ADVERTISEMENT

ಆದಾಯ ತಂದುಕೊಡುವ ಅರಿಸಿನ

ಕಬ್ಬಿಗೆ ಪರ್ಯಾಯ ಕಂಡುಕೊಂಡ ಕೃಷಿಕ ದೇವೇಂದ್ರ

ಸುಧಾಕರ ಎಸ್.ತಳವಾರ, ಬೆಂಗಳೂರು
Published 16 ಡಿಸೆಂಬರ್ 2019, 19:30 IST
Last Updated 16 ಡಿಸೆಂಬರ್ 2019, 19:30 IST
ನಿಪ್ಪಾಣಿ ತಾಲ್ಲೂಕಿನ ಚಾಂದಶಿರದವಾಡ ಗ್ರಾಮದ ರೈತ ದೇವೇಂದ್ರ ಪಾಟೀಲ ಅವರು ಬೆಳೆದಿರುವ ಅರಿಸಿನ ಬೆಳೆ
ನಿಪ್ಪಾಣಿ ತಾಲ್ಲೂಕಿನ ಚಾಂದಶಿರದವಾಡ ಗ್ರಾಮದ ರೈತ ದೇವೇಂದ್ರ ಪಾಟೀಲ ಅವರು ಬೆಳೆದಿರುವ ಅರಿಸಿನ ಬೆಳೆ   

ಚಿಕ್ಕೋಡಿ: ‘ನಿರಂತರವಾಗಿ ಕಬ್ಬಿನಂತಹ ಒಂದೇ ಬೆಳೆ ಬೆಳೆಯುವುದರಿಂದ ಜಮೀನು ಫಲವತ್ತತೆ ಕಳೆದುಕೊಳ್ಳುತ್ತದೆ. ಭೂಮಿಯ ಫಲವತ್ತತೆ ಕಾಪಾಡಲು ಪರ್ಯಾಯ ಬೆಳೆ ಆಯ್ಕೆ ಮಾಡಿಕೊಳ್ಳುವುದು ಅತ್ಯಗತ್ಯ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯ ತಂದುಕೊಡುವ ಬೆಳೆಗಳತ್ತ ಕೃಷಿಕರು ಆಸಕ್ತಿ ವಹಿಸಬೇಕು. ಈ ನಿಟ್ಟಿನಲ್ಲಿ ನಾನು ಕಬ್ಬು ಬೆಳೆಯನ್ನು ಕೈ ಬಿಟ್ಟು ಅರಿಸಿನ ಆಯ್ಕೆ ಮಾಡಿಕೊಂಡಿದ್ದೇನೆ’.

ನಿಪ್ಪಾಣಿ ತಾಲ್ಲೂಕಿನ ಚಾಂದಶಿರದವಾಡ ಗ್ರಾಮದ ಪ್ರಗತಿಪರ ಕೃಷಿಕ ದೇವೇಂದ್ರ ಸಾತಗೌಡ ಪಾಟೀಲ ಅವರ ಅನುಭವದ ಮಾತುಗಳಿವು.

ಬಿ.ಎಸ್ಸಿ. (ಕೃಷಿ) ಪದವೀಧರರಾದ ದೇವೇಂದ್ರ, ಬೋರಗಾಂವ ಗ್ರಾಮ ವ್ಯಾಪ್ತಿಯಲ್ಲಿ ಬರುವ ತಮ್ಮ ಒಂದೂವರೆ ಎಕರೆ ಮಸಾರಿ ಭೂಮಿಯಲ್ಲಿ ಅರಿಸಿನ ಬೆಳೆ ಬೆಳೆದಿದ್ದು, 9 ತಿಂಗಳುಗಳ ಅವಧಿಯಲ್ಲಿ ಈ ಬೆಳೆಯಿಂದ ಖರ್ಚು–ವೆಚ್ಚ ಕಳೆದು ₹ 3.50 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ADVERTISEMENT

