ADVERTISEMENT

ಒಟ್ಟು 5,954 ಹೆಕ್ಟೇರ್‌ ಬೆಳೆ ಹಾನಿ; ಜಂಟಿ ಸಮೀಕ್ಷೆ ಪ್ರಗತಿಯಲ್ಲಿ

ವಾಡಿಕೆಗಿಂತ ಶೇ 230ರಷ್ಟು ಹೆಚ್ಚು ಮಳೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 15:41 IST
Last Updated 22 ನವೆಂಬರ್ 2021, 15:41 IST
ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌
ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌   

ಬೆಳಗಾವಿ: ‘ಜಿಲ್ಲೆಯಲ್ಲಿ ನವೆಂಬರ್‌ನಲ್ಲಿ ಈವರೆಗೆ ವಾಡಿಕೆಗಿಂತಲೂ ಶೇ 230ರಷ್ಟು ಜಾಸ್ತಿ ಮಳೆಯಾಗಿದೆ’ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ನ.1ರಿಂದ ನ.20ರವರೆಗೆ 21 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ವಾಸ್ತವವಾಗಿ 61 ಮಿ.ಮೀ. ಮಳೆಯಾಗಿದೆ. ನ.17ರಂದು 20 ಮಿ.ಮೀ., 18ರಂದು 11 ಮಿ.ಮೀ., 19ರಂದು 2 ಮಿ.ಮೀ. ಹಾಗೂ 20ರಂದು 15 ಮಿ.ಮೀ. ಮಳೆಯಾಗಿದೆ. ಹೀಗಾಗಿ, ಅಲ್ಲಲ್ಲಿ ಬೆಳೆ ಮತ್ತು ಮನೆಗಳಿಗೆ ಹಾನಿಯಾಗಿದೆ’ ಎಂದು ಮಾಹಿತಿ ನೀಡಿದರು.

‘ಪ್ರಾಥಮಿಕ ಮಾಹಿತಿ ಪ್ರಕಾರ, ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕಿನಲ್ಲಿ 5,367 ಹೆಕ್ಟೇರ್‌ ಭತ್ತದ ಬೆಳೆ ನಾಶವಾಗಿದೆ. ಅಥಣಿ ತಾಲ್ಲೂಕಿನಲ್ಲಿ 550 ಹೆಕ್ಟೇರ್‌ ದ್ರಾಕ್ಷಿ, 30 ಹೆಕ್ಟೇರ್‌ ತರಕಾರಿ, ತಲಾ ಒಂದು ಹೆಕ್ಟೇರ್ ಬಾಳೆ ಹಾಗೂ ಪಪ್ಪಾಯ ಬೆಳೆಗೆ ಹಾನಿಯಾಗಿದೆ’ ಎಂದು ತಿಳಿಸಿದರು.

ADVERTISEMENT

‘ಹುಕ್ಕೇರಿ ತಾಲ್ಲೂಕಿನ ಬೆಲ್ಲದಬಾಗೇವಾಡಿಯ ಸುಹಾನಾ ಶಬ್ಬೀರ ಸನದಿ (12) ನ.16ರಂದು ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ. ಮೂಡಲಗಿ ತಾಲ್ಲೂಕಿನ ಮುನ್ಯಾಳದ ಭೀಮಪ್ಪ ಶೇಷಪ್ಪ ಗೋಣಿ (64) ಸಿಡಿಲು ಬಡಿದು ಮೃತರಾಗಿದ್ದಾರೆ. 32 ಮನೆಗಳಿಗೆ ಪೂರ್ಣ ಹಾನಿಯಾಗಿದೆ. 239 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಒಂದು ಹಸು ಹಾಗೂ ಒಂದು ಎಮ್ಮೆ ಸಾವಿಗೀಡಾಗಿವೆ. 11 ಸರ್ಕಾರಿ ಶಾಲಾ ಕಟ್ಟಡಗಳು (ಬೆಳಗಾವಿ ತಾಲ್ಲೂಕಿನಲ್ಲಿ), 24 ವಿದ್ಯುತ್‌ ಕಂಬಗಳು ಹಾಗೂ 3 ಪರಿವರ್ತಕಗಳು ಅತಿವೃಷ್ಟಿಯಿಂದ ಹಾನಿಯಾಗಿದೆ’ ಎಂದು ವಿವರ ನೀಡಿದರು.

