ADVERTISEMENT

ಹುಕ್ಕೇರಿ | ಶೇ 67.54 ಮತದಾನ; ಫಲಿತಾಂಶಕ್ಕೆ ಕಾತರ

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣೆ ಶಾಂತ, ಬಿಗಿ ಪೊಲೀಸ್‌ ಬಂದೋಬಸ್ತ್‌

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 4:46 IST
Last Updated 29 ಸೆಪ್ಟೆಂಬರ್ 2025, 4:46 IST
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಕ್ಕೆ ಭಾನುವಾರ ಜರುಗಿದ ಚುನಾವಣೆಯಲ್ಲಿ ಮತದಾರರು ಪಾಳೆಯದಲ್ಲಿ ನಿಂತು ಮತ ಚಲಾಯಿಸಿದರು
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಕ್ಕೆ ಭಾನುವಾರ ಜರುಗಿದ ಚುನಾವಣೆಯಲ್ಲಿ ಮತದಾರರು ಪಾಳೆಯದಲ್ಲಿ ನಿಂತು ಮತ ಚಲಾಯಿಸಿದರು   

ಹುಕ್ಕೇರಿ: ಇಲ್ಲಿನ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘಕ್ಕೆ ಭಾನುವಾರ ನಡೆದ ಚುನಾವಣೆ ವೇಳೆ ಶೇ 67.54ರಷ್ಟು ಮತದಾನವಾಗಿದೆ. ರಮೇಶ ಕತ್ತಿ ಹಾಗೂ ಸತೀಶ ಜಾರಕಿಹೊಳಿ ಬೆಂಬಲಿಗರ ಮಧ್ಯೆ ಅಲ್ಲಲ್ಲಿ ಮಾತಿನ ಚಕಮಕಿ ನಡೆದಿದೆ. ಮತ್ತೆ ಕೆಲವರು ಕೈಕೈ ಮಿಲಾಯಿಸಿದ್ದು ಬಿಟ್ಟರೆ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಮತ ಎಣಿಕೆ ರಾತ್ರಿ ಪ್ರಾರಂಭವಾಗಿ ಸೆ.29 ರಂದು ಬೆಳಿಗ್ಗೆ ಸಿಗುವ ನಿರೀಕ್ಷಯಿದೆ.

ಈ ಬಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸೇರಿಕೊಂಡು ಪಳಗಿದ ರಾಜಕಾರಣಿ ರಮೇಶ ಕತ್ತಿ ಅವರ ವಿರುದ್ಧ ನಿಂತಿದ್ದಾರೆ. ಇದರ ಪರಿಣಾಮ ಸಹಕಾರ ಸಂಘದ ಚುನಾವಣೆ ಇಷ್ಟೆಲ್ಲ ವರ್ಷಗಳಿಗಿಂತಲೂ ಈಗ ಹೆಚ್ಚು ರೋಚಕತೆ ಪಡೆದಿದೆ.

ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 4ರವರೆಗೆ ಎರಡೂ ಬಣದ ಪ್ರಮುಖರ ಉಪಸ್ಥಿತಿಯಲ್ಲಿ ಮತದಾನ ಜರುಗಿತು. ಒಟ್ಟು 60,046 ಸದಸ್ಯರ ಪೈಕಿ 41,050 ಜನರು ಮತ ಚಲಾಯಿಸಿದ್ದಾರೆ ಎಂದು ಚುನಾವಣಾಧಿಕಾರಿ ಸುಭಾಷ ಸಂಪಗಾಂವಿ ತಿಳಿಸಿದರು.

