ADVERTISEMENT

ಎಚ್‌ಐವಿ ಪರೀಕ್ಷೆಗೆ ಕೋವಿಡ್ ಅಡ್ಡಿ

ಕೋವಿಡ್–19 ದೃಢಪಟ್ಟಿದ್ದ ‘ಸೋಂಕಿತರು’ ಗುಣಮುಖ/ ವಿಶ್ವ ಏಡ್ಸ್ ದಿನ ಡಿ.1ರಂದು

ಎಂ.ಮಹೇಶ
Published 30 ನವೆಂಬರ್ 2020, 13:17 IST
Last Updated 30 ನವೆಂಬರ್ 2020, 13:17 IST
ಎಂ.ಜಿ. ಹಿರೇಮಠ
ಎಂ.ಜಿ. ಹಿರೇಮಠ   

ಬೆಳಗಾವಿ: ಕೋವಿಡ್–19 ಭೀತಿಯು ಎಚ್‌ಐವಿ, ಏಡ್ಸ್ ತಪಾಸಣೆ ಚಟುವಟಿಕೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ.

ಕೊರೊನಾ ಹರಡುವಿಕೆ ಕಾಣಿಸಿಕೊಂಡ ಕೆಲವು ದಿನಗಳಲ್ಲೇ ನಗರದ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲಾಗಿತ್ತು. ಇತರ ಸಮಸ್ಯೆ ಇರುವವರಿಗೆ ಚಿಕಿತ್ಸೆ ನೀಡುತ್ತಿರಲಿಲ್ಲ. ಹೊರ ರೋಗಿಗಳ ವಿಭಾಗವನ್ನೇ ಮುಚ್ಚಲಾಗಿತ್ತು. ಇದರಿಂದಾಗಿ ಪ್ರಸಕ್ತ ಸಾಲಿನ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ನಿರೀಕ್ಷಿತ ಪ್ರಮಾಣದಲ್ಲಿ ತಪಾಸಣೆ ಪ್ರಕ್ರಿಯೆ ನಡೆದಿಲ್ಲ. ಕೋವಿಡ್ ಭೀತಿಯಿಂದಾಗಿ ತಪಾಸಣೆಯಿಂದ ದೂರ ಉಳಿದದ್ದೂ ಇದೆ. ಹೀಗಾಗಿ, ಈ ಸಾಲಿನಲ್ಲಿ ಅಕ್ಟೋಬರ್‌ವರೆಗೆ 41,012 ಮಂದಿಯನ್ನು ಮಾತ್ರವೇ ಪರೀಕ್ಷೆಗೆ ಒಳಪಡಿಸಲು ಸಾಧ್ಯವಾಗಿದೆ. ಇವರ ಪೈಕಿ 420 ಮಂದಿಗೆ ಎಚ್‌ಐವಿ ತಗುಲಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಳಗಾವಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 12,733 ಮಂದಿ ತಪಾಸಣೆಗೆ ಒಳಗಾಗಿದ್ದಾರೆ. ಇವರಲ್ಲಿ 90 ಮಂದಿಗೆ ಪಾಸಿಟಿವ್ ಬಂದಿವೆ. ಖಾನಾಪುರ ತಾಲ್ಲೂಕಿನಲ್ಲಿ ಅತಿ ಕಡಿಮೆ (1,009) ಪರೀಕ್ಷೆ ನಡೆದಿದ್ದು, ಅವರಲ್ಲಿ 6 ಮಂದಿ ‘ಪಾಸಿಟಿವ್’ ಆಗಿದ್ದಾರೆ.

ADVERTISEMENT

ಸೋಂಕಿತರ ಪ್ರಮಾಣ ಇಳಿಕೆ:

