ADVERTISEMENT

ಗ್ರಾಮ ಪಂಚಾಯಿತಿ ಜಾಗೃತಿ; ಸೋಂಕು ನಿಯಂತ್ರಣ

ಅರಣ್ಯದಂಚಿನ ಗ್ರಾಮಗಳಲ್ಲಿ ಕಾರ್ಯಪಡೆ ಸಕ್ರಿಯ

ಪ್ರಸನ್ನ ಕುಲಕರ್ಣಿ
Published 22 ಮೇ 2021, 19:30 IST
Last Updated 22 ಮೇ 2021, 19:30 IST
ಖಾನಾಪುರ ತಾಲ್ಲೂಕಿನ ಗೋಧೋಳಿ ಗ್ರಾಮ ಪಂಚಾಯಿತಿ ಪಿಡಿಒ ಆನಂದ ಭಿಂಗೆ ಸಿಬ್ಬಂದಿಯೊಂದಿಗೆ ಶನಿವಾರ ಮನೆಗಳಿಗೆ ಭೇಟಿ ನೀಡಿ ಕೋವಿಡ್ ಜಾಗೃತಿ ಮೂಡಿಸಿದರು
ಖಾನಾಪುರ ತಾಲ್ಲೂಕಿನ ಗೋಧೋಳಿ ಗ್ರಾಮ ಪಂಚಾಯಿತಿ ಪಿಡಿಒ ಆನಂದ ಭಿಂಗೆ ಸಿಬ್ಬಂದಿಯೊಂದಿಗೆ ಶನಿವಾರ ಮನೆಗಳಿಗೆ ಭೇಟಿ ನೀಡಿ ಕೋವಿಡ್ ಜಾಗೃತಿ ಮೂಡಿಸಿದರು   

ಖಾನಾಪುರ (ಬೆಳಗಾವಿ ಜಿಲ್ಲೆ): ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ತಾಲ್ಲೂಕಿನ ಕೆಲವು ಗ್ರಾಮ ಪಂಚಾಯಿತಿಗಳ ಪಿಡಿಒಗಳು ಸಿಬ್ಬಂದಿ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ವಿಶೇಷ ಪ್ರಯತ್ನವನ್ನು ಕೈಗೊಳ್ಳುತ್ತಿದ್ದಾರೆ. ಈ ಪರಿಣಾಮ ತಾಲ್ಲೂಕಿನ ಅರಣ್ಯದಂಚಿನ ಕೆಲ ಗ್ರಾಮಗಳಲ್ಲಿ ಪ್ರಕರಣಗಳ ಸಂಖ್ಯೆ ಸದ್ಯಕ್ಕೆ ನಿಯಂತ್ರಣದಲ್ಲಿದೆ.

ಲೋಂಡಾ ಅರಣ್ಯದ ಮೋಹಿಶೇತ ಗ್ರಾ.ಪಂ. ವ್ಯಾಪ್ತಿಯಲ್ಲಿ 22 ಗ್ರಾಮಗಳಿವೆ. ಅಲ್ಲಿನ ಪಿಡಿಒ ಪ್ರವೀಣ ಸಾಯನಾಕ, ಗ್ರಾ.ಪಂ. ಸದಸ್ಯರು ಮತ್ತು ಸಿಬ್ಬಂದಿಯೊಂದಿಗೆ ಎಲ್ಲ ಗ್ರಾಮಗಳಿಗೆ ನಿಯಮಿತವಾಗಿ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಿದ್ದರಿಂದ ಆ ವ್ಯಾಪ್ತಿಯಲ್ಲಿ ಸೋಂಕು ಹೆಚ್ಚಿಲ್ಲ.

ಭೀಮಗಡ ವನ್ಯಧಾಮದ ಅಮಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮಗಾಂವದಲ್ಲಿ ಪಿಡಿಒ ಎಂ.ಎಚ್. ಮೊಕಾಶಿ ಮತ್ತು ಲೋಂಡಾ ಗ್ರಾಮದಲ್ಲಿ ಪಿಡಿಒ ಬಾಲರಾಜ್ ಭಜಂತ್ರಿ ಕಾರ್ಯಪಡೆಯೊಂದಿಗೆ ಮನೆಗಳಿಗೆ ತೆರಳಿ ತಪಾಸಣೆ, ಚಿಕಿತ್ಸೆ, ಸಲಹೆ ಕಾರ್ಯಕ್ರಮ ನಡೆಸಿದ್ದಾರೆ. ಹಿರಿಯ ನಾಗರಿಕರಿಗೆ ಕೋವಿಡ್ ಲಸಿಕೆ ಕಲ್ಪಿಸುವುದು ಸೇರಿದಂತೆ ಹಲವು ಸಕಾಲಿಕ ಕ್ರಮಗಳನ್ನು ಕೈಗೊಂಡು ಗಮನಸೆಳೆದಿದ್ದಾರೆ.