ADVERTISEMENT

ಪಟ್ಟಣದ ಹಿರೇಮಠದ ಚಂದ್ರಶೇಖರ ಶಿವಚಾರ್ಯ ಸ್ವಾಮೀಜಿ, ವಿರಕ್ತಮಠದ ಶಿವಬಸವ ಸ್ವಾಮೀಜಿ, ಶಾಸಕ ನಿಖಿಲ್ ಕತ್ತಿ, ಮಾಜಿ ಸಂಸದ ರಮೇಶ ಕತ್ತಿ, ಪ್ರಥ್ವಿ ಕತ್ತಿ, ಪವನ್ ಕತ್ತಿ ಸೇರಿದಂತೆ ಪಟ್ಟಣದ ಬಹುತೇಕ ಗಣ್ಯರು ಮತ ಚಲಾಯಿಸಿದರು.

ಪ್ರಾರಂಭದಲ್ಲಿ ಮತದಾರರಿಗೆ ಗುರುತಿನ ಚೀಟಿ ಹಂಚುವಾಗ, ರಮೇಶ ಕತ್ತಿ ಮತ್ತು ಮುಖಂಡ ಪ್ರದೀಪ ನಡುವೆ ಭಿನ್ನಾಭಿಪ್ರಾಯ ಉಂಟಾಯಿತು. ತಕ್ಷಣ ಪರಿಸ್ಥಿತಿ ಅರಿತ ಸಿಪಿಐ ಎಚ್.ಡಿ.ಮುಲ್ಲಾ ಇಬ್ಬರನ್ನು ಸಮಾಧಾನಗೊಳಿಸಿ ಪರಿಸ್ಥಿತಿ ತಿಳಿಯಾಗಿಸಿದರು.

ಗರಂ ಆದ ಶಾಸಕ: ಬಾಪೂಜಿ ಸ್ಕೂಲಿನಲ್ಲಿ ತೆರೆದ ಮತದಾನ ಕೇಂದ್ರದಲ್ಲಿ ಎರಡು ಬಣದ (ಮತದಾರ ಅಲ್ಲ) ಎಂಬ ಕಾರಣಕ್ಕೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಗೊಂದಲವುಂಟಾದಾಗ, ಏತನ್ಮಧ್ಯೆ ಶಾಸಕ ನಿಖಿಲ್ ಕತ್ತಿ ಪ್ರವೇಶಿಸಿ ಗರಂ ಆದರು ಎಂದು ಹತ್ತಿರದಲ್ಲಿದ್ದವರು ತಿಳಿಸಿದರು.

ನಾಲ್ಕು ಗಂಟೆ ಮುಗಿಯುತ್ತಿದ್ದಂತೆ ಕೆಲವೊಂದು ಮತಗಟ್ಟೆಯ ಹೊರಗಡೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ನಿಂತಿರುವುದನ್ನು ಗಮನಿಸಿದ ಪಿಆರ್‌ಒಗಳು ಕೊನೆಯ ವ್ಯಕ್ತಿಯಿಂದ ಚೀಟಿ ನೀಡಿ ಮತದಾನಕ್ಕೆ ಅನುವು ಮಾಡಿಕೊಟ್ಟರು. ಸಂಜೆ 5.30 ಗಂಟೆವರೆಗೆ ಮತದಾನ ಜರುಗಿತು.

ಸಚಿವರ ಮೇಲ್ವಿಚಾರಣೆ: ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತದಾನ ಕೇಂದ್ರದ ಆವರಣದಲ್ಲಿ ಸುತ್ತಾಡಿ ವ್ಯವಸ್ಥೆ ವೀಕ್ಷಿಸಿ ಸಲಹೆ– ಸೂಚನೆ ನೀಡಿದರು. ಇಡೀ ಪಟ್ಟಣ ಭಾನುವಾರ ವಾಹನಗಳಿಂದ ಮತ್ತು ಜನರಿಂದ ತುಂಬಿ ತುಳುಕಿತು.

ಎರಡೂ ಬಣಗಳು ಬಲಾಢ್ಯವಾಗಿದ್ದರಿಂದ ಪಟ್ಟಣದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಪಟ್ಟಣದಲ್ಲಿ ಠಿಕಾಣಿ ಹೂಡಿದರು.

