ADVERTISEMENT

‘ಧರ್ಮ ರಕ್ಷಣೆಗಾಗಿ ನಾವೆಲ್ಲರೂ ಕಂಕಣಬದ್ಧರಾಗೋಣ’

ಬೈಲಹೊಂಗಲದಲ್ಲಿ ಐತಿಹಾಸಿಕ ವಿರಾಟ ಹಿಂದೂ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 3:18 IST
Last Updated 18 ಜನವರಿ 2026, 3:18 IST
ಬೈಲಹೊಂಗಲ ಚನ್ನಮ್ಮನ ಸಮಾಧಿ ಸ್ಥಳ‌ ಎದುರು ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ವತಿಯಿಂದ ಶನಿವಾರ ನಡೆದ ವಿರಾಟ ಹಿಂದೂ ಸಮ್ಮೇಳವನ್ನು ವಿಶ್ವಹಿಂದೂ ಪರಿಷತ್,  ರಾಮ ಮಂದಿರ ನಿರ್ಮಾಣ ಉಸ್ತುವಾರಿ ಗೋಪಾಲ ಜೀ ಉದ್ಘಾಟಿಸಿದರು. ಪ್ರಭುನೀಲಕಂಠ ಸ್ವಾಮೀಜಿ, ಗಂಗಾಧರ ಸ್ವಾಮೀಜಿ, ವಿವಿಧ ಮಠಾಧೀಶರು ಇದ್ದರು.
ಬೈಲಹೊಂಗಲ ಚನ್ನಮ್ಮನ ಸಮಾಧಿ ಸ್ಥಳ‌ ಎದುರು ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ವತಿಯಿಂದ ಶನಿವಾರ ನಡೆದ ವಿರಾಟ ಹಿಂದೂ ಸಮ್ಮೇಳವನ್ನು ವಿಶ್ವಹಿಂದೂ ಪರಿಷತ್,  ರಾಮ ಮಂದಿರ ನಿರ್ಮಾಣ ಉಸ್ತುವಾರಿ ಗೋಪಾಲ ಜೀ ಉದ್ಘಾಟಿಸಿದರು. ಪ್ರಭುನೀಲಕಂಠ ಸ್ವಾಮೀಜಿ, ಗಂಗಾಧರ ಸ್ವಾಮೀಜಿ, ವಿವಿಧ ಮಠಾಧೀಶರು ಇದ್ದರು.   

ಬೈಲಹೊಂಗಲ: 'ರಾಷ್ಟ್ರ ಹಿತಕ್ಕಾಗಿ ಕೆಲಸ ಮಾಡುವುದು ಪ್ರತಿಯೊಬ್ಬ ನಾಗರಿಕನ ಹೊಣೆ ಆಗಿದೆ. ನಾವೆಲ್ಲರೂ ಹಿಂದೂ ಎನ್ನುವ ಭಾವನೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಪಂಚ ಪರಿವರ್ತನೆಗಳಾದ ಸಾಮರಸ್ಯ, ಕುಟುಂಬ, ಪ್ರಬೋಧನ, ಪರಿಸರ ಸಂರಕ್ಷಣೆ, ಸ್ವದೇಶೀ ಜೀವನಶೈಲಿ ಹಾಗೂ ನಾಗರೀಕ ಶಿಷ್ಟಾಚಾರ ಇವುಗಳ ಮುಖಾಂತರ ಹಿಂದೂ ಸಮಾಜವನ್ನು ಒಗ್ಗೂಡಿಸಿ ಭಾರತವನ್ನು ವಿಶ್ವದಲ್ಲಿ ವೈಭವಿಕರಿಸೋಣ' ಎಂದು ವಿಶ್ವಹಿಂದೂ ಪರಿಷತ್ ಕೇಂದ್ರೀಯ ಮಂತ್ರಿ ಹಾಗೂ ಶ್ರೀರಾಮ ಮಂದಿರ ನಿರ್ಮಾಣ ಉಸ್ತುವಾರಿ ಗೋಪಾಲ ಜೀ ಹೇಳಿದರು.