‘ಒಂದು ಎಕರೆಯಲ್ಲಿ ‘ಸೇಲಂ’ ತಳಿಯ ಅರಿಸಿನ ಬೆಳೆದಿದ್ದೇನೆ. 4 ಅಡಿ 3 ಇಂಚು ಅಗಲದ ಬೆಡ್‌ನಲ್ಲಿ ಸಾಲಿನಿಂದ ಸಾಲಿಗೆ 15 ಇಂಚು ಅಂತರದಲ್ಲಿ 2 ಸಾಲುಗಳಲ್ಲಿ ನಾಟಿ ಮಾಡಿದ್ದೇವೆ. ಬೀಜದಿಂದ ಬೀಜಕ್ಕೆ 12 ಇಂಚು ಅಂತರ ಬಿಡಲಾಗಿದೆ. ಬೆಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಲಾಗಿದೆ. ಸೇಲಂ ತಳಿಯ ಅರಿಸಿನವು ಎಕರೆಯೊಂದಕ್ಕೆ ಕನಿಷ್ಠ 25ರಿಂದ 30 ಕ್ವಿಂಟಲ್ ಇಳುವರಿ ನೀಡುತ್ತದೆ. ಕ್ವಿಂಟಲ್‌ಗೆ ಸರಾಸರಿ ₹ 8 ಸಾವಿರದಿಂದ ₹ 10ಸಾವಿರ ದೊರೆತರೂ ₹ 1.60 ಲಕ್ಷ ರೂಪಾಯಿ ಆದಾಯ ದೊರಕುತ್ತದೆ. ಇದಲ್ಲದೇ 10ರಿಂದ 15 ಕ್ವಿಂಟಲ್ ಅರಿಸಿನ ಬೀಜ ದೊರೆಯುತ್ತದೆ. ಇದರಿಂದ ₹ 75ಸಾವಿರ ಆದಾಯ ಬರುತ್ತದೆ. ಅರಿಸಿನ ಪುಡಿ 4 ಕ್ವಿಂಟಲ್‌ನನಷ್ಟು ದೊರಕಲಿದ್ದು, ಇದರಿಂದ ಕನಿಷ್ಠ ₹ 48ಸಾವಿರ ಸಿಗುವ ನಿರೀಕ್ಷೆ ಇದೆ. ಒಟ್ಟಾರೆ 1 ಎಕರೆ ಸೇಲಂ ಅರಿಸಿನ ಬೆಳೆಯಿಂದ ಒಂಬತ್ತು ತಿಂಗಳುಗಳಲ್ಲಿ ಖರ್ಚು ಕಳೆದು ₹ 2.50 ಲಕ್ಷ ಆದಾಯ ಕೈಸೇರಲಿದೆ’ ಎಂಬ ವಿಶ್ವಾಸ ಅವರದು.

‘ಅರ್ಧ ಎಕರೆ ಭೂಮಿಯಲ್ಲಿ ತಮಿಳುನಾಡಿನ ಐಐಎಸ್ಆರ್ ಸಂಸ್ಥೆಯು ಅಭಿವೃದ್ಧಿಪಡಿಸಿರುವ ‘ಪ್ರತಿಭಾ’ ತಳಿಯ ಅರಿಸಿನ ನಾಟಿ ಮಾಡಲಾಗಿದೆ. ಅರಿಸಿನದ ಗುಣಮಟ್ಟ ನಿರ್ಧರಿಸಿರುವ ‘ಕುಕುರ್ಮಿನ್’ ಅಂಶ ಈ ತಳಿಯಲ್ಲಿ ಇತರ ತಳಿಗಿಂತ ಅತೀ ಹೆಚ್ಚು ಶೇ. 6ರಷ್ಟು ದೊರಕಲಿದ್ದು, ಇದು ರೋಗ ನಿರೋಧಕ ಶಕ್ತಿಯನ್ನೂ ಹೊಂದಿದೆ. ಇದರಿಂದ ಅರ್ಧ ಎಕರೆಯಲ್ಲಿ ವೆಚ್ಚ ಕಳೆದು ₹ 1.30 ಲಕ್ಷ ಆದಾಯ ನಿರೀಕ್ಷಿಸುತ್ತಿದ್ದೇನೆ’ ಎಂದು ದೇವೇಂದ್ರ ಮಾಹಿತಿ ನೀಡಿದರು.

‘ಅರಿಸಿನ ಸಂಸ್ಕರಣೆ ಕಾರ್ಯವನ್ನು ಮಹಾರಾಷ್ಟ್ರದ ಕಾರ್ಮಿಕರಿಂದ ಮಾಡಿಸಲಿದ್ದೇನೆ. ಚಾಂದಶಿರದವಾಡ ಮತ್ತು ಸುತ್ತಲಿನ ವಿವಿಧ ಗ್ರಾಮಗಳ ರೈತರು ಸಾಮೂಹಿಕ ಅರಿಸಿನ ಕೃಷಿ ಕೈಗೊಂಡಿದ್ದು, ಎಲ್ಲರೂ ಒಟ್ಟಾಗಿ ಮಹಾರಾಷ್ಟ್ರದ ಕಾರ್ಮಿಕರಿಂದ ಸಂಸ್ಕರಣೆ ಕಾರ್ಯ ಕೈಗೊಳ್ಳುತ್ತೇವೆ’ ಎನ್ನುತ್ತಾರೆ ಅವರು. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ: 9632190838 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.