ADVERTISEMENT

ಪುಷ್ಪ ಕೃಷಿಯಲ್ಲಿ ಅರಳಿದ ಖುಷಿ: ಪ್ರಗತಿಪರ ರೈತ ಯಲ್ಲಪ್ಪ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 19:45 IST
Last Updated 30 ಸೆಪ್ಟೆಂಬರ್ 2019, 19:45 IST
ಗದ್ದಿಕರವಿನಕೊಪ್ಪದ ಪ್ರಗತಿಪರ ರೈತ ಯಲ್ಲಪ್ಪ ಕೆಳಗಿನಮನಿ ಅವರು ಪಾಲಿಹೌಸ್‌ನಲ್ಲಿ ತಾವು ಬೆಳೆದಿರುವ ಮಾರಿಗೋಲ್ಡ್ ಹೂವನ್ನು ತೋರಿಸಿದರು
ಗದ್ದಿಕರವಿನಕೊಪ್ಪದ ಪ್ರಗತಿಪರ ರೈತ ಯಲ್ಲಪ್ಪ ಕೆಳಗಿನಮನಿ ಅವರು ಪಾಲಿಹೌಸ್‌ನಲ್ಲಿ ತಾವು ಬೆಳೆದಿರುವ ಮಾರಿಗೋಲ್ಡ್ ಹೂವನ್ನು ತೋರಿಸಿದರು   

ಎಂ.ಕೆ. ಹುಬ್ಬಳ್ಳಿ: ಬೈಲಹೊಂಗಲ ತಾಲ್ಲೂಕು ಗದ್ದಿಕರವಿನಕೊಪ್ಪದ ಪ್ರಗತಿ ಪರ ರೈತ ಯಲ್ಲಪ್ಪ ಪಕ್ಕೀರಪ್ಪ ಕೆಳಗಿನಮನಿ 20 ಗುಂಟೆಯಲ್ಲಿ ನಿರ್ಮಿಸಿರುವ ಪಾಲಿಹೌಸ್‌ನಲ್ಲಿ ಹೂದೋಟ ಮಾಡಿದ್ದಾರೆ. ‘ಮಾರಿಗೋಲ್ಡ್’ ಹೆಸರಿನ ಹಳದಿ ಬಣ್ಣದ ಅತ್ಯಾಕರ್ಷಕ ಹೂವು ಬೆಳೆದು ಗಮನಸೆಳೆದಿದ್ದಾರೆ.

2015–16ನೇ ಸಾಲಿನಲ್ಲಿ ‘ಕೃಷಿ ಭಾಗ್ಯ’ ಯೋಜನೆಯಲ್ಲಿ ₹ 17.5 ಲಕ್ಷ ಸಬ್ಸಿಡಿ ಪಡೆದು ಪಾಲಿಹೌಸ್ ನಿರ್ಮಿಸಿಕೊಂಡಿದ್ದಾರೆ. ಒಂದೆರಡು ವರ್ಷ ವರ್ಷ ಕ್ಯಾಪ್ಸಿಕಂ ಬೆಳೆದಿದ್ದರು. ದರದಲ್ಲಿನ ಏರಿಳಿತದಿಂದಾಗಿ ಆ ಬೆಳೆಯಲ್ಲಿ ಲಾಭ ಸಿಗದ ಕಾರಣ, ಪುಷ್ಪ ಕೃಷಿಗೆ ಮಾಡುತ್ತಿದ್ದಾರೆ.

ಇತರೆಡೆ ತೆರಳಿ ಮತ್ತು ಕೃಷಿ ಮೇಳಗಳಲ್ಲಿ ಅನುಭವಿಗಳಿಂದ ಹೂದೋಟಗಳ ಬಗ್ಗೆ ಮಾಹಿತಿ ಪಡೆದಿದ್ದ ಅವರು, ಚಿಕ್ಕಬಳ್ಳಾಪುರದ ನರ್ಸರಿಯಿಂದ 6ಸಾವಿರ ಮಾರಿಗೋಲ್ಡ್ ಸಸಿಗಳನ್ನು ತಂದು ಬೆಳೆದಿದ್ದಾರೆ. ಉತ್ತಮ ಇಳುವರಿಗಾಗಿ ಕೃಷಿ ಅಧಿಕಾರಿಗಳಿಂದ ಮಾಹಿತಿ ಅದನ್ನು ಅನುಸರಿಸುತ್ತಿದ್ದಾರೆ. ಒಳ್ಳೆಯ ವರಮಾನ ಕಾಣುತ್ತಿದ್ದಾರೆ. ಮಾದರಿ ರೈತರಾಗಿ ಹೊರಹೊಮ್ಮಿದ್ದಾರೆ.