ನಗರದ ಕಿತ್ತೂರು ರಾಣಿ ಚನ್ನಮ್ಮ ಸಮಾಧಿ ಸ್ಥಳ ಎದುರು ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ವತಿಯಿಂದ ಶನಿವಾರ ನಡೆದ ವಿರಾಟ ಹಿಂದೂ ಸಮ್ಮೇಳನ ಉದ್ಘಾಟಿಸಿ ದಿಕ್ಸೂಚಿ ಭಾಷಣಕಾರರಾಗಿ ಅವರು ಮಾತನಾಡಿದರು.

'ಪರಾಕ್ರಮಿಗಳ ನಾಡಾದ ಬೈಲಹೊಂಗಲದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ,ಬೆಳವಡಿ ಮಲ್ಲಮ್ಮ, ಅಮಟೂರು ಬಾಳಪ್ಪ ಇನ್ನು ಅನೇಕ ವೀರರು ಹೋರಾಡಿದ ಪುಣ್ಯ ಭೂಮಿಯಲ್ಲಿ ವಿರಾಟ ಹಿಂದೂ ಸಮ್ಮೇಳನ ಆಯೋಜಿಸಿದ್ದು ಸಂತಸ ತಂದಿದೆ. ರಾಷ್ಟೀಯ ಸ್ವಯಂ ಸೇವಕ ಸಂಘದ ಶತಾಬಿಧಿ ಅಂಗವಾಗಿ ವಿರಾಟ ಹಿಂದೂ ಸಮ್ಮೇಳನ ಆಯೋಜನೆ ಮಾಡಿದ್ದು ನಾವೆಲ್ಲ ಒಂದು ಎಂಬ ಭಾವನೆ ತರುವುದು ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ. ಸಂಘವು ಕಳೆದ ನೂರು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದು ಭಾರತ ಹಿಂದೂ ರಾಷ್ಟ್ರ ನಿರ್ಮಿಸುವ ಸಂಕಲ್ಪ ಹೊಂದಿದೆ. ಸಂಘದ ಸಂಸ್ಥಾಪಕ ಡಾ ಹೆಗಡೆವಾಲ್ ಬಾಲ್ಯದಿಂದಲೇ ರಾಷ್ಟ್ರಪ್ರೇಮವನ್ನು ಬೆಳೆಸಿಕೊಂಡಿದ್ದರು. ಅವರು ಹುಟ್ಟುಹಾಕಿದ ಸಂಘ ಇಂದು ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಖೆ ಹೊಂದಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ತಮ್ಮ ಜೀವನನ್ನೇ ರಾಷ್ಟ್ರಕ್ಕಾಗಿ ಮುಡಿಪಾಗಿಟ್ಟಿದ್ದರು. ಬ್ರಿಟಿಷರ ಆದೇಶವನ್ನು ದಿಕ್ಕರಿಸಿ ಶಾಲೆಯಲ್ಲಿ ವಂದೇ ಮಾತರಂ ಗೀತೆ ಹಾಡಿದ ಕೀರ್ತಿಗೆ ಡಾ. ಹೆಗಡೆವಾಲ್ ಪಾತ್ರರಾಗಿದ್ದರು' ಎಂದರು.

ADVERTISEMENT

'ಹಿಂದೂ ಸಮಾಜ್ಯೋತ್ಸವವು ಕೇವಲ ಒಂದು ಧಾರ್ಮಿಕ ಉತ್ಸವವಲ್ಲ. ಅದು ಸಮಾಜದ ಏಕತೆ, ಸಂಸ್ಕೃತಿ, ಉಳಿವು ಹಾಗೂ ಧಾರ್ಮಿಕ ಜಾಗೃತಿಯ ಪ್ರತೀಕವಾಗಿದೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಧರ್ಮ ಭಾವನೆ, ಶಾಂತಿ ಮತ್ತು ಸಹಕಾರವನ್ನು ಬೆಳೆಸುತ್ತದೆ‌. ಭಾಷೆ, ವೇಷ, ಪ್ರಾಂತ್ಯ, ಪಂಥ, ಪಕ್ಷ, ಪೂಜೆ, ವೈವಿಧ್ಯಗಳಲ್ಲಿ ಏಕತೆ ಸಾರುವ ದೇಶ ನಮ್ಮದಾಗಿದೆ' ಎಂದರು.

