ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಮಾಜಿ ಸಂಸದ ರಮೇಶ ಕತ್ತಿ, ಅಭ್ಯರ್ಥಿ ವಿನಯಗೌಡ ಪಾಟೀಲ (ಮಾಜಿ ಸಚಿವ ಎ.ಬಿ.ಪಾಟೀಲ ಪುತ್ರ) ಹಾಗೂ ಇತರ ನಿರ್ದೇಶಕರು ಸಂಭ್ರಮಾಚರಣೆಯಲ್ಲಿ ತೊಡಗಿದರು
ಹುಕ್ಕೇರಿ (ಬೆಳಗಾವಿ): ಇಲ್ಲಿನ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಎಲ್ಲ 15 ಸ್ಥಾನಗಳನ್ನೂ ರಮೇಶ ಕತ್ತಿ ಹಾಗೂ ಶಾಸಕ ನಿಖಿಲ್ ಕತ್ತಿ ನೇತೃತ್ವದ ಪ್ಯಾನಲ್ ಗೆದ್ದುಕೊಂಡಿದೆ. ಒಂದು ತಿಂಗಳಿಂದ ಹುಕ್ಕೇರಿಯಲ್ಲೇ ಬೀಡುಬಿಟ್ಟಿದ್ದ ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಪ್ರಯತ್ನಕ್ಕೆ ತೀವ್ರ ಮುಖಭಂಗ ಉಂಟಾಗಿದೆ.
ಭಾನುವಾರ ನಡೆದ ಚುನಾವಣೆ ವೇಳೆ ಶೇ 67.54ರಷ್ಟು ಮತದಾನವಾಗಿದ್ದು, ಸೋಮವಾರ ನಸುಕಿನ 3 ಗಂಟೆಯವರೆಗೂ ಮತ ಎಣಿಕೆ ನಡೆಯಿತು. ಒಂದೊಂದೇ ಕ್ಷೇತ್ರದ ವಿಜೇತರ ಹೆಸರನ್ನು ಹೇಳುತ್ತಿದ್ದಂತೆಯೇ ಕತ್ತಿ ಕುಟುಂಬದ ಬೆಂಬಲಿಗರು ಇನ್ನಿಲ್ಲದ ಉತ್ಸಾಹದಿಂದ ಚೀರಾಟ, ಕುಣಿದಾಟ ನಡೆಸಿದರು. ಬೆಳಿಗ್ಗೆ 6ರ ಹೊತ್ತಿಗೆ ಫಲಿತಾಂಶ ಪೂರ್ಣ ಪ್ರಕಟಿಸಲಾಯಿತು.
ಆರಂಭದಲ್ಲಿ ಮೀಸಲಾತಿ ಕ್ಷೇತ್ರಗಳಾದ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ ಹಾಗೂ ಮಹಿಳಾ ಮೀಸಲು ಸ್ಥಾನಗಳ ಫಲಿತಾಂಶಗಳು ಹೊರಬಿದ್ದವು. ನಂತರ ಸಾಮಾನ್ಯ ಕ್ಷೇತ್ರದಲ್ಲೂ ಎಲ್ಲರೂ ರಮೇಶ ಕತ್ತಿ ಗುಂಪಿನವರೇ ನಿರ್ದೇಶಕ ಸ್ಥಾನಗಳನ್ನು ಪಡೆದರು.
ಸಚಿವ ಸತೀಶ, ಶಾಸಕ ಬಾಲಚಂದ್ರ ಸೇರಿ ಹಲವು ಬೆಂಬಲಿಗರೂ ತಡರಾತ್ರಿಯವರೆಗೂ ಮತ ಎಣಿಕೆ ಕೇಂದ್ರದ ಬಳಿಯೇ ಇದ್ದರು. ಆದರೆ, ಮೀಸಲು ಕ್ಷೇತ್ರಗಳಲ್ಲಿ ಅವರ ಪ್ಯಾನಲ್‌ಗೆ ಸೋಲು ಉಂಟಾದಾಗ ಒಬ್ಬೊಬ್ಬರಾಗಿ ಸ್ಥಳಿದಿಂದ ತೆರಳಿದರು.
