
ಹುಕ್ಕೇರಿ: ‘ರೈತರ ಹಿತ ಕಾಪಾಡುವಲ್ಲಿ ಉಮೇಶ ಕತ್ತಿ ಅವರು ಕ್ಷೇತ್ರದಲ್ಲಿ 19 ಕೆರೆ ತುಂಬಿಸುವ ಮತ್ತು ಹಿರಣ್ಯಕೇಶಿ ನದಿ ಬತ್ತಿದಾಗ ನೀರು ನಿಲ್ಲಿಸುವ ಐದು ಬ್ಯಾರೇಜ್ ಯೋಜನೆ ಕೈಗೊಂಡಿದ್ದರು. ಇದು ಅವರ ದೂರದೃಷ್ಟಿ ಬಿಂಬಿಸುತ್ತದೆ’ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಹೇಳಿದರು.
ತಾಲ್ಲೂಕಿನ ಹಣಜ್ಯಾನಟ್ಟಿ, ಯಾದಗೂಡ ಮತ್ತು ಬೆಳವಿ ಗ್ರಾಮಗಳಲ್ಲಿ ಕೆರೆ ತುಂಬುವ ಯೋಜನೆಯ ಕಾಮಗಾರಿ ಮತ್ತು ಸುಲ್ತಾನಪುರ ಬಳಿಯ ಸಂಗಮದಿಂದ (ಹಿರಣ್ಯಕೇಶಿ ಮತ್ತು ಘಟಪ್ರಭಾ ನದಿ ಕೂಡುವ ಸ್ಥಳ) ₹94 ಕೋಟಿ ವೆಚ್ಚದ ನೀರೆತ್ತುವ ಕಾಮಗಾರಿಯ ಪೈಪ್‌ಲೈನ್ ಕಾಮಗಾರಿ ಸ್ಥಳವನ್ನು ಶನಿವಾರ ವೀಕ್ಷಿಸಿ ಮಾತನಾಡಿದರು.
‘ಬಿಡಿಸಿಸಿ ಬ್ಯಾಂಕ್ ನಿರ್ದೇಶಕ, ಮಾಜಿ ಸಂಸದ ರಮೇಶ ಕತ್ತಿ ಮಾಹಿತಿ ನೀಡಿ ಈ ಭಾಗದಲ್ಲಿ ಕೈಗೊಂಡ ಎಲ್ಲ ಯೋಜನೆ ಪೂರ್ಣಗೊಂಡ ಬಳಿಕ ಶೇ.90 ಕ್ಕಿಂತ ಹೆಚ್ಚು ಪ್ರದೇಶ ನೀರಾವರಿಗೆ ಒಳಪಡುವುದು. ಸಣ್ಣ ನೀರಾವರಿ ಇಲಾಖೆಯವರ ಕಾರ್ಯವೈಖರಿ ರೈತರಲ್ಲಿ ವಿಶ್ವಾಸ ಮೂಡಿಸದೆ’ ಎಂದರು.
‘ಕೆರೆಯಿಂದ ಸುತ್ತಮುತ್ತಲಿನ ರೈತರ ಬಾವಿಗಳಲ್ಲಿ ಮತ್ತು ಕೊಳವೆ ಬಾವಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದ್ದು, ಬೇಸಿಗೆಯಲ್ಲೂ ರೈತರು ಬೆಳೆಗೆ ನೀರು ಹಾಯಿಸುತ್ತ ದಿ.ಉಮೇಶ್ ಕತ್ತಿ ಸ್ಮರಿಸುವರು’ ಎಂದರು.
