ಹುಕ್ಕೇರಿ: ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷರಾಗಿ ಮಹಾವೀರ ನಿಲಜಗಿ ಮತ್ತು ಉಪಾಧ್ಯಕ್ಷರಾಗಿ ಲಕ್ಷ್ಮಣ ಮುನ್ನೋಳಿ ಅವಿರೋಧವಾಗಿ ಆಯ್ಕೆಯಾದರು.
ಸಂಘದ 15 ನಿರ್ದೇಶಕರ ಸ್ಥಾನಗಳಿಗೆ ಸೆ.28ರಂದು ಚುನಾವಣೆ ನಡೆದಿತ್ತು. ಜಿದ್ದಾಜಿದ್ದಿಯಿಂದ ಕೂಡಿದ್ದ ಚುನಾವಣೆಯಲ್ಲಿ ಮಾಜಿ ಸಂಸದ ರಮೇಶ ಕತ್ತಿ ಗುಂಪು 15 ಸ್ಥಾನಗಳಲ್ಲೂ ಗೆದ್ದು ಬೀಗಿತ್ತು.
ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. ಎರಡೂ ಸ್ಥಾನಗಳಿಗೆ ಒಂದೊಂದೇ ನಾಮಪತ್ರ ಸಲ್ಲಿಕೆಯಾದ ಕಾರಣ, ಹುಕ್ಕೇರಿಯ ಮಹಾವೀರ ನಿಲಜಗಿ ಅಧ್ಯಕ್ಷರಾಗಿ ಮತ್ತು ಹೆಬ್ಬಾಳದ ಲಕ್ಷ್ಮಣ ಮುನ್ನೋಳಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸುಭಾಷ ಸಂಪಗಾವಿ ಘೋಷಿಸಿದರು.
ಮಾಜಿ ಸಚಿವ ಎ.ಬಿ.ಪಾಟೀಲ ಅವರ ಪುತ್ರ ವಿನಯಗೌಡ ಮತ್ತು ರಮೇಶ ಕತ್ತಿ ಅವರ ಪುತ್ರ ಪೃಥ್ವಿ ಅವರು, ಸಂಘದ ಅಧ್ಯಕ್ಷರಾಗಬಹುದು ಎಂಬ ಮಾತು ಹರಿದಾಡುತ್ತಿತ್ತು. ಆದರೆ, ರಮೇಶ ಕತ್ತಿಯವರು ಅನಿರೀಕ್ಷಿತ ವ್ಯಕ್ತಿಗಳನ್ನು ಆಯ್ಕೆ ಮಾಡಿ ‘ನಾವು ಎಲ್ಲರ ಪರವಾಗಿ ಇದ್ದೇವೆ’ ಎಂಬ ಸಂದೇಶ ಸಾರಿದರು.
ಚುನಾವಣೆ ಸಮಯಕ್ಕೂ ಮುನ್ನ ಹುಕ್ಕೇರಿಗೆ ಆಗಮಿಸಿದ ರಮೇಶ ಕತ್ತಿ, ಎಲ್ಲ ನಿರ್ದೇಶಕರ ಜತೆಗೆ ಮಾತನಾಡಿ ಮಾರ್ಗದರ್ಶನ ಮಾಡಿ ಹೊರಟರು.
ನಂತರ ಪೃಥ್ವಿ ಕತ್ತಿ, ವಿನಯಗೌಡ ಪಾಟೀಲ, ಮಹಾವೀರ ನಿಲಜಗಿ ಮತ್ತು ಲಕ್ಷ್ಮಣ ಮುನ್ನೋಳಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕೆಲಸ ಮಾಡಿ, ಸಂಘಕ್ಕೆ ಒಳ್ಳೆಯ ಹೆಸರು ತರುತ್ತೇವೆ’ ಎಂದರು.
‘1,500 ತೋಟಪಟ್ಟಿ ಮನೆಗಳಿಗೆ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ನೀಡಲಾಗುವುದು’ ಎಂದು ಪೃಥ್ವಿ ಭರವಸೆ ನೀಡಿದರು.
ನಿರ್ದೇಶಕರಾದ ಕಲಗೌಡ ಪಾಟೀಲ, ವಿಜಯ ಪಾಟೀಲ, ನಂದು ಮುಡಸಿ, ಶಿವನಗೌಡ ಮದವಾಲ, ಕೆಂಪಣ್ಣ ವಾಸೇದಾರ, ಮಹಾದೇವ ಕ್ಷೀರಸಾಗರ, ಮಹಬೂಬಿ ಗೌಸ್‌ಆಜಂ ನಾಯಿಕವಾಡಿ, ಮಂಗಲ ಮೂಡಲಗಿ, ಗಜಾನನ ಕ್ವಳ್ಳಿ, ಸತ್ಯಪ್ಪ ನಾಯಿಕ, ಶ್ರೀಮಂತ ಸನ್ನಾಯಿಕ, ಬಸವಣ್ಣಿ ಲಂಕೆಪ್ಪಗೋಳ, ಸೋಮಲಿಂಗ ಪಾಟೀಲ, ಮುಖಂಡರಾದ ಬಸವರಾಜ ಹುಂದ್ರಿ, ಗುರು ಕುಲಕರ್ಣಿ, ಶಿವನಗೌಡ ಪಾಟೀಲ, ಸಾತಪ್ಪ ಕರ್ಕಿನಾಯಿಕ, ಚನ್ನಪ್ಪ ಗಜಬರ, ಶಹಜಹಾನ್ ಬಡಗಾಂವಿ, ರಾಜು ಮುನ್ನೋಳಿ, ರೀಡ್ಸ್ ಅಧ್ಯಕ್ಷ ಅಶೋಕ ಪಾಟೀಲ, ಪಿಕಾರ್ಟ್ ಬ್ಯಾಂಕ್ ಅಧ್ಯಕ್ಷ ದುರದುಂಡಿ ಪಾಟೀಲ, ಮಾಜಿ ಅಧ್ಯಕ್ಷ ಬಾಬಾಸಾಹೇಬ ಪಾಟೀಲ, ನಿರ್ದೇಶಕ ರಾಚಯ್ಯ ಹಿರೇಮಠ, ಶೀತಲ್ ಬ್ಯಾಳಿ, ಶ್ರೀಶೈಲ ಯಮಕನಮರಡಿ, ಗುರುಸಿದ್ಧ ಪಾಯನ್ನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.