ಚರ್ಚೆಯಾಗುವುದೇ’ ಎಂಬ ಪ್ರಶ್ನೆಗೆ, ‘ಸಂಘಟನೆಯ ಹಿತದೃಷ್ಟಿಯಿಂದ ಎಲ್ಲ ವಿಷಯಗಳ ಬಗ್ಗೆಯೂ ಚರ್ಚಿಸುತ್ತೇನೆ. ಸರಿಪಡಿಸಲು ಬಿಚ್ಚು ಮನಸ್ಸಿನಿಂದ ಪ್ರಯತ್ನಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ‘ಕಾಡಾ’ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.