ADVERTISEMENT

‘ವಾರದಲ್ಲಿ ನಾಲ್ಕೈದು ಬಾರಿ ಹನಿ ನೀರಾವರಿ ಮೂಲಕ ಗಿಡಗಳಿಗೆ ನೀರುಣಿಸುತ್ತೇನೆ. ವಾರ ಅಥವಾ 15 ದಿನಗಳಿಗೊಮ್ಮೆ ಔಷಧಿ ಸಿಂಪಡಿಸಿ ರೋಗ ಮತ್ತು ಕೀಟಗಳಿಂದ ಕಾಪಾಡುತ್ತಿದ್ದೇನೆ. ಸಸಿಗಳನ್ನು ನೆಟ್ಟ 2 ತಿಂಗಳುಗಳೊಳಗೆ ಹೂಗಳು ಅರಳುತ್ತವೆ. ವಾರದಲ್ಲಿ ನಾಲ್ಕೈದು ಬಾರಿ ಹೂವು ಕೊಯ್ಯುತ್ತೇವೆ. 6ರಿಂದ 7 ತಿಂಗಳು ಗಿಡಗಳು ಇರುತ್ತವೆ. ಬಳಿಕ ಹೊಸ ಸಸಿಗಳನ್ನು ನೆಡುತ್ತೇವೆ’ ಎಂದು ಯಲ್ಲಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಆದಾಯ ಬರುತ್ತಿದೆ:‘ಪ್ರತಿ ಸಾರಿಯೂ 3 ಕ್ವಿಂಟಲ್‌ನಷ್ಟು ಹೂವುಗಳನ್ನು ಸಿಗುತ್ತವೆ. ಕೆ.ಜಿ.ಗೆ ಸರಾಸರಿ ₹ 100ರಿಂದ ₹ 150 ದರ ಸಿಗುತ್ತದೆ. ಖರ್ಚು ತೆಗೆದು ಉತ್ತಮ ಆದಾಯ ಸಿಗುತ್ತಿದೆ’ ಎಂದು ಮಾಹಿತಿ ನೀಡಿದರು.

‌ಹಳದಿ ವರ್ಣದ ಈ ಹೂವು ಹಲವು ದಿನಗಳರೆಗೆ ಚೆನ್ನಾಗಿರುತ್ತದೆ. ಮದುವೆ ಮೊದಲಾದ ಕಾರ್ಯಕ್ರಮಗಳಲ್ಲಿ ಅಲಂಕಾರಕ್ಕಾಗಿ ಈ ಹೂವನ್ನು ಹೆಚ್ಚಾಗಿ ಬಳಸಲಾಗುತ್ತದೆ ಎಂದು ತಿಳಿಸಿದರು.

ಪಿಯಸಿ ಶಿಕ್ಷಣ ಪೂರೈಸಿರುವ ಯಲ್ಲಪ್ಪ, ಕಬ್ಬು, ಕ್ಯಾಬೇಜ್, ಟೊಮೆಟೊ, ಮೆಣಸಿನಕಾಯಿ, ಬೆಂಡೆಕಾಯಿ ಕೂಡ ಬೆಳೆದಿದ್ದಾರೆ. ಮುಂದಿನ ದಿನಗಳಲ್ಲಿ ಬಿಳಿ ಹೂವು ಬೆಳೆಯಲು ಸಿದ್ಧತೆ ನಡೆಸಿದ್ದಾರೆ. ಅವರಿಗೆ ಸಹೋದರರು ಮತ್ತು ಕುಟುಂಬದವರು ಸಾಥ್‌ ಕೊಡುತ್ತಿದ್ದಾರೆ. ಅವರ ಸಂಪರ್ಕಕ್ಕೆ ಮೊ: 9741980084.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.