ಸವದತ್ತಿ: ‘ಮಾರುತಿ ದೇವಸ್ಥಾನದ ಎದುರಿಗಿರುವ ಜಾಗದಲ್ಲಿ ಸಮುದಾಯ ಭವನದ ಬದಲು ₹50 ಲಕ್ಷ ವೆಚ್ಚದಲ್ಲಿ ಕಲ್ಯಾಣ ಮಂಟಪ ನಿರ್ಮಿಸಲಾಗುವುದು’ ಎಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು.
ತಾಲೂಕಿನ ಹರ್ಲಾಪೂರ ಗ್ರಾಮದಲ್ಲಿ ಶನಿವಾರ ನಡೆದ ಹನಮಂತ ದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಆಧ್ಯಾತ್ಮಿಕ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರೇಣುಕಾ ಏತ ನೀರಾವರಿಯಲ್ಲಿ 50 ವರ್ಷ ಹಳೆಯ ಯಂತ್ರೋಪಕರಣಗಳಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಿದೆ. ಅದಕ್ಕಾಗಿ ಕೆಎನ್‌ಎನ್‌ಎಲ್ ಜೊತೆ ಚರ್ಚಿಸಲಾಗಿದೆ. ಏತ ನೀರಾವರಿ ಪುನಶ್ಚೇತನಕ್ಕೆ ₹19 ಕೋಟಿ ಅನುದಾನ ಮೀಸಲಿರಿಸಲಾಗಿದೆ. ಈ ಕಾಮಗಾರಿ ಪೂರ್ಣಗೊಂಡಲ್ಲಿ ಈ ಭಾಗದ ಜನರ ನೀರಿನ ಕೊರತೆ ನಿವಾರಣೆಯಾಗಲಿದೆ’ ಎಂದರು.
‘ಹಲವು ವರ್ಷಗಳಿಂದ ಹರ್ಲಾಪೂರ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಇಲ್ಲ. ಶಿಕ್ಷಣಕ್ಕಾಗಿ ಮಕ್ಕಳು 2-3 ಕಿಮೀ. ಪ್ರತಿದಿನ ನಡೆದುಕೊಂಡು ಶಾಲೆ ತಲುಪಬೇಕಿದೆ. ಸಾರಿಗೆ ಇಲಾಖೆಯೊಂದಿಗೆ ಚರ್ಚಿಸಿ ಶಾಲಾ ಸಮಯಕ್ಕಾದರೂ ಬಸ್ಸಿನ ಸೌಕರ್ಯ ಒದಗಿಸಲಾಗುವುದು. ಉಗರಗೋಳ- ಹೂಲಿ ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರಾಗಿದ್ದು, ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು’ ಎಂದು ಭರವಸೆ ನೀಡಿದರು.
‘ಧಾರ್ಮಿಕ ಕಾರ್ಯಕ್ರಮಗಳಿಂದಲೇ ಕಾಲ-ಕಾಲಕ್ಕೆ ಮಳೆ, ಸಮೃದ್ಧಿ ಬೆಳೆ ಪಡೆದು ಕ್ಷೇತ್ರ ಸುಭಿಕ್ಷವಾಗಿದೆ. ಗ್ರಾಮದಲ್ಲಿ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಜಾತ್ರೆ ಆಚರಿಸುತ್ತಿರುವುದು ಶ್ಲಾಘನಾರ್ಹ’ ಎಂದರು.
ಹಾರೋಗೊಪ್ಪದ ಚನ್ನವೃಷಭೇಂದ್ರ ಲೀಲಾಮಠದ ಶಿವಯೋಗಿನಿದೇವಿ ಮಾತನಾಡಿ, ‘ಜೀವನದಲ್ಲಿ ಬಡತನ ಇದ್ದರೂ ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರ ನೀಡಿದರೆ ಪಾಲಕರ ಜೀವನ ಸಾರ್ಥಕವಾಗಲಿದೆ’ ಎಂದು ಹೇಳಿದರು.
ಉಮೇಶ ದಿಡಗನ್ನವರ, ವಿ.ಕೆ. ಪಾಟೀಲ, ಚಿದಾನಂದ ತಳವಾರ, ಪರಸನಗೌಡ ಪಾಟೀಲ, ನವೀನ ಪವಾಡಿ, ರಾಜು ಚಿಕ್ಕೊಪ್ಪ, ನಿಂಗನಗೌಡ ಪಾಟೀಲ, ರಾಮನಗೌಡ ತಿಪರಾಶಿ, ಬಸನಗೌಡ ಪಾಟೀಲ, ಶಿವಾನಂದ ಚಚಡಿ, ಶಿವಪ್ಪ ಪವಾಡಿ, ಫಕ್ಕಿರಪ್ಪ ವಕ್ಕುಂದ, ಮಾಯಪ್ಪ ಪವಾಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.