9 ಸ್ಥಾನಗಳನ್ನು ಗೆಲ್ಲುತ್ತಿದ್ದಂತೆಯೇ ರಮೇಶ ಕತ್ತಿ ಗುಂಪಿನ ಬೆಂಬಲಿಗರು ವಿಜಯೋತ್ಸವ ಆರಂಭಿಸಿದರು. ಎಲ್ಲೆಡೆ ಜನಸಾಗರ ಸೇರಿತ್ತು. ಸಿಳ್ಳೆ, ಕೂಗಾಟ, ಜೈಕಾರಗಳು ಮುಗಿಲು ಮುಟ್ಟಿದವು.
ಲವ ರಮೇಶ ಕತ್ತಿ (ಬೆಲ್ಲದ ಬಾಗೇವಾಡಿ ಕ್ಷೇತ್ರ– ರಮೇಶ ಕತ್ತಿ ಅವರ ಪುತ್ರ), ಕಲಗೌಡ ಬಸಗೌಡ ಪಾಟೀಲ (ಯಲ್ಲಾಪುರ), ವಿನಯ ಅಪ್ಪಯ್ಯಗೌಡ ಪಾಟೀಲ (ಅಮ್ಮಿನಬಾವಿ), ಶಿವಾನಂದ ಶಿವಪುತ್ರ ಮುಡಶಿ (ಸಂಕೇಶ್ವರ), ಮಹಾವೀರ ವಸಂತ ನಿಲಜಗಿ (ಹುಕ್ಕೇರಿ), ಶಿವನಗೌಡ ಸತ್ಯಪ್ಪ ಮದವಾಲ (ಸುಲ್ತಾನಪೂರ), ಲಕ್ಷ್ಮಣ ಬಸವರಾಜ ಮುನ್ನೋಳಿ (ಹೆಬ್ಬಾಳ), ಕೆಂಪಣ್ಣ ಸಾತಪ್ಪ ವಾಸೇದಾರ (ಹಂಚ್ಯಾನಟ್ಟಿ), ಮಹಾದೇವ ಬಾಬು ಕ್ಷೀರಸಾಗರ (ಸೊಲ್ಲಾಪುರ), ಮೆಹಬೂಬಿ ಗೌಸ್‌ಅಜಂ ನಾಯಿಕವಾಡಿ (ಮಹಿಳಾ ಮೀಸಲು– ಹುಕ್ಕೇರಿ), ಮಂಗಲಾ ಗುರುಸಿದ್ದಪ್ಪ ಮೂಡಲಗಿ ( ಮಹಿಳಾ ಮೀಸಲು– ಶಿಂಧಿಹಟ್ಟಿ), ಗಜಾನನ ನಿಂಗಪ್ಪ ಕ್ವಳ್ಳಿ (ಹಿಂದುಳಿದ ವರ್ಗ ಅ ಮೀಸಲು– ಸಂಕೇಶ್ವರ), ಸತ್ಯಪ್ಪ ಭರಮಣ್ಣ ನಾಯಿಕ (ಹಿಂದುಳಿದ ವರ್ಗ ಬ ಮೀಸಲು– ಬೆಳವಿ), ಶ್ರೀಮಂತ ಗಂಗಪ್ಪ ಸನ್ನಾಯಿಕ (ಪರಿಶಿಷ್ಟ ಜಾತಿ ಮೀಸಲು– ಕಣಗಲಾ), ಬಸವಣ್ಣಿ ಸಣ್ಣಪ್ಪ ಲಂಕೆಪ್ಪಗೋಳ (ಪರಿಶಿಷ್ಟ ಪಂಗಡ ಮೀಸಲು– ಗುಟಗುದ್ದಿ).
ಫಲಿತಾಂಶ ಬಳಿಕ ಗುಂಪಾಗಿ ಸೇರಿ ಕುಣಿದಾಡಿದ ಕತ್ತಿ ಕುಟುಂಬದ ಬೆಂಗಲಿಗರು ತೀವ್ರ ಚೀರಾಟ, ಕೂಗಾಟ ಶುರು ಮಾಡಿದರು. ಜನಸಂದಣಿಯಿಂದ ದಾಟುತ್ತಿದ್ದ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಸೇರಿದ ಕಾರನ್ನು ಕೈಯಿಂದ ಗುದ್ದಿದರು. ಆಚೆಯಿಂದ ಕಲ್ಲೊಂದು ತೂರಿಬಂದು ಪಕ್ಕದಲ್ಲಿ ಬಿದ್ದಿತು. ಆಗ ಪೊಲೀಸರು ಜನರನ್ನು ಚದುರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.