ADVERTISEMENT

ತಾಯಂದಿರ ಮರಣ ತಡೆಗೆ ಅರಿವು ಅಗತ್ಯ: ಡಾ.ಎಂ.ಬಿ. ಬೆಲ್ಲದ್‌

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 4:56 IST
Last Updated 23 ನವೆಂಬರ್ 2021, 4:56 IST
ಡಾ.ಎಂ.ಬಿ. ಬೆಲ್ಲದ್‌
ಡಾ.ಎಂ.ಬಿ. ಬೆಲ್ಲದ್‌   

ಬೆಳಗಾವಿ: ‘ಪ್ರಸೂತಿ ನಂತರ ರಕ್ತಸ್ರಾವ (ಪಿಪಿಎಚ್‌) ಮಹಿಳೆಯರ ಸಾವಿಗೆ ಪ್ರಮುಖ ಕಾರಣವಾಗಿದ್ದು, ಈ ಬಗ್ಗೆ ಅರಿವು ಹೆಚ್ಚಿಸಬೇಕಾಗಿದೆ’ ಎಂದು ನಗರದ ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಜೆಎಎನ್ಎಂಸಿ ಆಬ್‌ಜಿನ್‌ ವಿಭಾಗದ ಡಾ.ಎಂ.ಬಿ. ಬೆಲ್ಲದ್‌ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಪಿಪಿಎಚ್‌ ಅಪಾಯ ಹೆಚ್ಚಿರುತ್ತದೆ. ಶಿಶುವಿನ ಜನನದ ಬಳಿಕ ಸಾಮಾನ್ಯವಾಗಿ ಗರ್ಭಕೋಶ ಸಂಕುಚಿತಗೊಂಡು ಯುಟೆರಿನ್‌ ಮಾಂಸಖಂಡಗಳನ್ನು ಬಿಗಿಗೊಳಿಸಿ, ಪ್ಲಾಸೆಂಟಾವನ್ನು ಹೊರಹಾಕುತ್ತದೆ. ಇದರಿಂದ ಪ್ಲಾಸೆಂಟಾದೊಂದಿಗೆ ಬೆಸೆದುಕೊಂಡಿರುವ ರಕ್ತನಾಳಗಳು ಸಂಕುಚಿತಗೊಳ್ಳಲು ಸಹಾಯವಾಗುತ್ತದೆ. ಆದರೆ, ಗರ್ಭಕೋಶ ಬಲಯುತವಾಗಿ ಸಂಕುಚಿತಗೊಳ್ಳದಿದ್ದರೆ ಈ ರಕ್ತನಾಳಗಳು ಬಿರಿದು ರಕ್ತಸ್ರಾವಕ್ಕೆ ಕಾರಣವಾಗುತ್ತದೆ’ ಎಂದಿದ್ದಾರೆ.

‘ದೇಶದಲ್ಲಿ ಪ್ರಸೂತಿ ನಂತರ ಮಹಿಳೆಯರು ಮರಣ ಹೊಂದುವ ಪ್ರಮಾಣ ಹೆಚ್ಚಿದೆ. ಶೇ 90ರಷ್ಟು ಮರಣಗಳಿಗೆ ಪಿಪಿಎಚ್‌ ಕಾರಣ. ಮಗು ಹುಟ್ಟಿದ ಎರಡು ಗಂಟೆಯೊಳಗೇ ತಾಯಿ ಮರಣ ಹೊಂದಬಹುದು. ಈ ಕುರಿತು ಜಾಗೃತಿಯ ಕೊರತೆ ಇದೆ’ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಗರ್ಭಿಣಿಯಾಗಿರುವಾಗ ಅಥವಾ ಗರ್ಭ ಧರಿಸುವ ಮೊದಲೇ ರಕ್ತಹೀನತೆಯ ಪರೀಕ್ಷೆ ಮಾಡಿಸಬೇಕು. ಪಿಪಿಎಚ್‌ ಸಂಭವಿಸಬಹುದಾದ ಅಪಾಯ ಅರಿತು ಸೂಕ್ತ ಚಿಕಿತ್ಸೆ ಪಡೆಯಬೇಕು. ತಕ್ಷಣವೇ ಪತ್ತೆ ಹಚ್ಚಿ ರಕ್ತಸ್ರಾವ ತಡೆಗಟ್ಟಿದರೆ ಸಮಸ್ಯೆ ತಪ್ಪಿಸಬಹುದು. ಮಾರುಕಟ್ಟೆಯಲ್ಲಿ ಕೆಲವೆ ಔಷಧಿಗಳು ಲಭ್ಯ ಇವೆ. ಪಿಪಿಎಚ್‌ ಮರಣ ಸಾಧ್ಯತೆ ತಡೆಯಲು ಅತ್ಯಾಧುನಿಕ ಮಾರ್ಗೋಪಾಯಗಳಿವೆ. ಇದಕ್ಕೆ ಪೂರಕವಾಗಿ ವೈದ್ಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.