ADVERTISEMENT

ಚನ್ನಮ್ಮನ ಕಿತ್ತೂರು | ಮನೆಗಳ್ಳನ ಬಂಧನ: ಚಿನ್ನಾಭರಣ ವಶ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 2:12 IST
Last Updated 22 ಆಗಸ್ಟ್ 2025, 2:12 IST
ವಶಪಡಿಸಿಕೊಂಡ ಚಿನ್ನಾಭರಣದ ಜತೆ ಡಿವೈಎಸ್ ಪಿ ವೀರಯ್ಯ ಹಿರೇಮಠ, ಸಿಪಿಐ ಶಿವಾನಂದ ಗುಡಗನಟ್ಟಿ, ಎಸ್ಐ ಪ್ರವೀಣ ಗಂಗೋಳ ಮತ್ತು ಸಿಬ್ಬಂದಿ
ವಶಪಡಿಸಿಕೊಂಡ ಚಿನ್ನಾಭರಣದ ಜತೆ ಡಿವೈಎಸ್ ಪಿ ವೀರಯ್ಯ ಹಿರೇಮಠ, ಸಿಪಿಐ ಶಿವಾನಂದ ಗುಡಗನಟ್ಟಿ, ಎಸ್ಐ ಪ್ರವೀಣ ಗಂಗೋಳ ಮತ್ತು ಸಿಬ್ಬಂದಿ   

ಚನ್ನಮ್ಮನ ಕಿತ್ತೂರು: ಮನೆಬಾಗಿಲು ಮುರಿದು ಚಿನ್ನಾಭರಣ ದೋಚುತ್ತಿದ್ದ ಆರೋಪದ ಮೇಲೆ ಕುಖ್ಯಾತ ಕಳ್ಳನನ್ನು ಬಂಧಿಸಿರುವ ಚನ್ನಮ್ಮನ ಕಿತ್ತೂರು ಪೊಲೀಸರು ಆತನಿಂದ ಐದು ಕಡೆಗಳಲ್ಲಿ ಕಳ್ಳತನ ಮಾಡಿದ್ದ ₹20.30 ಲಕ್ಷ ಕಿಮ್ಮತ್ತಿನ 203 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ರುಕ್ಮಿಣಿ ನಗರದ ನಿತೇಶ ಉರ್ಫ್ ದೀಪು ಜಗನ್ನಾಥರಾವ್ ಢಾಪಳೆ (42) ಬಂಧಿತ ಆರೋಪಿ. ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

‘ಕಳೆದ ವರ್ಷ ಜುಲೈ ತಿಂಗಳಲ್ಲಿ ಇಲ್ಲಿನ ವಿದ್ಯಾಗಿರಿಯಲ್ಲಿರುವ ಕೀಲಿ ಹಾಕಿದ್ದ ಪ್ರವೀಣ ಇಟಗಿ ಅವರ ಹಿತ್ತಲಿನ ಬಾಗಿಲು ಮುರಿದು ನಗದು ಸೇರಿ ₹11.60 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ದೋಚಿಕೊಂಡು ಪರಾರಿಯಾಗಿದ್ದನು. ಈ ಪ್ರಕರಣದ ಬೆನ್ನು ಹತ್ತಿದ ಕಿತ್ತೂರು ಪೊಲೀಸರು, ಇದನ್ನು ಸೇರಿ ಕಿತ್ತೂರು ಠಾಣಾ ವ್ಯಾಪ್ತಿಯಲ್ಲಿಯ ಮೂರು ಪ್ರತ್ಯೇಕ ಪ್ರಕರಣ, ಬೈಲಹೊಂಗಲ ಮತ್ತು ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯ ತಲಾ ಒಂದು ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಡಿವೈಎಸ್ ಪಿ ವೀರಯ್ಯ ಹಿರೇಮಠ ಗುರುವಾರ ಪತ್ರಕರ್ತರಿಗೆ ತಿಳಿಸಿದರು.

ADVERTISEMENT

‘ಬಂಧಿತನ ಮೇಲೆ ಬೆಳಗಾವಿ ನಗರ, ಗದಗ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯದಲ್ಲಿಯೂ ಕಳ್ಳತನ ಆರೋಪದ ಪ್ರಕರಣಗಳಿವೆ’ ಎಂದು ಅವರು ಮಾಹಿತಿ ನೀಡಿದರು.

ಕಾರ್ಯಾಚರಣೆ ತಂಡದಲ್ಲಿ ಸಿಪಿಐ ಶಿವಾನಂದ ಗುಡಗನಟ್ಟಿ, ಎಸ್ಐ ಪ್ರವೀಣ ಗಂಗೋಳ, ಎಎಸ್ಐ ಎಂ. ಬಿ. ವಸ್ತ್ರದ, ಅಪರಾಧ ವಿಭಾಗದ ಸಿಬ್ಬಂದಿಗಳಾದ ಎಸ್. ಎ. ದಪೇದಾರ, ಎನ್. ಆರ್. ಗಳಗಿ, ಎ. ಎಂ. ಚಿಕ್ಕೇರಿ, ಎಸ್. ಎಂ. ಪೆಂಟೇದ, ಆರ್. ಎಸ್. ಶೀಲಿ, ಎಸ್. ಬಿ. ಹುಣಶೀಕಟ್ಟಿ, ಎಸ್. ಆರ್. ಪಾಟೀಲ, ರಾಜು ಗೌರಕ್ಕನವರ, ಎಂ. ಸಿ. ಇಟಗಿ, ಟೆಕ್ನಿಕಲ್ ಸೆಲ್ ವಿಭಾಗದ ವಿನೋದ ಠಕ್ಕಣ್ಣವರ ಸಚಿನ್ ಪಾಟೀಲ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.