ಸಮ್ಮೇಳನ ಉಪಾಧ್ಯಕ್ಷೆ ಮೀನಾಕ್ಷಿ ಕೂಡಸೋಮಣ್ಣವರ ಮಾತನಾಡಿದರು.

ಸಮ್ಮೇಳನದ ಅಧ್ಯಕ್ಷ ಅದೃಶ್ಯಪ್ಪ ಸಿದ್ರಾಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಹೊಸೂರ ಗಂಗಾಧರ ಸ್ವಾಮೀಜಿ, ಇಂಚಲ ಪೂರ್ಣಾನಂದ ಸ್ವಾಮೀಜಿ, ಮಡಿವಾಳೇಶ್ವರ ಮಠದ ಮಡಿವಾಳೇಶ್ವರ ಸ್ವಾಮೀಜಿ, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಜಾಕನಾಯಕನ ಕೊಪ್ಪದ ಮಾತೋಶ್ರೀ ಶಿವಯೋಗಿನಿ ದೇವಿ, ವೀರಯ್ಯ ಹಿರೇಮಠ, ಈಶ್ವರೀಯ ವಿಶ್ವವಿದ್ಯಾಲಯದ ಬಿ. ಕೆ.ಪ್ರಭಾ ಅಕ್ಕನವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಇದೇ ವೇಳೆ ಜಂಗಮ ವಟುಗಳಿಂದ ಮಂತ್ರಘೋಷ ಮೊಳಗಿತು.‌ಪ್ರಗತಿ ಬಿಳ್ಳೂರ ಭರತನಾಟ್ಯ ಜರುಗಿತು. ಗೌರವಾಧ್ಯಕ್ಷ ನ್ಯಾಯವಾದಿ ಎಂ.ವೈ.ಸೋಮಣ್ಣವರ ಸ್ವಾಗತಿಸಿದರು. ಗಿರೀಶ ಹರಕುಣಿ ನಿರೂಪಿಸಿದರು.

ಬೃಹತ್ ಶೋಭಾಯಾತ್ರೆ:

ಚನ್ನಮ್ಮ ವೃತ್ತದ ಅಶ್ವಾರೂಢ ಮೂರ್ತಿಗೆ ಗೌರವ ಸಲ್ಲಿಸಿ, ಗೋ ಪೂಜೆಯೊಂದಿಗೆ ಶೋಭಾ ಯಾತ್ರೆಗೆ ಚಾಲನೆ ನೀಡಲಾಯಿತು.

ಚನ್ನಮ್ಮನ ವೃತ್ತದಿಂದ ಡೊಳ್ಳು ಮತ್ತು ಕಲಾ ತಂಡದೊಂದಿಗೆ ಶೋಭಾ ಯಾತ್ರೆಯು ಎಪಿಎಂಸಿ, ಇಂಚಲ ಕ್ರಾಸ್,ಕೇಂದ್ರ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ವೇದಿಕೆ ತಲುಪಿತು.ವಿರಾಟ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಕಾರ್ಯದರ್ಶಿ ಪ್ರಮೋದ ಕುಮಾರ ವಕ್ಕುಂದಮಠ, ಉಪಾಧ್ಯಕ್ಷ ಮಡಿವಾಳಪ್ಪ ಹೋಟಿ, ಸುಭಾಷ್ ಬಾಗೇವಾಡಿ, ಮಹಾಂತೇಶ ಗದಗ, ಸಹ ಕಾರ್ಯದರ್ಶಿ ಶಂಕರ ಬರಬಳ್ಳಿ, ಶ್ರೀಶೈಲ ಸಿದಮನಿ, ಗಿರೀಶ ಹಲಸಗಿ ಸೇರಿದಂತೆ ರಾಷ್ಟೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದೂ ಪರಿಷತ್ ಮುಖಂಡರು ಹಾಗೂ ಸಾವಿರಾರು ಹಿಂದೂ ಭಾಂದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.