‘ಕಂದಾಯ, ಕೃಷಿ, ತೋಟಗಾರಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಜಂಟಿ ಸಮೀಕ್ಷೆ ಆರಂಭಿಸಿದ್ದಾರೆ. ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಗಡುವು ಕೊಡಲಾಗಿದೆ. ನಿಖರ ಮಾಹಿತಿ ದೊರೆತ ಬಳಿಕ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

‘ಸರ್ಕಾರದ ಮಾರ್ಗಸೂಚಿ ಪ್ರಕಾರ, ಪೂರ್ಣ ಹಾನಿಯಾದ ಮನೆಗಳಿಗೆ ₹ 5 ಲಕ್ಷ, ಭಾಗಶಃ ಹಾನಿಯಾಗಿದ್ದರೆ ಪುನರ್‌ ನಿರ್ಮಾಣಕ್ಕೆ ₹ 5 ಲಕ್ಷ ಅಥವಾ ದುರಸ್ತಿ ಮಾಡಿಸಿಕೊಂಡರೆ ₹ 3 ಲಕ್ಷ ಮತ್ತು ಸಣ್ಣ ಪುಟ್ಟ ಹಾನಿಯಾಗಿದ್ದರೆ ‘ಸಿ’ ವರ್ಗವೆಂದು ಪರಿಗಣಿಸಿ ₹ 50ಸಾವಿರ ಪರಿಹಾರ ನೀಡಲಾಗುವುದು. ಮೃತಪಟ್ಟ ಇಬ್ಬರ ಕುಟುಂಬದವರಿಗೆ ತಲಾ ₹ 5 ಲಕ್ಷ ಪರಿಹಾರ ನೀಡಲಾಗಿದೆ’ ಎಂದು ಹೇಳಿದರು.

‘ನ.25 ಹಾಗೂ 26ರಂದು ಮತ್ತೆ ಮಳೆಯಾಗುವ ಮುನ್ಸೂಚನೆ ಇದೆ. ನದಿ ಪಾತ್ರದ ಜನರಿಗೆ, ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚಿಸಲಾಗಿದೆ. ಬೆಳೆ ವಿಮೆ ಮಾಡಿಸಿರುವವರು ಹಾನಿಯಾಗಿದ್ದರೆ 48 ತಾಸಿನೊಳಗೆ ಸಂಬಂಧಿಸಿದವರಿಗೆ ಮಾಹಿತಿ ಕೊಡಬೇಕಾಗುತ್ತದೆ. ಪರಿಹಾರ ಕಾರ್ಯದಲ್ಲಿ ವಿಳಂಬ ಆಗದಿರಲೆಂದು ಜಂಟಿ ಸಮೀಕ್ಷೆಯನ್ನು ತ್ವರಿತವಾಗಿ ನಡೆಸಲಾಗುತ್ತಿದೆ. ಮಳೆ ಮಳೆಯಾಗಿ ಹಾನಿ ಸಂಭವಿಸಿದಲ್ಲಿ ಆಗಲೂ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಮಾರ್ಗಸೂಚಿ ಪ್ರಕಾರ ಪರಿಹಾರ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

ಮುಖ್ಯಾಂಶಗಳು
*
32 ಮನೆಗಳಿಗೆ ಪೂರ್ಣ ಹಾನಿ
*239 ಮನೆಗಳಿಗೆ ಭಾಗಶಃ ಹಾನಿ
*ಇಬ್ಬರು ಸಾವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.