‘ಜಿಲ್ಲೆಯಲ್ಲಿ 2006ರಲ್ಲಿ ಪಾಸಿಟಿವ್ ಪ್ರಮಾಣ ಶೇ 2ರಷ್ಟಿತ್ತು. ಈಗ ಇದು ಶೇ 1ಕ್ಕೆ ಕುಸಿದಿದೆ. ಜಾಗೃತಿ ಹೆಚ್ಚುತ್ತಿರುವ ಪರಿಣಾಮವಿದು. ಜಿಲ್ಲೆಯಲ್ಲಿ ಒಟ್ಟು 19,270 ಮಂದಿ ಸೋಂಕಿತರಿದ್ದಾರೆ. ಇವರಲ್ಲಿ 6,995 ಪುರುಷರು. 10,813 ಮಹಿಳೆಯರು. 38 ತೃತೀಯಲಿಂಗಿಗಳು. 805 ಬಾಲಕರು. 619 ಬಾಲಕಿಯರಾಗಿದ್ದಾರೆ. ಎಲ್ಲರಿಗೂ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ’ ಎಂದು ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ.ಅನಿಲ್ ಕೊರಬು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಆರ್‌ಟಿ ಕೇಂದ್ರಗಳಲ್ಲಿ ಕೌನ್ಸೆಲರ್‌ಗಳನ್ನು ನಿಯೋಜಿಸಲಾಗಿದೆ. ಕೊಳೆಗೇರಿಗಳು ಹಾಗೂ ಅತಿ ಅಪಾಯದ ಪ್ರದೇಶಗಳೆಂದು ಗುರುತಿಸಿರುವ ಸ್ಥಳಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸೋಂಕಿತರಿಗೆ ಅಗತ್ಯವಿದ್ದಲ್ಲಿ ಕಾನೂನು ಸಲಹೆಯನ್ನೂ ನೀಡಲಾಗುತ್ತಿದೆ. ರಾಜೀವ್‌ ಗಾಂಧಿ ವಸತಿ ನಿಗಮದಿಂದ ಹೋದ ವರ್ಷ ತಾಲ್ಲೂಕಿನಲ್ಲಿ ತಲಾ ಇಬ್ಬರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಸ್ವಯಂ ಉದ್ಯೋಗ ಮಾಡಲು ಮುಂದಾಗುವವರಿಗೆ ಸಬ್ಸಿಡಿ ಯೋಜನೆಯಲ್ಲಿ ₹ 50ಸಾವಿರ ಸಾಲವನ್ನು ಬ್ಯಾಂಕ್‌ಗಳ ಮೂಲಕ ಕಲ್ಪಿಸಲಾಗುತ್ತಿದೆ. ಔಷಧಿಗಳಿಗೆ ಯಾವುದೇ ಕೊರತೆ ಇಲ್ಲ’ ಎಂದು ಮಾಹಿತಿ ನೀಡಿದರು.

‘ಎಚ್‌ಐವಿ/ಏಡ್ಸ್‌ ಸೋಂಕಿತರಲ್ಲಿ 389 ಮಂದಿಗೆ ಕೋವಿಡ್–19 ದೃಢಪಟ್ಟಿತ್ತು. ಅವರೆಲ್ಲರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಕೋವಿಡ್‌ನಿಂದಾಗಿ ಎಚ್‌ಐವಿ ಸೋಂಕಿತರಲ್ಲಿ ಒಬ್ಬರೂ ಸಾವಿಗೀಡಾಗಿಲ್ಲ. ಕೋವಿಡ್ ಕಾರಣದಿಂದ ಜಿಲ್ಲಾಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗ ಬಂದ್ ಆಗಿತ್ತು. ಇದರಿಂದ ಪರೀಕ್ಷಾ ಕಾರ್ಯಕ್ಕೆ ಹಿನ್ನಡೆಯಾಯಿತು’ ಎಂದು ಹೇಳಿದರು.

ಪ್ರಸ್ತುತ 1,399 ಸೋಂಕಿತ ಮಕ್ಕಳಿಗೆ ₹ 1ಸಾವಿರ ಮಾಸಾಶನವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಒದಗಿಸಲಾಗುತ್ತಿದೆ. ಪ್ರಸ್ತುತ ಸೋಂಕಿತರಲ್ಲಿ 25 ಗರ್ಭಿಣಿಯರಿದ್ದಾರೆ.

***

ಎಚ್.ಐ.ವಿ. ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸಿದರೆ ಅಂತಹ ಖಾಸಗಿ ಆಸ್ಪತ್ರೆಗಳ ಪರವಾನಗಿ ರದ್ದುಪಡಿಸಲಾಗುವುದು. ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವಂತೆ ಸೂಚಿಸಲಾಗಿದೆ
ಎಂ.ಜಿ. ಹಿರೇಮಠ
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.