ADVERTISEMENT

‘ಟೆಸ್ಟ್‌’ ಮಾಡುವುದಾಗಿ ಸ್ಕೂಟರ್‌ ಕದ್ದೊಯ್ದ!

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2019, 15:24 IST
Last Updated 20 ಅಕ್ಟೋಬರ್ 2019, 15:24 IST

ಬೆಳಗಾವಿ: ‘ಮಾರಾಟಕ್ಕಿಟ್ಟಿದ್ದ ಪಲ್ಸರ್ ದ್ವಿಚಕ್ರವಾಹನವನ್ನು ಅಪರಿಚಿತ ವ್ಯಕ್ತಿಯೊಬ್ಬ ‘ಟೆಸ್ಟ್‌’ ಮಾಡುವುದಾಗಿ ಹೇಳಿ ತೆಗೆದುಕೊಂಡು ಪರಾರಿಯಾದ ಘಟನೆ ಇಲ್ಲಿ ನಡೆದಿದೆ.

ರಾಹುಲ ಸಂಜಯ ಕಾಕಡೆ ಎನ್ನುವವರು ತಮ್ಮ 220 ಸಿಸಿ ಪಲ್ಸರ್ ದ್ವಿಚಕ್ರವಾಹನವನ್ನು ಮಾರಾಟಕ್ಕೆ ಇಟ್ಟ ಫೋಟೊ ಆನ್‌ಲೈನ್‌ನಲ್ಲಿ ಹಾಕಿದ್ದರು. ಅಪರಿಚಿತ ವ್ಯಕ್ತಿ ಒಬ್ಬ ಅ. 5ರಂದು ಖರೀದಿಸುವ ಸೋಗಿನಲ್ಲಿ ಇಲ್ಲಿನ ಮಾರುತಿ ಗಲ್ಲಿಯಲ್ಲಿರುವ ಅರವಿಂದ ಟೆಕ್ಸ್‌ಟೈಲ್ಸ್‌ಗೆ ಬಂದು ವಿಚಾರಿಸಿದ್ದಾನೆ. ₹ 58ಸಾವಿರಕ್ಕೆ ಖರೀದಿಗೆ ಮಾತುಕತೆಯಾಗಿತ್ತು. ದಾಖಲಾತಿಗಳನ್ನು ಮೊಬೈಲ್‍ನಲ್ಲಿ ಫೋಟೊ ತೆಗೆದುಕೊಂಡ ಆತ, ಒಮ್ಮೆ ಓಡಿಸಿ ನೋಡಲೆಂದು ವಾಹನ ಕೇಳಿದ್ದಾನೆ. ಆಗ ಕಾಕಡೆ ತಮ್ಮ ಅಂಗಡಿ ಕೆಲಸಗಾರನನ್ನು ಜೊತೆಯಲ್ಲಿ ಕಳುಹಿಸಿದ್ದಾರೆ. ಸ್ವಲ್ಪ ಮುಂದೆ ಹೋದ ನಂತರ, ‘ವಾಹನದಲ್ಲಿ ಏನೋ ಶಬ್ದ ಬರುತ್ತಿದೆ ನೋಡು’ ಎಂದು ಹಿಂಬದಿ ಸವಾರನನ್ನು ಇಳಿಸಿ, ಬೈಕ್‌ನೊಂದಿಗೆ ಪರಾರಿಯಾಗಿದ್ದಾನೆ. ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯಗಳು ಸೆರೆಯಾಗಿವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಖಡೇಬಜಾರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಬ್ಲಾಕ್‌ಮೇಲ್: ವ್ಯಕ್ತಿ ಬಂಧನ
ಬೆಳಗಾವಿ:
ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿ ಹಾಗೂ ಪತ್ರಕರ್ತ ಎಂದು ಹೇಳಿಕೊಂಡು ಸರ್ಕಾರಿ ನೌಕರರಿ ಬೆದರಿಕೆಯೊಡ್ಡಿ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯನ್ನು ಮಾರ್ಕೆಟ್‌ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಟಿಳಕವಾಡಿಯ ಶಾಂತಿ ನಗರದ ನಿವಾಸಿ ಅತುಲ್ ವಿಶ್ವಾಸ ಕದಮ್ (36) ಬಂಧಿತ.

‘ಈತ ‘ನಾರ್ಥ್‌ ಕರ್ನಾಟಕ ಪ್ರೆಸ್ ರಿಪೋರ್ಟರ್’ ಎಂದು ಹೇಳಿ, ಬ್ಲಾಕ್‌ ಮೇಲೆ ಮಾಡುತ್ತಿದ್ದ. ಪ್ರಾದೇಶಿಕ ಸಾರಿಗೆ ಕಚೇರಿ ಅಧೀಕ್ಷಕ ಶರಣಪ್ಪ ಕಲ್ಲಪ್ಪ ಹುಗ್ಗಿ ಅವರಿಗೆ ಕರೆ ಮಾಡಿ, ನಿಮ್ಮ ವಿರುದ್ಧ ಭ್ರಷ್ಟಾಚಾರದ ದೂರು ಬಂದಿದೆ. ಪ್ರಕರಣ ದಾಖಲಾಗದಂತೆ ನೋಡಿಕೊಳ್ಳಲು ಹಣ ನೀಡಬೇಕು. ಇಲ್ಲವಾದರೆ, ಪ್ರಕರಣ ದಾಖಲಾಗುತ್ತದೆ ಹಾಗೂ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುವುದು’ ಎಂದು ಅತುಲ್ ಹಾಗೂ ಆತನ ಸ್ನೇಹಿತ ಜಾಕೀರ್ ಹುಸೇನ್ ಮನಿಯಾರ್ ಬೆದರಿಕೆ ಹಾಕಿದ್ದಾರೆ. ಸದ್ಯಕ್ಕೆ ಅತುಲ್‌ನನ್ನು ಬಂಧಿಸಲಾಗಿದೆ. ಈ ಜಾಲದಲ್ಲಿ ಇನ್ನೂ ಹಲವರು ಇದ್ದು, ತನಿಖೆ ನಡೆಯುತ್ತಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.