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘಕ್ಕೆ ಭಾನುವಾರ ಜರುಗಿದ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತದಾನ ಕೇಂದ್ರದ ಆವರಣದಲ್ಲಿ ಪ್ರಕ್ರಿಯೆ ವೀಕ್ಷಿಸಿದರು
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಕ್ಕೆ ಭಾನುವಾರ ಜರುಗಿದ ಚುನಾವಣೆಯಲ್ಲಿ ಅಭ್ಯರ್ಥಿ ಪ್ರಥ್ವಿ ಕತ್ತಿ (ರಮೇಶ ಕತ್ತಿ ಪುತ್ರ) ಮತದಾನ ಕೇಂದ್ರದ ಆವರಣದಲ್ಲಿ ಪ್ರಕ್ರಿಯೆ ವೀಕ್ಷಿಸಿದರು

ರಮೇಶ ಕತ್ತಿ ಎದುರು ಮಾತಾಡಿದ ವಿರೋಧಿ ಗುಂಪಿನವರು ಜಾರಕಿಹೊಳಿ ಬೆಂಬಲಿಗರ ಮೇಲೆ ಗರಂ ಆದ ಶಾಸಕ ನಿಖಿಲ್‌ ಪಟ್ಟಣದಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್‌

ಸಹಕಾರ ಸಂಘದಲ್ಲಿ ರಾಜಕೀಯ ಜಿದ್ದಾಜಿದ್ದಿ
ದೇಶದಲ್ಲೇ ಅತ್ಯಂತ ವಿಶಿಷ್ಟವಾದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದಲ್ಲಿ ಈ ಬಾರಿ ರಾಜಕೀಯ ಜಿದ್ದಾಜಿದ್ದಿ ಹೆಚ್ಚಾಗಿದೆ. ಹಲವು ವರ್ಷಗಳಿಂದ ರಮೇಶ ಕತ್ತಿ ಹಾಗೂ ಅವರ ಕುಟುಂಬದ ನೇತೃತ್ವದಲ್ಲೇ ನಡೆಯುತ್ತಿದ್ದ ಈ ಸಂಘಕ್ಕೆ ಇದೇ ಮೊದಲ ಬಾರಿಗೆ ಜಾರಕಿಹೊಳಿ ಹಾಗೂ ಜೊಲ್ಲೆ ಕುಟುಂಬದವರು ಪ್ರವೇಶ ಕೊಟ್ಟಿದ್ದಾರೆ. ಬಿಡಿಸಿಸಿ ಬ್ಯಾಂಕಿನಲ್ಲಿ ಭುಗಿಲೆದ್ದ ಈ ಮೇಲಾಟ ಸಹಾಕರ ಸಂಘಕ್ಕೂ ವ್ಯಾಪಿಸಿದೆ. ಕಳೆದೊಂದು ತಿಂಗಳಿಂದ ಸಚಿವ ಸತೀಶ ಜಾರಕಿಹೊಳಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹುಕ್ಕೇರಿ ತಾಲ್ಲೂಕಿನಲ್ಲೇ ಠಿಕಾಣೆ ಹೂಡಿದ್ದಾರೆ. ತಾವ್ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಸೆಡ್ಡು ಹೊಡೆದ ಮಾಜಿ ಸಂಸದ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರೂ ಆದ ರಮೇಶ ಕತ್ತಿ ಶಾಸಕ ನಿಖಿಲ್‌ ಕತ್ತಿ ಸೇರಿದಂತೆ ಇಡೀ ಕತ್ತಿ ಪರಿವಾರವೂ ಇದಕ್ಕೆ ಸನ್ನದ್ಧವಾಗಿದೆ. ಅಷ್ಟರಮಟ್ಟಿಗೆ ಬಿಡಿಸಿಸಿ ಚುನಾವಣೆ ಹಾಗೂ ವಿದ್ಯುತ್ ಸಂಘದ ಚುನಾವಣೆಗಳೂ ರಾಜ್ಯದ ಗಮನ ಸೆಳೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.