ಹುಕ್ಕೇರಿ: ತಾಲ್ಲೂಕಿನ ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕಾ ವಲಯಕ್ಕೆ ನೀರು ಪೂರೈಕೆ ಮಾಡಲು ಸರ್ಕಾರ ಮುಂದಾಗಿರುವ ಧೋರಣೆ ಖಂಡಿಸಿ ಶುಕ್ರವಾರ ಜಲಾಶಯದ ಎದುರು ‘ನಮ್ಮ ನೀರು ನಮ್ಮ ಹಕ್ಕು ಸಮಿತಿ’ ಕಾರ್ಯಕರ್ತ ರೈತರು ಭಾರಿ ಪ್ರತಿಭಟನೆ ಮಾಡಿದರು.
ಧಾರವಾಡ ಕೈಗಾರಿಕಾ ವಲಯಕ್ಕೆ ನೀರು ಪೂರೈಸಲು ಘಟಪ್ರಭಾ ನದಿಯ ಜಲಾಶಯ ಮುಂದೆ ಜಾಕವೆಲ್ ನಿರ್ಮಾಣ ಕೆಲಸ ಪ್ರಾರಂಭವಾಗಿದೆ. ಈ ಸ್ಥಳಕ್ಕೆ ಆಗಮಿಸಿದ ತಾಲ್ಲೂಕಿನ ರೈತರು, ಸಾಂಕೇತಿಕವಾಗಿ ಕಲ್ಲು ಮಣ್ಣು ಹಾಕಿ ಪ್ರತಿಭಟಿಸಿದರು.
ನಂತರ ಪಾದಯಾತ್ರೆ ಮೂಲಕ ನೀರಾವರಿ ನಿಗಮದ ಸೂಪರಿಟೆಂಡೆಂಟ್ ಎಂಜಿನಿಯರ್ ಕಚೇರಿಗೆ ತೆರಳಿ ಪ್ರತಿಭಟನೆ ಮಾಡಿದರು. ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.
ಮಾಜಿ ಸಚಿವ ಶಶಿಕಾಂತ ನಾಯಿಕ ಮಾತನಾಡಿ, ಹುಕ್ಕೇರಿ ತಾಲ್ಲೂಕಿನ ರೈತರಿಗೆ ಇನ್ನೂ ನೀರಾವರಿ ಸೌಲಭ್ಯ ಪೂರ್ತಿಯಾಗಿ ಸಿಕ್ಕಿಲ್ಲ. ಏತ ನೀರಾವರಿ ಮೂಲಕ ಕೊನೆಯ ಹೊಲದವರಿಗೆ ನೀರು ಸರಿಯಾಗಿ ತಲುಪುತ್ತಿಲ್ಲ. ಅಂತಹದರಲ್ಲಿ 80 ಕಿ.ಮೀ. ದೂರದ ಧಾರವಾಡ ಕೈಗಾರಿಕಾ ವಲಯಕ್ಕೆ ನೀರು ಪೂರೈಕೆ ಯೋಜನೆಯನ್ನು ಸರ್ಕಾರ ಕೈಬಿಡಬೇಕು. ನೀರು ಪೂರೈಕೆ ಕಾಮಗಾರಿ ಸ್ಥಗಿತಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಚಿಕ್ಕೋಡಿ ಜಿಲ್ಲಾ ಭಾರತೀಯ ಕೃಷಿಕ ಸಮಾಜ ಅಧ್ಯಕ್ಷ ದುಂಡನಗೌಡ ಪಾಟೀಲ ಮಾತನಾಡಿ, ತಾಲ್ಲೂಕಿನ ಸಮಗ್ರ ನೀರಾವರಿ ಪೂರೈಕೆಗೆ ಒತ್ತಾಯಿಸಿದರು.
ನೀರಾವರಿ ನಿಗಮದ ಪ್ರಭಾರಿ ಇಇ ಅರವಿಂದ ಜಮಖಂಡಿ ಮಾತನಾಡಿ, ಈ ವಿಷಯ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರಾಮಚಂದ್ರ ಜೋಶಿ, ಜಿಲ್ಲಾ ಘಟಕದ ಅಧ್ಯಕ್ಷ ಬಸವಪ್ರಭು ವಂಟಮೂರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಗೋಪಾಲ ಮರಬಸನವರ, ದಲಿತಪರ ಸಂಘಟನೆ ಸಂಚಾಲಕ ಬಸವರಾಜ ತಳವಾರ, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಸುಧೀರ ಪಾಟೀಲ, ಗಂಗಾಧರ ಪಾಟೀಲ, ಅಪ್ಪಾಸಾಹೇಬ ಸಾರಾಪೂರೆ, ಜಗದೀಶ ಮುಗಳಖೋಡ, ಬಸವಣ್ಣಿ ಕಂಬಾರ, ಲಕ್ಷ್ಮಣ ಅಕ್ಕತೇಂಗೆರಹಾಳ, ಕಲ್ಲಪ್ಪ ಅಕ್ಕತೇಂಗೇರಹಾಳ, ಜಿಯಾವುಲ್ಲಾ ವಂಟಮೂರಿ, ಮೆಹಬೂಬ್ ಮುಲ್ಲಾ, ಬಸವರಾಜ ಹುಲಕುಂದ, ನಿರಂಜನ ಶಿರೂರ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಯಮಕನಮರಡಿ ಪಿಐ ಜಾವೇದ್ ಮುಶಾಪುರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.