ADVERTISEMENT

ತಾಯ್ನಾಡಿನತ್ತ ಹಳ್ಳೂರಿನ ಅವಳಿ ಸಹೋದರಿಯರು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2022, 12:49 IST
Last Updated 5 ಮಾರ್ಚ್ 2022, 12:49 IST
   

ಮೂಡಲಗಿ (ಬೆಳಗಾವಿ ಜಿಲ್ಲೆ): ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದ ತಾಲ್ಲೂಕಿನ ಹಳ್ಳೂರ ಗ್ರಾಮದ ಅವಳಿ ಸಹೋದರಿಯರಾದ ಪ್ರಿಯಾ ಛಬ್ಬಿ ಮತ್ತು ಪ್ರೀತಿ ಛಬ್ಬಿ ಸುರಕ್ಷಿತವಾಗಿದ್ದು, ತಾಯ್ನಾಡಿನತ್ತ ಹೊರಟಿದ್ದಾರೆ.

ಪೋಲೆಂಡ್‌ನ ವಿಮಾನನಿಲ್ದಾಣದಿಂದ ಹೊರಡುತ್ತಿರುವುದಾಗಿ ಅವರು ಪಾಲಕರಿಗೆ ವಾಟ್ಸ್‌ಆ್ಯಪ್‌ ವಿಡಿಯೊ ಕರೆ ಮೂಲಕ ಮಾತನಾಡಿದ್ದಾರೆ. ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಎರಡು ದಿನಗಳಿಂದ ಅಲ್ಲಿನ ಆರ್ಟ್ ಆಫ್‌ ಲಿವಿಂಗ್‌ ಆಶ್ರಮದಲ್ಲಿ ವಾಸ್ತವ್ಯ ಮಾಡಿದ್ದು, ತಾವು ಸುರಕ್ಷಿತವಾಗಿದ್ದರ ಬಗ್ಗೆ ಪಾಲಕರಿಗೆ ಮಾಹಿತಿ ನೀಡಿದ್ದಾರೆ.

ADVERTISEMENT

‘ಅವರು ತಾವಿದ್ದ ಹಾರ್ಕಿವ್‌ನಿಂದ ಪೋಲಂಡ್‌ವರೆಗೆ ನಾಲ್ಕು ದಿನಗಳ ಹಿಂದೆ ಸಾವಿರ ಕಿ.ಮೀ.ವರೆಗೆ ರೈಲು ಹಾಗೂ ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ಅಲ್ಲಲ್ಲಿ ಕಾಲ್ನಡಿಗೆಯಲ್ಲಿ ತಲುಪಿದ್ದಾಗಿ ತಿಳಿಸಿದ್ದಾರೆ’ ಎಂದು ಆ ವಿದ್ಯಾರ್ಥಿನಿಯರ ದೊಡ್ಡಪ್ಪ ಮಲ್ಲಪ್ಪ ಛಬ್ಬಿ ‘ಪ್ರಜಾವಾಣಿ‘ಗೆ ತಿಳಿಸಿದರು.

‘ಪೋಲೆಂಡ್‌ ತಲುಪಿದ ಮೇಲೆ ಭಯ ದೂರವಾಯ್ತು. ಇಲ್ಲಿ ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮದಲ್ಲಿ ಊಟ, ನೀರಿನ ವ್ಯವಸ್ಥೆಯನ್ನು ಉತ್ತಮವಾಗಿ ಮಾಡಿದ್ದರು. ನಿದ್ರೆಯನ್ನೂ ಮಾಡಿದೆವು. 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಮ್ಮೊಂದಿಗಿದ್ದರು. ಹುಡುಗರು ಮತ್ತು ಹುಡುಗಿಯರ ವಾಸ್ತವ್ಯಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿದ್ದರು ಎಂದು ಮಕ್ಕಳು ತಿಳಿಸಿದ್ದಾರೆ. ತಂದೆ ಲಕ್ಷ್ಮಣ ಛಬ್ಬಿ ಅವರೊಂದಿಗೂ ಶನಿವಾರ ಮಾತನಾಡಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರು ಮನೆಗೆ ತಲಪಬಹುದು. ಇದರಿಂದ ನಮ್ಮ ಆತಂಕ ಕಡಿಮೆಯಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.