ಸತ್ಕಾರ: ಈ ಭಾಗದ ಕನಸು ನನಸಾಗಿಸಲು ಸಹಕಾರ ನೀಡುತ್ತಿರುವ ಸಚಿವ ಎನ್.ಎಸ್.ಭೋಸರಾಜು ಅವರನ್ನು ರೈತರ ಪರವಾಗಿ ರಮೇಶ ಕತ್ತಿ ಸತ್ಕರಿಸಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ್ ಕತ್ತಿ, ಎಲಿಮುನ್ನೋಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮೀರಾಸಾಬ ಮುಲ್ತಾನಿ, ಮುಖಂಡರಾದ ಸತ್ಯಪ್ಪ ನಾಯಿಕ, ಯಾದಗೂಡದ ಶಿವನಗೌಡ ಪಾಟೀಲ, ನೀರಾವರಿ ಇಲಾಖೆ ಕಾರ್ಯದರ್ಶಿ ಬಿ.ಕೆ.ಪವಿತ್ರ, ಸಚಿವರ ಆಪ್ತ ಕಾರ್ಯದರ್ಶಿ ವೀರಭದ್ರ ಹಂಚಿನಾಳ, ಚೀಫ್ ಎಂಜನಿಯರ್ (ವಿಜಯಪುರ) ಎಚ್.ಎಲ್.ವೆಂಕಟೇಶ್, ಎಸ್.ಇ. (ಬೆಳಗಾವಿ) ಆನಂದಕುಮಾರ್, ಇಇ ಗುರುಬಸವರಾಜಯ್ಯ, ಎಇಇ ಸಂಜಯ ಮಾಳಗೆ, ಶಾಖಾಧಿಕಾರಿ ಶಿವಲೀಲಾ ಮಕ್ಕಣ್ಣವರ, ಗುತ್ತಿಗೆದಾರರಾದ ಬಿ.ಬಿ.ಪಾಟೀಲ್, ಎಂ.ಎಸ್.ದರಗಶೆಟ್ಟಿ ಸೇರಿದಂತೆ ಆಯಾ ಗ್ರಾಮದ ಮುಖಂಡರು ಇದ್ದರು.
ಎಲ್ಲೆಲ್ಲಿ ಬ್ಯಾರೇಜು?
ತಾಲ್ಲೂಕಿನಲ್ಲಿ ಹರಿಯುವ ಹಿರಣ್ಯಕೇಶಿ ನದಿ ಬೇಸಿಗೆಯಲ್ಲಿ ಒಣಗಿ ಹೋಗುವುದು. ಇದರಿಂದ ರೈತರಿಗೆ ಮತ್ತು ಜನರಿಗೆ ಕುಡಿಯುವ ನೀರಿಗೂ ಬರ ಎದುರಾಗುವುದು. ಇದನ್ನರಿತ ಉಮೇಶ ಕತ್ತಿ ಅವರು ₹94 ಕೋಟಿ ವೆಚ್ಚದ ಮೂಲಕ ತಾಲ್ಲೂಕಿನ ಯರನಾಳ ಬಡಕುಂದ್ರಿ ಕೋಚರಿ ಚಿಕ್ಕಾಲಗುಡ್ಡ ಮತ್ತು ಗೋಟೂರ ಬಳಿ ಐದು ಬ್ಯಾರೇಜ್ ನಿರ್ಮಿಸಿ ನಿರಂತರ ನೀರು ನಿಲ್ಲುವ ಸ್ಥಳವಾದ ಸಂಗಮದಿಂದ ಏತ ನೀರಾವರಿ ಮೂಲಕ ನೀರು ಪೂರೈಸುವ ಕನಸು ಕಂಡಿದ್ದರು. ಸರ್ಕಾರ ₹60 ಕೋಟಿ ಈಗಾಗಲೇ ಮಂಜೂರು ಮಾಡಿದ್ದು ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗಿದೆ. ಇನ್ನುಳಿದ ₹34 ಕೋಟಿ ಅನುದಾನ ಈ ಬಜೆಟ್‌ನಲ್ಲಿ ನೀಡಲಾಗುವುದು ಎಂದು ಸಚಿವ ಭೋಸರಾಜು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.