
ಬೆಳಗಾವಿ/ಹಾಸನ/ಕಲಬುರಗಿ: ರಾಜ್ಯದ ಮೂರು ಜಿಲ್ಲೆಗಳಲ್ಲಿ ಮಂಗಳವಾರ ಜಿಲ್ಲಾ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ತಪಾಸಣೆ ಬಳಿಕ ಹುಸಿ ಎಂದು ದೃಢಪಟ್ಟಿದೆ.
ಆದರೆ, ಬೆದರಿಕೆ ಕರೆಯಿಂದಾಗಿ ಬೆಳಗಿನ ಹೊತ್ತು ಕಲಾಪ ವ್ಯತ್ಯಯವಾಗಿದ್ದು, ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೆಲ ದಿನಗಳ ಹಿಂದೆಯೂ ವಿವಿಧ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಬೆದರಿಕೆ ಕರೆ ಬಂದಿತ್ತು.
ಬೆಳಗಾವಿ ವರದಿ: ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಬಾಂಬ್ ಇಡಲಾಗಿದೆ ಎಂದು ಇ– ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿದ್ದು, ಮಧ್ಯಾಹ್ನದ ಎಲ್ಲ ಕಲಾಪ ತಕ್ಷಣ ಸ್ಥಗಿತಗೊಳಿಸಲಾಯಿತು.
ಎಲ್ಲ ಸಿಬ್ಬಂದಿಯನ್ನು ಹೊರಗೆ ಕಳುಹಿಸಿದ ಪೊಲೀಸರು ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ನೆರವಿನಲ್ಲಿ ಸುಮಾರು ಮೂರು ತಾಸು ಪರಿಶೀಲನೆ ನಡೆಸಿದರು.
‘ಸಿಬ್ಬಂದಿ ನ್ಯಾಯಾಲಯ ಆವರಣವನ್ನು ಪರಿಶೀಲಿಸಿದ್ದು, ಹುಸಿ ಎಂದು ಗೊತ್ತಾಗಿದೆ. ಈ ರೀತಿ ಹುಸಿ ಬೆದರಿಕೆ ಹಾಕಿದವರನ್ನು ಶೀಘ್ರವೇ ಬಂಧಿಸಲಾಗುವುದು’ ಎಂದು ಡಿಸಿಪಿ ನಾರಾಯಣ ಭರಮನಿ ತಿಳಿಸಿದರು.
‘ಆರ್‌ಡಿಎಕ್ಸ್ ಬಾಂಬ್ ಸ್ಫೋಟಿಸುವ ಬೆದರಿಕೆ’
ಹಾಸನ ವರದಿ: ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಮಂಗಳವಾರ 3ನೇ ಬಾರಿಗೆ ಬಾಂಬ್ ಬೆದರಿಕೆಯ ಇ–ಮೇಲ್ ಬಂದಿದ್ದು, ಪೊಲೀಸರ ತಪಾಸಣೆಯ ನಂತರ ಬೆದರಿಕೆ ಹುಸಿ ಎಂಬುದು ಗೊತ್ತಾಯಿತು.
ಬೆಳಿಗ್ಗೆ 5.40ಕ್ಕೆ ಕೋರ್ಟ್‌ನ ಅಧಿಕೃತ ಇ-ಮೇಲ್ ಐಡಿಗೆ ಸಂದೇಶ ಬಂದಿದ್ದು, ‘ಬೆಳಿಗ್ಗೆ 11.50ಕ್ಕೆ ಸೈನೈಡ್ ವಿಷಾನಿಲ ತುಂಬಿದ ಆರ್‌ಡಿಎಕ್ಸ್ ಬಾಂಬ್ ಸ್ಫೋಟಗೊಳ್ಳಲಿದೆ. ಬೆಳಿಗ್ಗೆ 11 ಗಂಟೆಯೊಳಗೆ ನ್ಯಾಯಾಧೀಶರು ಹಾಗೂ ನಾಗರಿಕರನ್ನು ಸ್ಥಳಾಂತರಿಸಬೇಕು’ ಎಂದು ಬೆದರಿಕೆ ಹಾಕಲಾಗಿತ್ತು.
ಭಯೋತ್ಪಾದನೆ, ಕಾನೂನು ಹಾಗೂ 26/11 ಮುಂಬೈ ದಾಳಿಯ ಸಂದರ್ಭದ ವಿಚಾರಗಳನ್ನು ಉಲ್ಲೇಖಿಸಿ, ಅಜ್ಮಲ್ ಕಸಬ್ ಹೆಸರನ್ನೂ ಪ್ರಸ್ತಾಪಿಸಲಾಗಿತ್ತು.
ಡಿಎಆರ್‌ನ ಡಿವೈಎಸ್ಪಿ ಪಾಲಾಕ್ಷ ನೇತೃತ್ವದಲ್ಲಿ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ತೀವ್ರ ಪರಿಶೀಲನೆ ನಡೆಸಿದರು. ಹುಸಿ ಎಂದು ಸಾಬೀತಾದ ಬಳಿಕ ಕೆಲಸಗಳನ್ನು ಪುನರಾರಂಭಿಸಲಾಯಿತು.
ಡಿ.15ರಂದು ಜಿಲ್ಲಾಧಿಕಾರಿ ಕಚೇರಿಯ ಇ-ಮೇಲ್‌ಗೆ, ಜನವರಿ 6 ಮತ್ತು ಫೆ.16 ರಂದು ಕೋರ್ಟ್‌ನ ಅಧಿಕೃತ ಇ-ಮೇಲ್ ಐಡಿಗೆ ಬೆದರಿಕೆ ಸಂದೇಶ ಬಂದಿತ್ತು. ಆಲೂರು ತಾಲ್ಲೂಕು ಕಚೇರಿಗೂ ಇಂಥದ್ದೇ ಇ–ಮೇಲ್ ಬಂದಿತ್ತು.
ಕಲಬುರಗಿ ಜಿಲ್ಲಾ ಕೋರ್ಟ್‌ಗೂ ಬೆದರಿಕೆ
ಕಲಬುರಗಿ: ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್ ಇಡಲಾಗಿದೆ ಎಂದು ಮಂಗಳವಾರ ಬೆದರಿಕೆ ಇ–ಮೇಲ್ ಬಂದಿದ್ದು, ಕೋರ್ಟ್ ಆವರಣದಲ್ಲಿ ಆತಂಕ ಆವರಿಸಿತ್ತು.
ಶ್ವಾನದಳ, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ, ವಿಧ್ವಂಸಕ ಕೃತ್ಯ ತಡೆ ತಂಡದ ನೆರವಿನಲ್ಲಿ ಪೊಲೀಸರು ಮೂರು ಗಂಟೆಗಳಿಗೂ ಅಧಿಕ ಕಾಲ ತಪಾಸಣೆ ನಡೆಸಿದರು.
ಬಳಿಕ ಅದು ಹುಸಿ ಬೆದರಿಕೆ ಎಂಬುದು ಗೊತ್ತಾಯಿತು. ಇದರಿಂದ ಕೋರ್ಟ್ ಕಲಾಪ ಅರ್ಧ ದಿನ ಸ್ಥಗಿತಗೊಂಡಿತು. ಮಧ್ಯಾಹ್ನ ಕಲಾಪಗಳು ನಡೆದರೂ ಕಕ್ಷಿದಾರರ ಕೊರತೆ ಕಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.