ADVERTISEMENT

ಬೆರೆಯಲು ಬಿಡಲಿಲ್ಲ:ನಾಗರಗಾಳಿ ಅರಣ್ಯದ ಗೋಟಗಾಳಿ ಮತ್ತು ಗೋಧೋಳಿ ಪಿಡಿಒ ಆನಂದ ಭಿಂಗೆ ಅಲ್ಲಿಯ ಗೋದಗೇರಿ, ಶಿವಠಾಣ, ದೇವರಾಯಿ, ಬಾಳಗುಂದ, ಅವರತಬೈಲ್ ಮತ್ತಿತರ ಗ್ರಾಮಗಳಲ್ಲಿ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದಿಂದ ಬಂದವರನ್ನು 14 ದಿನಗಳ ಕಾಲ ಗ್ರಾಮಸ್ಥರೊಂದಿಗೆ ಬೆರೆಯಲು ಬಿಡದೆ ಪ್ರತ್ಯೇಕಗೊಳಿಸಿದ್ದರ ಪರಿಣಾಮ ಆ ಭಾಗದಲ್ಲಿ ಪ್ರಕರಣ ನಿಯಂತ್ರಣದಲ್ಲಿದೆ. ಗರ್ಲಗುಂಜಿ ಪಿಡಿಒ ಜ್ಯೋತಿಬಾ ಕಾಮಕರ ಗ್ರಾ.ಪಂ ಸದಸ್ಯರ ನೆರವಿನೊಂದಿಗೆ ಪಲ್ಸ್‌ ಆಕ್ಸಿಮೀಟರ್ ಮತ್ತು ಥರ್ಮಲ್ ಸ್ಕ್ಯಾನರ್‌ ಮೊದಲಾದ ಪರಿಕರಗಳನ್ನು ಖರೀದಿಸಿದ್ದಾರೆ. ಪ್ರತಿ ಮನೆಗೆ ಕೋವಿಡ್ ಕಾರ್ಯಪಡೆಯೊಂದಿಗ ಭೇಟಿ ನೀಡಿ ನಿವಾಸಿಗಳ ಆರೋಗ್ಯದ ವರದಿ ಪಡೆದಿದ್ದಾರೆ. ಅನಾರೋಗ್ಯ ಪೀಡಿತರನ್ನು ಪ್ರತ್ಯೇಕಗೊಳಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆಶಾ ಕಾರ್ಯಕರ್ತೆಯರ ಉಸ್ತುವಾರಿಯಲ್ಲಿ ನಿಯಮಿತವಾಗಿ ಸಲಹೆ-ಸೂಚನೆಗಳನ್ನು ನೀಡಲಾಗುತ್ತಿದೆ.

ಮನೆಯಲ್ಲೇ ಇರುವಂತೆ ಮಾಡಿದರು
ಶಿಂಧೋಳಿ ಪಿಡಿಒ ಪ್ರಭಾಕರ ಭಟ್ ಸಾವರಗಾಳಿ, ಹೊಣಕಲ್, ಗಂಗವಾಳಿ, ಮಾಣಿಕವಾಡಿ ಗ್ರಾಮಗಳಲ್ಲಿ ಮತ್ತು ಗೋಲ್ಯಾಳಿ ಪಿಡಿಒ ಸುನೀಲ ಅಂಬಾರಿ ಗ್ರಾ.ಪಂ ವ್ಯಾಪ್ತಿಯ ಗೋಲ್ಯಾಳಿ, ತೋರಾಳಿ, ಬೆಟಗೇರಿ ಗ್ರಾಮಗಳಲ್ಲಿ ಮತ್ತು ನೀಲಾವಡೆ ಪಿಡಿಒ ಬಳಿರಾಮ ಪಾಟೀಲ ಮಳವ, ಅಂಬೋಳಿ, ಕಾಂಜಳೆ, ಕಬನಾಳಿ ಗ್ರಾಮಗಳಲ್ಲಿ ವಾರಕ್ಕೆ ಮೂರು ಬಾರಿ ಗ್ರಾಮಸ್ಥರ ವಾರ್ಡ್ ಸಭೆ ಆಯೋಜಿಸಿ ತಿಳಿವಳಿಕೆ ನೀಡುತ್ತಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಜನರು ಕಡ್ಡಾಯವಾಗಿ ಮನೆಯಲ್ಲೇ ಇರುವಂತೆ ಮಾಡಿದ್ದರು. ಪರಿಣಾಮ ಸೋಂಕಿತರು ಗುಣಮುಖರಾಗಿದ್ದಾರೆ. ವಾರದಿಂದ ಹೊಸ ಪ್ರಕರಣ ದೃಢಪಟ್ಟಿಲ್ಲ.

‘ತಾಲ್ಲೂಕಿನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಕೋವಿಡ್ ನಿಯಂತ್ರಣ ಕಾರ್ಯಕ್ಕೆ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು, ಸೆಕ್ಟರ್ ಅಧಿಕಾರಿಗಳು, ಕಾರ್ಯದರ್ಶಿ, ಡಿಇಒ, ಕ್ಲರ್ಕ್, ವಾಟರಮನ್ ಮತ್ತು ಸಿಬ್ಬಂದಿ ಸಹಕಾರ ನೀಡುತ್ತಿದ್ದಾರೆ. ಮನೆ-ಮನೆಗೆ ಭೇಟಿ ನೀಡಿ ಗ್ರಾಮಸ್ಥರ ಆರೋಗ್ಯದ ಮಾಹಿತಿ ಸಂಗ್ರಹಿಸಿ, ತಿಳುವಳಿಕೆ ನೀಡಿದ್ದಾರೆ. ಸೊಂಕು ನಿವಾರಕ ದ್ರಾವಣ ಸಿಂಪಡಿಸುವುದು, ಜಾಗೃತಿ ಅಭಿಯಾನ ನಡೆಸುವುದು ಮಾಡುತ್ತಿದ್ದಾರೆ. ಹೊರಗಿನಿಂದ ಬಂದವರ ಮಾಹಿತಿ ಸಂಗ್ರಹಿಸಿ ಅವರನ್ನು ಪ್ರತ್ಯೇಕವಾಗಿರುವಂತೆ ನೋಡಿಕೊಂಡಿದ್ದರು. ಪರಿಣಾಮ ತಾಲ್ಲೂಕಿನ 60ಕ್ಕೂ ಹೆಚ್ಚು ಊರುಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎನ್ನುತ್ತಾರೆ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಎಂ.ಜಿ ದೇವರಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.